More

    ಗುಡ್ಡಗಾಡು ಪ್ರದೇಶಗಳಲ್ಲಿ ರೆಡ್ ಅಲರ್ಟ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಗುಡ್ಡಗಾಡು ಪ್ರದೇಶಗಳ ವ್ಯಾಪ್ತಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

    ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಕೊಂಚ ಬಿಡುವು ಕೊಟ್ಟಿದ್ದ ಮಳೆ ಮಂಗಳವಾರದಿಂದ ಬಿರುಸು ಪಡೆದುಕೊಂಡಿದೆ. ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ, ಕುಶಾಲನಗರ, ಶನಿವಾರಸಂತೆ, ಕೊಡ್ಲಿಪೇಟೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಜೀವ ನದಿ ಕಾವೇರಿಯ ಉಗಮಸ್ಥಾನ ತಲಕಾವೇರಿ ಭಾಗಮಂಡಲ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಸೋಮವಾರ 135 ಮಿ.ಮೀ ಮಳೆಯಾದರೆ, ಮಂಗಳವಾರ 100 ಮಿ.ಮೀ ಮಳೆಯಾಗಿದೆ.

    ಕಳೆದ ಎರಡು ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಮಡಿಕೇರಿ ತಾಲೂಕು, ಭಾಗಮಂಡಲ ಹೋಬಳಿ, ಚೇರಂಗಾಲ ಗ್ರಾಮದ ಸಮೀಪ ಭಾಗಮಂಡಲದಿಂದ ತಲಕಾವೇರಿಗೆ ಹೋಗುವ ಮಾರ್ಗ ಮಧ್ಯೆ ಬೆಟ್ಟ ಕುಸಿದು ಭಾಗಮಂಡಲ-ತಲಕಾವೇರಿ ಮಧ್ಯೆ ರಸ್ತೆ ಸಂಚಾರ ಬಂದ್ ಆಗಿತ್ತು. ಸದರಿ ಸ್ಥಳಕ್ಕೆ ಆ ವ್ಯಾಪ್ತಿಯ ಪ್ರಕೃತಿ ವಿಕೋಪ ಪರಿಹಾರ ತಂಡವು ತೆರಳಿ ಪರಿಶೀಲಿಸಿ, ಕಾರ್ಯಾಚರಣೆ ನಡೆಸಿ ರಸ್ತೆಯಲ್ಲಿ ಬಿದ್ದಿದ್ದ ಮಣ್ಣನ್ನು ತೆರವುಗಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. ಆದರೆ ಮುಂಜಾಗ್ರತಾ ದೃಷ್ಟಿಯಿಂದ ರಾತ್ರಿಯಿಂದ ಬೆಳಗ್ಗಿನವರೆಗೆ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ನೀಡದೆ ಸಂಚಾರ ನಿಷೇಧಿಸಲಾಗಿತ್ತು.

    ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಜಿಲ್ಲೆಯಲ್ಲಿ ಎರಡು ದಿನ ರೆಡ್ ಅಲರ್ಟ್ ಘೋಸಿಸಲಾಗಿದ್ದು, ಗುಡ್ಡಗಾಡು ಅಪಾಯಕಾರಿ ಪ್ರದೇಶದ ಜನರು ಎಚ್ಚರದಿಂದ ಇರಲು ಜಿಲ್ಲಾಡಳಿತ ಮನವಿ ಮಾಡಿದೆ.

    ಪ್ರಕೃತಿ ವಿಕೋಪ ಸಂಬಂಧಿತ ಸಮಸ್ಯೆಗಳಿಗೆ 24*7 ಕಂಟ್ರೋಲ್ ರೂಂ ನಂ: 08272-221077, ವಾಟ್ಸ್‌ಆ್ಯಪ್ ನಂಬರ್ 8550001077 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts