More

    ಸರ್ಕಾರದ ಅನುದಾನದಿಂದ ಪ್ರಗತಿ ಸಾಧಿಸಿ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪ್ರಗತಿ ಸಾಧಿಸದ ರೈತ ಉತ್ಪಾದಕರ ಸಂಸ್ಥೆಗಳು ಸರ್ಕಾರದಿಂದ ಪಡೆದಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಲಹೆ ನೀಡಿದರು.
    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ರೈತ ಉತ್ಪಾದಕರ ಸಂಸ್ಥೆಗಳ ಸಮನ್ವಯ ಮತ್ತು ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಉತ್ಪಾದಕರ ಸಂಸ್ಥೆಗಳಿಗೆ ಸಬ್ಸಿಡಿ ದರದಲ್ಲಿ ಸಾಲ ನೀಡುತ್ತಿವೆ. ಇದನ್ನು ಸದುಪಯೋಗ ಪಡಿಸಿಕೊಂಡು ರೈತ ಉತ್ಪಾದಕರ ಸಂಸ್ಥೆಗಳು ಅಭಿವೃದ್ಧಿ ಹೊಂದಬೇಕು ಎಂದರು.

    ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ರೇಷ್ಮೆ, ಕುರಿ, ಮೇಕೆ ಸಾಕಾಣಿಕೆ ಮುಂತಾದ ಮೌಲ್ಯವರ್ಧನೆ ಘಟಕಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಧಿಕಾರಿಗಳು ರೈತರಿಗೆ ಮೌಲ್ಯವರ್ಧನೆ ಕುರಿತು ತಾಂತ್ರಿಕ ತರಬೇತಿ ನೀಡುವುದರ ಮೂಲಕ ಕೃಷಿ ಉತ್ಪಾದನೆ ಹೆಚ್ಚಿಸಲು ಕ್ರಮವಹಿಸಬೇಕು. ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು. ಸಕಾಲಕ್ಕೆ ಗುಣಮಟ್ಟದ ಪರಿಕರಗಳು ದೊರಕುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
    ಜಿಲ್ಲೆಯಲ್ಲಿ ಒಂದು ಮೀನು ಉತ್ಪಾದಕರ ಸಂಸ್ಥೆ ಮಾತ್ರ ನೋಂದಣಿಯಾಗಿದೆ. ಮೀನುಗಾರಿಕೆ ಇಲಾಖೆಯಿಂದ ಅವರಿಗೆ ಬೇಕಾದ ಸೌಲಭ್ಯ ಕಲ್ಪಿಸಬೇಕು. ಮೀನುಗಾರಿಕೆ ಇಲಾಖೆ ಪ್ರಗತಿ ತೃಪ್ತಿದಾಯಕವಾಗಿಲ್ಲ. ಇನ್ನೂ ಮುಂದೆ ಅವರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸುವಂತೆ ಸೂಚಿಸಿದರು.
    ರೈತ ಉತ್ಪಾದಕರ ಸಂಸ್ಥೆಗಳು ಉತ್ಪಾದಿಸಿದ ಉತ್ಪಾದನೆಯನ್ನು ಶೇಖರಿಸಿಡಲು ಭೂಮಿ ಗುರುತಿಸಿ ಅರ್ಜಿ ಸಲ್ಲಿಸಿದರೆ ಆದ್ಯತೆ ಅನುಸಾರ ಗೋದಾಮು ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಲಾಗುವುದು. ರೈತ ಉತ್ಪಾದಕ ಸಂಸ್ಥೆಗಳಿಗೆ ಬ್ಯಾಂಕುಗಳಿAದ ನೀಡಲಾಗುವ ಸಾಲ ಸೌಲಭ್ಯಗಳ ಕುರಿತು ಫೆ. ೧೩ರಂದು ಜಿಲ್ಲೆಯ ಎಲ್ಲಾ ರೈತ ಉತ್ಪಾದಕರ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪ್ರತಿನಿಧಿಗಳ ಸಭೆಯನ್ನು ಲೀಡ್ ಬ್ಯಾಂಕ್‌ನಲ್ಲಿ ಕರೆದು ಮಾಹಿತಿ ನೀಡುವಂತೆ ಲೀಡ್ ಬ್ಯಾಂಕ್ ಮ್ಯಾನೇಜರ್‌ಗೆ ಸೂಚಿಸಿದರು.
    ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ ಸಭೆಗೆ ಮಾಹಿತಿ ನೀಡಿ, ಕೃಷಿ ಇಲಾಖೆಯಿಂದ ರೈತ ಉತ್ಪಾದಕರ ಸಂಸ್ಥೆಗಳಿಗೆ ಸುತ್ತು ನಿಧಿ, ಅಧ್ಯಯನ ಪ್ರವಾಸ, ತರಬೇತಿ, ಕಚೇರಿ ನಿರ್ವಹಣಾ ವೆಚ್ಚಗಳಿಗೆ ಅನುದಾನ ನೀಡಲಾಗಿದೆ. ಕೀಟನಾಶಕ, ಬಿತ್ತನೆ ಬೀಜ, ರಸಗೊಬ್ಬರ ಪರವಾನಿಗೆ ನೀಡುವುದರ ಮೂಲಕ ಆರ್ಥಿಕ ವಹಿವಾಟು ನಡೆಸಲು ಉತ್ತೇಜನ ನೀಡಲಾಗಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕಡೂರು ತಾಲೂಕಿನ ವಿಜಿಆರ್‌ಒಎಸ್‌ಎಲ್‌ಎಲ್ ಸಂಸ್ಥೆಗೆ ೫.೨ ಲಕ್ಷ ರೂ. ಹಾಗೂ ತರೀಕೆರೆ ತಾಲೂಕಿನ ವೀರಾಂಜನೇಯ ಸಂಸ್ಥೆಗೆ ೯.೦೪ ಲಕ್ಷ ರೂ. ಅನುದಾನದಲ್ಲಿ ಕೃಷಿ ಯಂತ್ರೋಪಕರಣ ಒದಗಿಸಲಾಗಿದೆ. ಕಡೂರು ತಾಲೂಕಿನ ಯಗಟಿ ರೈತ ಉತ್ಪಾದಕರ ಸಂಸ್ಥೆಗೆ ೮ ಲಕ್ಷ ರೂ. ಅನುದಾನಲ್ಲಿ ಫಾರಂ ಮಿಷನರಿ ಬ್ಯಾಂಕ್ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
    ಸಭೆಯಲ್ಲಿ ಎಡಿಸಿ ನಾರಾಯಣರಡ್ಡಿ ಕನಕರಡ್ಡಿ, ಪ್ರಮುಖರಾದ ಎ.ಎನ್.ಮಹೇಶ್ ಸೇರಿದಂತೆ ರೈತ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts