More

    ಮಡಿವಾಳ ಮಾಚಿದೇವ ಪರಿಶುಭ್ರ ಜೀವನ ನಡೆಸಿದ ಶ್ರೇಷ್ಠ ಶರಣ

    ಶಿಕಾರಿಪುರ: ಶುಭ್ರವಾಗಿ ತೊಳೆದು ಮಡಿಗೊಳಿಸಿದ ಬಟ್ಟೆಯಂತೆಯೇ ಪರಿಶುಭ್ರವಾದ ಜೀವನ ನಡೆಸಿದವರು ಶರಣ ಶ್ರೇಷ್ಠ ಮಡಿವಾಳ ಮಾಚಿದೇವರು ಎಂದು ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಹೇಳಿದರು.

    ಪಟ್ಟಣದಲ್ಲಿ ಗುರುವಾರ ಗುರುವಾರ ಏರ್ಪಡಿಸಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತನು-ಮನ ಶುದ್ಧವಾಗಿ ಕಾಯಕಯೋಗಿ ಬದುಕು ನಡೆಸಿ ಶರಣ ಪರಂಪರೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದವರು ಮಾಚಿದೇವರು. ಮನಸು ರಾಗದ್ವೇಷಗಳಿಂದ ಮುಕ್ತವಾಗಿ ಮೊದಲು ಮಡಿಯಾಗಬೇಕು. ಆಗ ಶರಣತ್ವ ತನ್ನಿಂದ ತಾನೇ ಆವಾಹನೆ ಆಗುತ್ತದೆ. ನುಡಿದಂತೆ ನಡೆದು ತೋರುವವನೆ ಶರಣ ಎಂದು ಸಾಕ್ಷೀಕರಿಸಿದವರು ಮಡಿವಾಳ ಮಾಚಿದೇವರು ಎಂದರು.
    ಅತ್ಯಂತ ಸಾಮಾಜಿಕ ಕಳಕಳಿಯ ಮಡಿವಾಳ ಮಾಚಿದೇವರು ನಿರ್ಭಿಡೆಯ ನೇರ ನಡೆ ನುಡಿಯ ಶರಣರಾಗಿದ್ದರು. ಅವರ ಒಂದೊಂದು ವಚನವೂ ಒಂದೊಂದು ಗ್ರಂಥಕ್ಕೆ ಸಮ. ಅವರ ಬದುಕು ಬರಹಗಳ ಪರಿಚಯ ನಮ್ಮ ಮುಂದಿನ ಪೀಳಿಗೆಗೆ ಆಗಬೇಕು. ಶರಣರ ಚಿಂತನೆಗಳು ಸಾರ್ವಕಾಲಿಕ. ಇಂದಿನ ವಿಚ್ಛಿದ್ರಕಾರಿ ಮನಸ್ಥಿತಿಯ ಕಾಲದಲ್ಲಿ ಶರಣರ ಚಿಂತನೆಗಳು ಪ್ರಸ್ತುತವಾಗಿವೆ ಎಂದು ಹೇಳಿದರು. ಮಡಿವಾಳ ಮಾಚಿದೇವರ ಚಿಂತನೆಗಳನ್ನು ಆಶಯಗಳನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸದಿರಿ. ಅವರ ಚಿಂತನೆಗಳು ಸಂದೇಶಗಳು ಸಾರ್ವಕಾಲಿಕ ಸತ್ಯ. ಸಮಾಜಕ್ಕೆ ಸದ್ವಿಚಾರಗಳ ಬುತ್ತಿ ಕಟ್ಟಿಕೊಟ್ಟವರು ಶರಣರು. ಅವರು ಯಾವತ್ತೂ ವಯಕ್ತಿಕ ಹಿತಾಸಕ್ತಿ ಬಯಸಲಿಲ್ಲ. ಸಮ ಸಮಾಜ, ಕಾಯಕ ದಾಸೋಹ ಸಹಬಾಳ್ವೆಗಳೇ ಅವರ ದೇಶಗಳಾಗಿದ್ದವು. ಪ್ರತಿ ಮನೆ ಮನೆಯಲ್ಲಿ ಶರಣರ ವಚನಗಳ ಸಂಗ್ರಹ ಇರಬೇಕು ಎಂದರು.
    ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಎಚ್.ಎನ್.ಲೋಕಪ್ಪ ಮಾತನಾಡಿ, ಮಡಿವಾಳ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಸಂಘಟನೆಯಿಂದ ಸಮಾಜಕ್ಕೆ ಬಲ ಬರಲಿದೆ. ನಾವು ನಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಮುದಾಯದ ಬಲವೇ ನಮಗೆ ಭೀಮಬಲ ಎಂದು ಹೇಳಿದರು.
    ಶಿಕ್ಷಕ ನಾಗರಾಜ್ ಉಪನ್ಯಾಸ ನೀಡಿದರು. ಮಧು ಎಸ್.ಹೋತನಕಟ್ಟೆ, ವಕೀಲ ಕೋಡೆಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts