ನವದೆಹಲಿ: ಜಗತ್ತಿನಾದ್ಯಂತ ಪುರುಷ ಬಂಜೆತನವು ಹೆಚ್ಚುತ್ತಿರುವ ಕಳವಳಕಾರಿ ವಾಸ್ತವಾಂಶವನ್ನು ಒಪ್ಪಿಕೊಳ್ಳುವಂತೆ ಸರ್ಕಾರಗಳು ಮತ್ತು ಆರೋಗ್ಯ ವ್ಯವಸ್ಥೆ ಸಂಸ್ಥೆಗಳಿಗೆ ವಿಶ್ವದಾದ್ಯಂತದ ತಜ್ಞರು ಸಲಹೆ ಮಾಡಿದ್ದಾರೆ.
ಪುರುಷ ಬಂಜೆತನ ಗಂಭೀರ ಸಮಸ್ಯೆಯನ್ನು ನಿವಾರಿಸಲು ತಜ್ಞರು ಇದೇ ಮೊದಲ ಬಾರಿಗೆ ತುರ್ತು ಕ್ರಮಗಳನ್ನು ಕೂಡ ಶಿಫಾರಸು ಮಾಡಿದ್ದಾರೆ. ಈ ಸಂಬಂಧದ ವರದಿಯೊಂದು “ನೇಚರ್ ರಿವ್ಯೂಸ್ ಯುರಾಲಜಿ’ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಆಸ್ಟ್ರೆಲಿಯಾದ ಮೆಲ್ಬೋರ್ನ್ ವಿಶ್ವವಿದ್ಯಾಲಯದ ನೇತೃತ್ವದ ವಿಜ್ಞಾನಿಗಳ ತಂಡ ವರದಿಯನ್ನು ಸಿದ್ಧಪಡಿಸಿದೆ.
ಅರ್ಥಪೂರ್ಣ ರೋಗನಿದಾನ (ಡಯಾಗ್ನೊಸಿಸ್) ಮತ್ತು ಟಾರ್ಗೆಟೆಡ್ ಚಿಕಿತ್ಸೆಗಳನ್ನು ಪಡೆಯುವುದು ರೋಗಿಗಳ ಹಕ್ಕಾಗಿದೆ. ಆದರೆ, ಹಣಕಾಸಿನ ಕೊರತೆ, ಸಂಶೋಧನಾ ಅಂತರ ಮತ್ತು ಪ್ರಮಾಣಿತವಲ್ಲದ ಕ್ಲಿನಿಕಲ್ ಕಾರ್ಯಗಳಿಂದಾಗಿ ಬಹುತೇಕ ಪ್ರಕರಣಗಳಲ್ಲಿ ಅವು ಲಭ್ಯವಾಗುತ್ತಿಲ್ಲ ಎಂದು ವರದಿ ಎತ್ತಿ ಹಿಡಿದಿದೆ.
ಕೋಶ ಬ್ಯಾಂಕ್ ಅಗತ್ಯ
ಪುರುಷರು ಮತ್ತು ಅವರ ಬಾಳಸಂಗಾತಿಗಳ ಕೋಶಗಳು ಮತ್ತು ಕ್ಲಿನಿಕಲ್ ದತ್ತಾಂಶಗಳ ಒಂದು ಜಾಗತಿಕ “ಬಯೋಬ್ಯಾಂಕ್’ ಸ್ಥಾಪಿಸುವ ಅಗತ್ಯವನ್ನು ವರದಿ ಪ್ರತಿಪಾದಿಸಿದೆ. ಇತ್ತೀಚಿನ ದಶಕಗಳಲ್ಲಿ ಪುರುಷರಲ್ಲಿನ ಸಂತಾನೋತ್ಪತ್ತಿ ಆರೋಗ್ಯ ಕುಸಿಯುತ್ತಿರುವುದಕ್ಕೆ ಆಸ್ಟ್ರೆಲಿಯಾ ಮತ್ತು ವಿಶ್ವದಾದ್ಯಂತದ ಪುರಾವೆಗಳು ಸೂಚಿಸುತ್ತವೆ ಎಂದು ಅಧ್ಯಯನ ವರದಿ ಹೇಳಿದೆ.