More

    ಬಾಲ್ಯದಲ್ಲೇ ಪ್ರಶ್ನಿಸುವುದು ರೂಢಿಸಿಕೊಳ್ಳಿ

    ಕಡೂರು: ಪ್ರಶ್ನೆ ಮಾಡುವುದನ್ನು ಬಾಲ್ಯದಲ್ಲಿಯೇ ರೂಢಿಸಿಕೊಳ್ಳಬೇಕು ಎಂದು ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಡಾ. ಕೆ.ಟಿ.ತಿಪ್ಪೇಸ್ವಾಮಿ ತಿಳಿಸಿದರು.

    ಪಂಚನಹಳ್ಳಿ ಗ್ರಾಪಂನಲ್ಲಿ ಮಂಗಳವಾರ ಏರ್ಪಡಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ಮಾತನಾಡಿ, ಮಕ್ಕಳು ಹಕ್ಕುಗಳನ್ನು ತಿಳಿದುಕೊಳ್ಳಬೇಕು. ಪ್ರತಿ ಮಗುವಿಗೂ ಬದುಕುವ, ರಕ್ಷಣೆ, ವಿಕಾಸ ಹೊಂದುವ ಮತ್ತು ಭಾಗವಹಿಸುವ ಹಕ್ಕಿದೆ. ಹಕ್ಕುಗಳಿಗೆ ಧಕ್ಕೆಯಾದಾಗ ಅಧಿಕಾರಿಗಳು ಅಥವಾ ಮಕ್ಕಳ ರಕ್ಷಣಾ ಆಯೋಗಕ್ಕೆ ದೂರು ನೀಡಬೇಕು ಎಂದು ತಿಳಿಸಿದರು.ಬಾಲ್ಯ ವಿವಾಹ ಪ್ರಕರಣಗಳು ಕ್ಷೀಣಿಸುತ್ತಿವೆ. ಆದರೆ ಫೋಕ್ಸೋದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಮಕ್ಕಳು ಹೆಚ್ಚು ಜಾಗೃತರಾಗಬೇಕು. ಮಕ್ಕಳು ಪ್ರಜಾಪ್ರಭುತ್ವ ವ್ಯವಸ್ಥೆ ಅರಿತುಕೊಳ್ಳಲು, ಗ್ರಾಪಂ ಕಾರ್ಯ ನಿರ್ವಹಣೆ ಅರಿತುಕೊಳ್ಳಲು ಮಕ್ಕಳ ಗ್ರಾಮ ಸಭೆ ಅನುಕೂಲವಾಗಲಿದೆ ಎಂದು ಹೇಳಿದರು.ಎಂಬತ್ತು ಮನೆಗಳಿರುವ ದೊಡ್ಡನಕಟ್ಟೆ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯಿಂದ ಓದಲು ಸಾಧ್ಯವಾಗುತ್ತಿಲ್ಲ. ಮೆಸ್ಕಾಂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಸ್ನೇಹ ಶಾಲೆ ವಿದ್ಯಾರ್ಥಿನಿ ಗೌತಮಿ ದೂರಿದಳು. ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ರಮ್ಯಾ ಮಾತನಾಡಿ, ರಜಾ ದಿನಗಳಲ್ಲಿ ಶಾಲೆ ಆವರಣದಲ್ಲಿ ಮದ್ಯಪಾನ ಮಾಡಿ ಬಾಟಲ್ ಇತರ ತ್ಯಾಜ್ಯವಸ್ತುಗಳನ್ನು ಎಸೆದು ಹೋಗಿರುತ್ತಾರೆ. ಮರುದಿನ ವಿದ್ಯಾರ್ಥಿಗಳೇ ಸ್ವಚ್ಛಗೊಳಿಸುತ್ತೇವೆ. ಅಲ್ಲಿನ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದಳು. ಪದ್ಮಾವತಿ ಮಾತನಾಡಿ, ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗಿದೆ. ಅಪ್ರಾಪ್ತರು ವಾಹನ ಚಲಾಯಿಸುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದಳು. ಮಕ್ಕಳ ಪ್ರಶ್ನೆಗಳನ್ನು ಆಲಿಸಿದ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು, ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಭರವಸೆ ನೀಡಿದರು.ಗ್ರಾಪಂ ಅಧ್ಯಕ್ಷ ಸಾವೆ ಮರುಳಪ್ಪ, ಉಪಾಧ್ಯಕ್ಷೆ ರೇಖಾ ಗಂಗಾನಾಯಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಂ.ಎಸ್.ಇಂಪಾ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ರಾಜಾನಾಯ್ಕ, ಗ್ರೇಡ್ 2 ತಹಸೀಲ್ದಾರ್ ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಸಿದ್ದರಾಜನಾಯ್ಕ, ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್, ಸಿಡಿಪಿಒ ಶಿವಪ್ರಕಾಶ್, ವೃತ್ತ ನಿರೀಕ್ಷಕ ಶ್ರೀಕಾಂತ್, ಪಿಎಸ್‌ಐಗಳಾದ ಶಾಹೀದ್ ಅಫ್ರಿದಿ, ಲೀಲಾವತಿ, ಗ್ರಾಪಂ ಸದಸ್ಯರಾದ ರಂಗನಾಥ್, ಶಾರದಮ್ಮ, ಪಾಪಣ್ಣ, ಸಂತೋಷ್, ಲತಾಮಣಿ, ಶೀಲಾ, ರೂಪಾ, ಸ್ನೇಹ ಶಾಲೆ ಕಾರ್ಯದರ್ಶಿ ಸಿಕೆಒ ರಾಘವೇಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts