More

    ಮಲೇರಿಯಾ ಏರಿಕೆ, ಡೆಂಘೆ ಇಳಿಕೆ

    ಉಡುಪಿ: ಕೋವಿಡ್ ವಿಷಮ ಪರಿಸ್ಥಿತಿಯಲ್ಲಿ ನಗರ ವ್ಯಾಪ್ತಿಯಲ್ಲಿ ವಿವಿಧೆಡೆ ಮಲೇರಿಯಾ ಹಾಗೂ ಡೆಂಘೆ ರೋಗ ವಿಪರೀತವಾಗಿ ಹರಡುತ್ತಿದ್ದು, ಸೆಪ್ಟೆಂಬರ್ ಒಂದೇ ತಿಂಗಳಲ್ಲಿ 59 ಮಲೇರಿಯಾ ಪ್ರಕರಣ ದಾಖಲಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಕಳೆದ 20 ದಿನಗಳಿಂದ ಸಿಟಿ ಬಸ್ ನಿಲ್ದಾಣ, ರಥಬೀದಿ ಸೇರಿ ನಗರದಾದ್ಯಂತ ವಸಿಗರು ಮತ್ತು ಕಾರ್ಮಿಕರ ರ‌್ಯಾಂಡಮ್ ರಕ್ತ ಪರೀಕ್ಷೆ ಮಡೆಸುತ್ತಿದೆ.

    ಉಡುಪಿ ನಗರದಲ್ಲಿ 78, ಗ್ರಾಮೀಣ ಭಾಗದಲ್ಲಿ 13, ಕುಂದಾಪುರದಲ್ಲಿ 1, ಕಾರ್ಕಳದಲ್ಲಿ 3 ಪ್ರಕರಣ ಸೇರಿ ಈ ವರ್ಷ ಒಟ್ಟು 95 ಮಲೇರಿಯಾ ಪ್ರಕರಣ ವರದಿಯಾಗಿದೆ. ಜನವರಿಯಿಂದ ಆಗಸ್ಟ್‌ವರೆಗೆ 36 ಮಂದಿ ಮಾತ್ರ ಮಲೇರಿಯಾ ಬಾಧಿತರಾಗಿದ್ದರು. ಆದರೆ ಕಳೆದ ತಿಂಗಳು ಈ ಸಂಖ್ಯೆ ದುಪ್ಪಟ್ಟು ಏರಿಕೆಯಾಗಿದೆ. ಹೀಗಾಗಿ ಸೋಂಕು ತೀವ್ರಗತಿಯಲ್ಲಿ ಹರಡದಂತೆ ಆರೋಗ್ಯ ಕಾರ್ಯಕರ್ತರು ಬೆಳಗ್ಗಿನ ಜಾವ ಸಾಮೂಹಿಕ ತಪಾಸಣೆಗೆ ಮುಂದಾಗಿದ್ದಾರೆ.

    ಡೆಂಘೆ ಇಳಿಮುಖ: ಜಿಲ್ಲೆಯಲ್ಲಿ ಜನವರಿಯಿಂದ ಜೂನ್‌ವರೆಗೆ 98 ಡೆಂಘೆ ಪ್ರಕರಣ ದಾಖಲಾಗಿದ್ದು, ಜುಲೈನಲ್ಲಿ ಅತೀ ಹೆಚ್ಚು 39 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ ಆಗಸ್ಟ್‌ನಲ್ಲಿ 5 ಮತ್ತು ಸೆಪ್ಟೆಂಬರ್‌ನಲ್ಲಿ 1 ಪ್ರಕರಣ ಮಾತ್ರ ವರದಿಯಾಗಿದ್ದು, ಡೆಂಘೆ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಉಡುಪಿ ನಗರ ಪ್ರದೇಶದಲ್ಲಿ 20, ಗ್ರಾಮೀಣ ಭಾಗದಲ್ಲಿ 59, ಕುಂದಾಪುರದಲ್ಲಿ 26, ಕಾರ್ಕಳದಲ್ಲಿ 32 ಸೇರಿ ಒಟ್ಟು 137 ಕೇಸ್ ದಾಖಲಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಅತೀ ಹೆಚ್ಚು 226 ಡೆಂೆ ಪ್ರಕರಣ ವರದಿಯಾಗಿತ್ತು.

    ಹತೋಟಿಯಲ್ಲಿ ಚಿಕನ್‌ಗೂನ್ಯ: ಜಿಲ್ಲೆಯಲ್ಲಿ ಚಿಕನ್‌ಗೂನ್ಯ ಹತೋಟಿಯಲ್ಲಿದೆ. ಜನವರಿಯಿಂದ ಏಪ್ರಿಲ್‌ವರೆಗೆ ಉಡುಪಿ ನಗರ ಪ್ರದೇಶದಲ್ಲಿ 2, ಗ್ರಾಮೀಣ ಭಾಗದಲ್ಲಿ 8 ಸೇರಿ ಒಟ್ಟು 10 ಪ್ರಕರಣ ವರದಿಯಾಗಿತ್ತು. ನಂತರ ಈವರೆಗೆ ಯಾವುದೇ ಪ್ರಕರಣ ಕಂಡುಬಂದಿಲ್ಲ. ಉಳಿದಂತೆ ಕುಂದಾಪುರ ಮತ್ತು ಕಾರ್ಕಳ ತಾಲೂಕಿನಲ್ಲಿ ಈ ವರ್ಷ ಶೂನ್ಯ ಪ್ರಕರಣವಿದೆ. ಕಳೆದ ವರ್ಷವೂ 10 ಮಂದಿ ಚಿಕನ್‌ಗೂನ್ಯ ಪೀಡಿತರಾಗಿದ್ದರು.

    ಮೆದುಳು ಜ್ವರ ಹೆಚ್ಚಳ: ಉಡುಪಿ ತಾಲೂಕಿನಲ್ಲಿ ಮೆದುಳು ಜ್ವರ ಪ್ರಕರಣ ಸ್ವಲ್ಪ ಹೆಚ್ಚಾಗಿದೆ. ಉಡುಪಿ ನಗರದಲ್ಲಿ 2, ಗ್ರಾಮೀಣ ಭಾಗದಲ್ಲಿ 4 ಸೇರಿ ಒಟ್ಟು 6 ಪ್ರಕರಣ ವರದಿಯಾಗಿದೆ. ಕುಂದಾಪುರ ಮತ್ತು ಕಾರ್ಕಳ ತಾಲೂಕಿನಲ್ಲಿ ಶೂನ್ಯ ಪ್ರಕರಣವಿದೆ. ಜಿಲ್ಲೆಯಲ್ಲಿ 2018ರಲ್ಲಿ ಕೇವಲ 2 ಮತ್ತು 2019ರಲ್ಲಿ 2 ಮಂದಿಗೆ ಜ್ವರ ಕಾಣಿಸಿಕೊಂಡಿದ್ದು, ಈ ವರ್ಷ ದುಪ್ಪಟ್ಟು ಏರಿಕೆಯಾಗಿದೆ.

    ಶೇ. 15ರಷ್ಟು ಜನರ ತಪಾಸಣೆ: ಪ್ರತೀ ವರ್ಷ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇ. 15ರಷ್ಟು ಜನರನ್ನು ಮಲೇರಿಯಾ ಮತ್ತು ಡೆಂಘೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆರೋಗ್ಯ ಕಾರ್ಯಕರ್ತೆಯರು ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಜ್ವರಪೀಡಿತರಿದ್ದರೆ ರಕ್ತ ಮಾದರಿ ಸಂಗ್ರಹಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಗುತ್ತದೆ. ಇನ್ನು ಕೆಲವು ಜ್ವರ ಪೀಡಿತರು ಆಸ್ಪತ್ರೆಗೆ ಆಗಮಿಸಿ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಇದರಿಂದ ಜಿಲ್ಲೆಯ ಒಟ್ಟಾರೆ ಮಲೇರಿಯಾ ಮತ್ತು ಡೆಂೆ ರೋಗಗಳ ಸ್ಥಿತಿಗತಿ ಬಗ್ಗೆ ನಿಖರ ಮಾಹಿತಿ ಲಭ್ಯವಾಗುತ್ತದೆ.

    ಕೃಷ್ಣ ಪ್ರಸಾದ ಸೂಪರ್‌ಪ್ಲಾನ್
    ಮಲೇರಿಯಾ ಮತ್ತು ಡೆಂೆ ನಿಯಂತ್ರಣಕ್ಕೆ ಈ ರೋಗಗಳು ಹೆಚ್ಚಿರುವ ರಾಜ್ಯದಿಂದ ಆಗಮಿಸಿದ ವಲಸಿಗರು ಮತ್ತು ಬಸ್‌ಸ್ಟಾೃಂಡ್‌ಗಳಲ್ಲಿ ಮಲಗಿರುವ ಅನಾಥರು ಮತ್ತು ಕಟ್ಟಡ ಕಾರ್ಮಿರ ರಕ್ತ ಪರೀಕ್ಷೆ ನಡೆಸಿ ಔಷಧ ನೀಡುವುದು ಅತೀ ಅಗತ್ಯ. ಹೀಗಾಗಿ ಆರೋಗ್ಯ ಕಾರ್ಯಕರ್ತರು ರ‌್ಯಾಂಡಮ್ ಟೆಸ್ಟ್‌ಗೆ ತೆರಳಿದಾಗ ಹೆಚ್ಚಿನ ವಲಸಿಗರು ನಿರಾಕರಿಸುತ್ತಿದ್ದರು. ಇದಕ್ಕೆ ಹೊಸ ಉಪಾಯ ಕಂಡುಕೊಂಡ ಇಲಾಖೆ ಬೆಳಗ್ಗಿನ ಜಾವ ಕೃಷ್ಣ ಪ್ರಸಾದ ವಿತರಣೆ ಹಾಗೂ ರಕ್ತ ಪರೀಕ್ಷೆ ಎಂಬ ಹೊಸ ವಿಧಾನವನ್ನು ಅನುಸರಿಸುತ್ತಿರುವುದರಿಂದ ಜನರಿಂದ ಉತ್ತಮ ಪ್ರಕ್ರಿಯೆ ಲಭ್ಯವಾಗುತ್ತಿದೆ. ಈ ಹಿಂದೆ 20 ರಿಂದ 30 ಮಂದಿಗೆ ಪರೀಕ್ಷೆ ಸಾಧ್ಯವಾಗುತ್ತಿದ್ದರೆ ಈಗ 80 ರಿಂದ 100 ಮಂದಿ ಸ್ವಯಂಪ್ರೇರಣೆಯಿಂದ ರಕ್ತ ಪರೀಕ್ಷೆಗೆ ಬರುತ್ತಿದ್ದಾರೆ. ಹೀಗಾಗಿ ಜಿಲ್ಲಾ ಆರೋಗ್ಯಾಧಿಕಾರಿ ಇನ್ನೂ ಕನಿಷ್ಠ 15 ದಿನ ಲಘು ಉಪಾಹಾರ ಕೃಷ್ಣಪ್ರಸಾದ ಪೂರೈಸಲು ಕೃಷ್ಣ ಮಠಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.

    ನಗರದಲ್ಲಿ 4-5 ದಿನಗಳಿಂದ ಮಲೇರಿಯಾ ಪೂರ್ತಿ ಕಡಿಮೆಯಾಗಿದೆ. ವಲಸಿಗರು ಮತ್ತು ಕಾರ್ಮಿಕರ ನಿರಂತರ ತಪಾಸಣೆ ಮತ್ತು ಔಷಧ ವಿತರಣೆಯಿಂದ ರೋಗ ನಿಯಂತ್ರಣಕ್ಕೆ ಬಂದಿದೆ. ನೀರು ನಿಂತ ಕಡೆಗಳಲ್ಲಿ ಕೆಮಿಕಲ್ ಸ್ಪ್ರೇ ನಡೆಯುತ್ತಿದೆ. ರಕ್ತ ಪರೀಕ್ಷೆಗೆ ಬರುವವರಿಗೆ ಕೃಷ್ಣ ಮಠದ ತಿಂಡಿ ನೀಡುತ್ತಿರುವುದರಿಂದ ಹೆಚ್ಚಿನ ಮಂದಿ ಬರುತ್ತಿದ್ದಾರೆ. ವಲಸಿಗರು ಮತ್ತು ಕಾರ್ಮಿಕರು ಖಾಲಿ ಹೊಟ್ಟೆಯಲ್ಲಿರುವುದರಿಂದ ಔಷಧ ವಾಂತಿಯಾಗುವ ಸಾಧ್ಯತೆ ಇತ್ತು. ಈಗ ತಿಂಡಿ ಕೊಟ್ಟು ಔಷಧ ಕೊಡುವುದರಿಂದ ಪರಿಣಾಮಕಾರಿಯಾಗಿದೆ.
    -ಡಾ. ಪ್ರಶಾಂತ್ ಭಟ್, ಆಶ್ರಿತರೋಗಗಳ ನಿಯಂತ್ರಣಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts