More

    ನಿರಾಶ್ರಿತರಿಗೆ ನಿವೇಶನ ಹಂಚಲು ಒತ್ತಾಯ

    ಸಿದ್ದಾಪುರ: ನೆಲ್ಯಹುದಿಕೇರಿ ಗ್ರಾಮದ ಪ್ರವಾಹ ಪೀಡಿತ ನಿರಾಶ್ರಿತರಿಗೆ ನಿವೇಶನ ಹಂಚುವಂತೆ ಒತ್ತಾಯಿಸಿ ಸಿಪಿಎಂ ಪಕ್ಷದ ನೆಲ್ಯಹುದಿಕೇರಿ ಘಟಕದ ವತಿಯಿಂದ ನೆಲ್ಯಹುದಿಕೇರಿ ಪಿಡಿಒ ಮುಖಾಂತರ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

    ಈ ಸಂದರ್ಭ ಪಕ್ಷದ ನೆಲ್ಯಹುದಿಕೇರಿ ಘಟಕ ಕಾರ್ಯದರ್ಶಿ ಪಿ.ಆರ್.ಭರತ್ ಮಾತನಾಡಿ, ನದಿ ದಡದಲ್ಲಿ 300ಕ್ಕೂ ಅಧಿಕ ಕುಟುಂಬಗಳು ಹಲವು ವರ್ಷಗಳಿಂದ ವಾಸ ಮಾಡುತ್ತಿವೆ. 2018ರ ಮಳೆಯಲ್ಲಿ ಹಲವು ಮನೆಗಳು ಜಖಂಗೊಂಡಿತ್ತು. 2019ರಲ್ಲಿ ನೂರಕ್ಕೂ ಅಧಿಕ ಮನೆಗಳು ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಮನೆ ಕಳೆದುಕೊಂಡು ನಿರಾಶ್ರಿತರಾದ ಕುಟುಂಬಗಳಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ನೀಡಲಾಗಿತ್ತು. ಪರಿಹಾರ ಕೇಂದ್ರದಲ್ಲಿದ್ದುಕೊಂಡೇ ಶಾಶ್ವತ ಪರಿಹಾರ ಒದಗಿಸುವಂತೆ ನಿರಾಶ್ರಿತರು ಹೋರಾಟ ಮಾಡಿದ್ದರು. ಆದರೆ ಜಿಲ್ಲಾಡಳಿತ ಅರೆಕಾಡು ಗ್ರಾಮದಲ್ಲಿ ಒತ್ತುವರಿದಾರರಿಂದ ತೆರವುಗೊಳಿಸಿದ ಜಾಗ ತೋರಿಸಿ ಅಮಾಯಕರನ್ನು ವಂಚಿಸಿದೆ ಎಂದರು.

    ನಿವೇಶನ ಹಂಚುವ ನಾಟಕವಾಡಿ ನಿರಾಶ್ರಿತರು ಪರಿಹಾರ ಕೇಂದ್ರ ತೊರೆಯುವಂತೆ ಮಾಡಲಾಗಿದೆ. ಮತ್ತೊಂದು ಮಳೆಗಾಲ ಸಮೀಪಿಸಿದ್ದು ನದಿ ದಡದ ಮುರುಕಲು ಗುಡಿಸಲಿನಲ್ಲಿ ವಾಸ ಇರುವ ನಿರಾಶ್ರಿತರು ಆತಂಕಕ್ಕೆ ಒಳಗಾಗಿದ್ದಾರೆ. ಅದರ ನಡುವಯೇ ಕಂದಾಯ ಅಧಿಕಾರಿಗಳು ನದಿ ದಡದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ. ಇರಲು ಒಂದು ಸೂರು ಕೂಡ ಇಲ್ಲದ ಈ ಅಮಾಯಕರು ಎಲ್ಲಿಗೆ ತೆರಳಲು ಸಾಧ್ಯ ಎಂದು ಪ್ರಶ್ನಿಸಿದರು.

    ಸಂಪೂರ್ಣ ನಾಶಗೊಂಡಿರುವ ಕೆಲವು ಮನೆಗಳನ್ನು ಸರ್ಕಾರದ ಪರಿಹಾರದ ಪಟ್ಟಿಯಿಂದ ಕೈ ಬಿಡಲಾಗಿದೆ. ಕೂಡಲೇ ಅದನ್ನು ಸರಿಪಡಿಸಬೇಕು. ಅರೆಕಾಡು ಜಾಗದಲ್ಲಿ ನಿರಾಶ್ರಿತರಿಗೆ ಗುರುತಿಸಿದ ಜಾಗದಲ್ಲಿ ನದಿ ದಡದ ನಿವಾಸಿಗಳಿಗೆ ವಾಸಕ್ಕೆ ಅನುವು ಮಾಡಿ ಕೊಡಬೇಕು. ಇಲ್ಲದಿದ್ದಲ್ಲಿ ಪಕ್ಷದ ವತಿಯಿಂದ ಸಾರ್ವಜನಿಕ ಚಳುವಳಿಯನ್ನು ಮಾಡುವುದಾಗಿ ಎಚ್ಚರಿಸಿದರು.

    ಸಿಪಿಎಂ ಪಕ್ಷದ ಗ್ರಾಮ ಸಮಿತಿ ಸದಸ್ಯ ಜೋಸ್, ನಿರಾಶ್ರಿತ ಶಿವರಾಂ, ಚಂದ್ರನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts