More

    ಉದ್ಧವ್ ಠಾಕ್ರೆ ವಿರುದ್ಧ ಆಕ್ರೋಶ

    ವಿಜಯಪುರ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಹೇಳಿಕೆ ಖಂಡಿಸಿ ವಿಜಯಪುರದ ಸಿದ್ಧೇಶ್ವರ ದೇವಸ್ಥಾನ ಮುಂದೆ ಮಂಗಳವಾರ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
    ಸಂಘದ ಜಿಲ್ಲಾಧ್ಯಕ್ಷ ಶಕ್ತಿಕುಮಾರ ಉಕುಮನಾಳ ಮಾತನಾಡಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಗಡಿನಾಡು ಬೆಳಗಾವಿ ಜಿಲ್ಲೆ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಉದ್ಧಟತನದ ಹೇಳಿಕೆ ನೀಡಿ, ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆ ಕರ್ನಾಟಕಕ್ಕೆ ಸೇರಿದ್ದು. ಒಬ್ಬ ಮುಖ್ಯಮಂತ್ರಿಯಾಗಿ ಹುಚ್ಚರಂತೆ ಹೇಳಿಕೆ ಕೊಟ್ಟು, ತಮ್ಮ ಹುದ್ದೆಗೆ ತಾವೇ ಕಳಂಕ ತಂದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರು ಠಾಕ್ರೆ ವಿರುದ್ಧ ಕಿಡಿಕಾರಿದರು.
    ಮಹಾಜನ್ ವರದಿ ಪ್ರಕಾರ ನಿಪ್ಪಾಣಿ ತಾಲೂಕಿನಲ್ಲಿ ಬರುವ ಹಳ್ಳಿಗಳು ಮತ್ತು ಸೊಲ್ಲಾಪುರ ಜಿಲ್ಲೆಯ ತಾಲೂಕಿನಲ್ಲಿ ಬರುವ 872 ಹಳ್ಳಿಗಳು ಕರ್ನಾಟಕಕ್ಕೆ ಸೇರುತ್ತವೆ. ಆದರೂ ನಮ್ಮ ರಾಜ್ಯ ಸರ್ಕಾರ ಮರಾಠ ಪ್ರಾಧಿಕಾರವನ್ನು ಜಾರಿಗೆ ತಂದಿದ್ದು, ಕರ್ನಾಟಕದಲ್ಲಿರುವ ಮರಾಠರಿಗೆ ಅನುಕೂಲವಾಗಲು ರಾಜ್ಯ ಸರ್ಕಾರ ಮರಾಠರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸಿದೆ. ಆದರೆ, ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ, ಕರ್ನಾಟಕದಲ್ಲಿರುವ ಮರಾಠಿಗರು ಯಾವ ಜಿಲ್ಲೆಯಲ್ಲಿದ್ದಾರೋ ಆ ಜಿಲ್ಲೆ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಹೇಳಿಕೆ ನೀಡಿರುವುದು ಖಂಡನೀಯ. ಇದು ರಾಜ್ಯದಲ್ಲಿರುವ ಮರಾಠಿಗರಿಗೆ ಮುಜುಗರ ತರುವಂತಹ ಕೆಲಸ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಸತತವಾಗಿ ಹಲ್ಲೆ ನಡೆಯುತ್ತಿವೆ. ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಧ್ವಜ ಹಚ್ಚಲು ಪೊಲೀಸರಿಂದ ಅನುಮತಿ ತೆಗೆದುಕೊಳ್ಳುವ ಪರಿಸ್ಥಿತಿ ನಮ್ಮ ಕನ್ನಡಿಗರಿಗೆ ಬಂದಿದೆ. ಇನ್ನೊಮ್ಮೆ ಠಾಕ್ರೆ ಅವರು ಹುಚ್ಚುತನದ ಹೇಳಿಕೆ ಕೊಟ್ಟರೆ ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.
    ಮುಖಂಡರಾದ ತಿಪ್ಪಣ್ಣ ಎಚ್. ಕಮಲದಿನ್ನಿ, ಮಂಜುಳಾ ಜಾಧವ, ತುಕಾರಾಮ ಪೂಜಾರಿ, ಪ್ರೇಮಾ ಚಲವಾದಿ, ಮಲ್ಲಯ್ಯ ಹಿರೇಮಠ, ಸಯ್ಯದ್ ಬಂಡಿ, ಪರಶುರಾಮ ವಿಜಯಪುರ, ವಿಶಾಲ ಇಂಗಳೆ, ಆನಂದ ಶಹಾಪುರ, ವಿರೇಶ ತಂಬಾಕೆ, ಮಲ್ಲು ರಾಮ್‌ಜಿ, ಮಲ್ಲು ತುಪ್ಪದ, ಮಹೇಶ ಬಂಡಿವಡ್ಡರ, ಪ್ರಕಾಶ ಪಾಟೀಲ, ಸಾಗರ ಸವದಿ, ಸಂತೋಷ ಭಾವಿಕಟ್ಟಿ, ಸಾಗರ ಬಾಗೇವಾಡಿ, ಶಾಂತು ನಾವಿ, ವಿಶ್ವನಾಥ ಜಂಬಗಿ, ಕಾಜು ಬೇಪಾರಿ, ಶಶಿ ಉತ್ನಾಳ, ವಿರೇಶ ಗಣಾಚಾರಿ ಮುಂತಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts