More

    ಆಸ್ಪತ್ರೆ ಬಂದ್ ಮಾಡಿದ್ರೆ ಕಠಿಣ ಕ್ರಮ

    ನಿಂಬರ್ಗಾ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ರೋಗಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಕೂಡಲೇ ಎಲ್ಲ ಸರಿ ಹೋಗಬೇಕು. ಇನ್ಮುಂದೆ ಆಸ್ಪತ್ರೆ ಬಂದ್ ಮಾಡಿದ್ರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸುಶೀಲಕುಮಾರ ಅಂಬೂರೆ ಎಚ್ಚರಿಕೆ ನೀಡಿದರು.

    ಸಾರ್ವಜನಿಕರ ದೂರಿನನ್ವಯ ಆಳಂದ ತಾಲೂಕಿನ ಮಾಡಿಯಾಳದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶನಿವಾರ ರಾತ್ರಿ ದಿಢೀರ್ ಭೇಟಿ ನೀಡಿದಾಗ ಬೀಗ ಹಾಕಲಾಗಿತ್ತು. ಇದರಿಂದ ಗರಂ ಆದ ಟಿಎಚ್‌ಒ, ಕೂಡಲೇ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗೆ ಕರೆ ಮಾಡಿ ಆಸ್ಪತ್ರೆಗೆ ಬರಲು ಸೂಚಿಸಿದರು. ಆದರೆ ಡಿ ದರ್ಜೆ ಸಹಾಯಕ ಮತ್ತು ಸ್ಟಾಫ್ ನರ್ಸ್ ಹೊರತುಪಡಿಸಿ ಬೇರಾರೂ ಬರಲಿಲ್ಲ.

    ಆಸ್ಪತ್ರೆ ಬೀಗ ತೆರೆದು ಒಳ ಹೋದಾಗ ಹೊರ ರೋಗಿಗಳ ಕೋಣೆ, ಶಸ್ತ್ರಚಿಕಿತ್ಸಾ ವಿಭಾಗ, ಔಷಧ ವಿತರಣಾ ಕೇಂದ್ರ, ಉಗ್ರಾಣ ಕೋಣೆ ಇತರ ವಿಭಾಗಕ್ಕೆ ಬೀಗ ಹಾಕಲಾಗಿತ್ತು. ಕೋಣೆ ತೆರೆಯಲು ಹೇಳಿದರೆ ಬೀಗವಿಲ್ಲವೆಂದು ಉತ್ತರಿಸಿದರು. ಇದರಿಂದ ಮತ್ತಷ್ಟು ಕೆರಳಿದ ಆರೋಗ್ಯಾಧಿಕಾರಿ, ಈ ವೇಳೆ ಯಾರಾದರೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದರೆ ಹೇಗೆ? ನಿಮಗೆ ದಿನದ ೨೪ ಗಂಟೆ ಕೆಲಸ ಮಾಡಲು ಸಂಬಳ ನೀಡಲಾಗುತ್ತಿದೆ. ನಿಮ್ಮ ನಿರ್ಲಕ್ಷ್ಯದಿಂದಾಗಿ ಇಡೀ ಆರೋಗ್ಯ ಇಲಾಖೆ ತಲೆ ತಗ್ಗಿಸುವಂತಾಗಿದೆ. ನಿಮ್ಮೆಲ್ಲರ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತರಾಟೆಗೆ ತೆಗೆದುಕೊಂಡರು.

    ವಾರಕ್ಕೊಮ್ಮೆ ಆಸ್ಪತ್ರೆಗೆ ಬರುವ ಮುಖ್ಯ ವೈದ್ಯರು, ಬಂದ ಅನುದಾನ ದುರುಪಯೋಗ ಮಾಡಿಕೊಂಡಿದ್ದಾರೆ. ಸಮಗ್ರ ತನಿಖೆ ನಡೆಸಿ ವೈದ್ಯಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಷ ಪೊಲೀಸ್ ಪಾಟೀಲ್ ಆಗ್ರಹಿಸಿದರು.

    ಉಪಾಧ್ಯಕ್ಷ ಶಾಮರಾವ ಸಿಂಗೆ, ಸದಸ್ಯರಾದ ಈರಣ್ಣ ನಿಂಬಾಳ, ರಮೇಶ ರಾಠೋಡ್, ಲಾಲು ರಾಠೋಡ್, ಪ್ರಮುಖರಾದ ರಮೇಶ ಕಲಶೆಟ್ಟಿ, ಸಿದ್ದಲಿಂಗ ಉಪ್ಪಾರ್, ಪ್ರಭಾಕರ ಕೌಲಗಿ, ರಮೇಶ ನಾಶಿ, ಗುರುನಾಥ ಆರತುಕ್ಕಾಣಿ, ಶರಣು ಮದರಿ, ಸುಧಾಕರ ಖಂಡೇಕರ್, ಸಿದ್ದರಾಮ ಪಾಟೀಲ್, ಕಾಶೀನಾಥ ಗುತ್ತೇದಾರ್, ಕಲ್ಯಾಣಿ ಶಿರೋಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts