More

    ಮಹಾರಾಷ್ಟ್ರದಿಂದ ರಾಯಚೂರಿಗೆ ಬಂದ ಆರು ಕಾರ್ಮಿಕರಲ್ಲಿ ಕರೊನಾ ಸೋಂಕು ದೃಢ : ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಮಾಹಿತಿ

    ರಾಯಚೂರು: ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ ಆರು ಜನರಲ್ಲಿ ಕರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಅವರನ್ನು ಐಸೋಲೇಷನ್ ವಾರ್ಡ್‌ಗೆ ಸೇರಿಸಲಾಗಿದ್ದು, ಅವರೊಂದಿಗೆ ಸಂಪರ್ಕ ಹೊಂದಿರುವವರನ್ನು ಗುರುತಿಸಿ ಅವರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ತಿಳಿಸಿದರು.

    ಸ್ಥಳೀಯ ಜಿಪಂ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ಆರು ಜನರು ಸರ್ಕಾರಿ ಕಟ್ಟಡದ ಕ್ವಾರಂಟೈನ್‌ನಲ್ಲಿದ್ದು, ಮೂವರು ಪುರುಷರು, ಮೂವರು ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಕ್ವಾರಂಟೈನ್‌ನಲ್ಲಿದ್ದವರಲ್ಲಿ ಸೋಂಕು ಪತ್ತೆಯಾಗಿದ್ದರಿಂದ ಜನರು ಭಯಪಡುವ ಅಗತ್ಯವಿಲ್ಲ ಎಂದರು.

    ಖಾಸಗಿ ವಾಹನದಲ್ಲಿ ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿದ ರಾಯಚೂರು ನಗರದ ಆಟೋ ನಗರದ 25 ವರ್ಷದ ಮಹಿಳೆ (ಪಿ-1154), 32 ವರ್ಷದ ಮಹಿಳೆ (ಪಿ-1155) ಹಾಗೂ ಸೊಲ್ಲಾಪುರದಿಂದ ಆಗಮಿಸಿದ 20 ವರ್ಷದ ಯುವಕ (ಪಿ-1156)ನಲ್ಲಿ ಸೋಂಕು ಕಂಡು ಬಂದಿದೆ. ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದಾರೆ.

    ರಾಯಚೂರು ತಾಲೂಕಿನ ಸುಲ್ತಾನಪುರ ಗ್ರಾಮದ 44 ವರ್ಷ ಪುರುಷ (ಪಿ-1157) ಹಾಗೂ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ 36 ವರ್ಷದ ಪುರುಷ (ಪಿ-1152) ಹಾಗೂ 37 ವರ್ಷದ ಮಹಿಳೆ (ಪಿ-1153)ಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಎಲ್ಲರನ್ನೂ ಒಪೆಕ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ಗೆ ಸೇರಿಸಲಾಗಿದೆ.

    ಮಹಾರಾಷ್ಟ್ರದಿಂದ ಮೇ 13ರಂದು ಜಿಲ್ಲೆಗೆ ಆಗಮಿಸಿದ ಸೋಂಕಿತರನ್ನು ಜಿಲ್ಲೆಯ ಗಡಿಯಿಂದ ಸರ್ಕಾರಿ ಕಟ್ಟಡದ ಕ್ವಾರಂಟೈನ್‌ಗೆ ಸೇರಿಸಿರುವುದರಿಂದ ಕಟ್ಟಡದಲ್ಲಿರುವವರು ಮಾತ್ರ ಇವರ ಸಂಪರ್ಕಕ್ಕೆ ಬಂದಿದ್ದು, ಸೋಂಕಿತರೊಂದಿಗೆ ಒಂದೇ ಕೊಠಡಿಯಲ್ಲಿದ್ದವರನ್ನು ಪ್ರಾಥಮಿಕ ಸಂಪರ್ಕ ಹೊಂದಿದವರು ಎಂದು ಪ್ರತ್ಯೇಕವಾಗಿರಿಸಲಾಗುತ್ತಿದೆ. ಕಟ್ಟಡದಲ್ಲಿದ್ದ ಇತರರನ್ನು 2ನೇ ಸಂಪರ್ಕಿತರು ಎಂದು ಪರಿಗಣಿಸಿ ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಅಪರ ಜಿಲ್ಲಾಧಿಕಾರಿ ದುರಗೇಶ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts