More

    ಮಾಡಾವು ಸಬ್‌ಸ್ಟೇಷನ್ ಕೆಲಸ ಪೂರ್ಣ

    ಶಶಿ ಈಶ್ವರಮಂಗಲ
    ದಶಕಗಳ ಹಿಂದೆ ಆರಂಭಗೊಂಡ ಪುತ್ತೂರು ತಾಲೂಕಿನ ಮಾಡಾವು ವಿದ್ಯುತ್ ಸಬ್‌ಸ್ಟೇಷನ್ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆ ಸಾಧ್ಯತೆ ಇದೆ.
    ಮಾಡಾವು ವಿದ್ಯುತ್ ಸಬ್‌ಸ್ಟೇಷನ್ ಲೋಕಾರ್ಪಣೆಯೊಂದಿಗೆ ಸುಳ್ಯ ತಾಲೂಕು ಮತ್ತು ಪಾಣಾಜೆ, ಬೆಟ್ಟಂಪಾಡಿ ಸೇರಿದಂತೆ ಪುತ್ತೂರು ತಾಲೂಕಿನ ಕೆಲ ಭಾಗಗಳ ವಿದ್ಯುತ್ ಸಮಸ್ಯೆ ಸಂಪೂರ್ಣ ಪರಿಹಾರವಾಗುವ ಆಶಾವಾದ ವ್ಯಕ್ತಗೊಂಡಿದೆ.
    ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವಿನಲ್ಲಿ 110 ಕೆ.ವಿ. ಸಾಮರ್ಥ್ಯದ ವಿದ್ಯುತ್ ಸಬ್‌ಸ್ಟೇಷನ್ ಕಾಮಗಾರಿ 10 ವರ್ಷಗಳ ಹಿಂದೆ ಪ್ರಾರಂಭಗೊಂಡಿತ್ತು. 27 ಕಿ.ಮೀ. ದೂರದ ವಿದ್ಯುತ್ ಲೈನ್ ಹಾಗೂ 115 ಟವರ್ ನಿರ್ಮಾಣ, ವಿದ್ಯುತ್ ಸಬ್‌ಸ್ಟೇಷನ್ ಕಾಮಗಾರಿಯಲ್ಲಿ ಅಳವಡಿಕೆಯಾಗಿತ್ತು. ಆದರೆ ಸ್ಥಳೀಯರ ಪಟ್ಟಾ ಜಾಗದಲ್ಲಿ ಈ ವಿದ್ಯುತ್ ಲೈನ್ ಎಳೆಯಬೇಕಾಗಿತ್ತು. ಇದನ್ನು ವಿರೋಧಿಸಿದ ಅಲ್ಲಿನ ಕೃಷಿಕರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದರ ಪರಿಣಾಮ ಮಾಡಾವು ವಿದ್ಯುತ್ ಸಬ್‌ಸ್ಟೇಷನ್ ಕಾಮಗಾರಿ ನನೆಗುದಿಗೆ ಬಿದ್ದಿತ್ತು.

    ಹೈಕೋರ್ಟ್‌ನಲ್ಲಿ ಹೂಡಲಾಗಿದ್ದ ದಾವೆಗಳನ್ನು ತೆರವುಗೊಳಿಸಲಾಗಿದ್ದು, 27 ಕಿ.ಮೀ. ಉದ್ದದ ತಂತಿ ಅಳವಡಿಕೆ ಪೈಕಿ ಕೇವಲ 2.5 ಕಿ.ಮೀ. ಉದ್ದದ ತಂತಿ ಅಳವಡಿಕೆ ಕಾಮಗಾರಿ ಮಾತ್ರ ಬಾಕಿ ಉಳಿದಿದೆ. 114 ಟವರ್ ನಿರ್ಮಿಸಲಾಗಿದ್ದು, ಒಂದು ಟವರ್ ಮಾತ್ರ ನಿರ್ಮಾಣಕ್ಕೆ ಬಾಕಿ ಉಳಿದಿದೆ. ಸಬ್‌ಸ್ಟೇಷನ್ ಕಟ್ಟಡ ಕಾಮಗಾರಿ ಪೂರ್ಣವಾಗಿದ್ದು, ಇಲ್ಲಿನ ವ್ಯವಸ್ಥೆಗಳು ಅಂತಿಮಗೊಂಡಿವೆ. ಪ್ರಸ್ತುತ ಪರಿಶೀಲನೆ ನಡೆಯುತ್ತಿದೆ.

    ಪರಿಹಾರಧನ ನೀಡಲು ಬಾಕಿ
    ವಿದ್ಯುತ್ ಲೈನ್ ಮತ್ತು ಟವರ್ ನಿರ್ಮಾಣಕ್ಕಾಗಿ ಸ್ಥಳೀಯ ರೈತರ ಸ್ಥಳಗಳನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಈಗಾಗಲೇ 8.5 ಕೋಟಿ ರೂ. ಪರಿಹಾರ ನೀಡಲಾಗಿದೆ. 110 ಮಂದಿ ಭೂ ಮಾಲೀಕರಿಗೆ 2.5 ಕೋಟಿ ರೂ. ಪರಿಹಾರ ಧನ ನೀಡಲು ಬಾಕಿಯಾಗಿದೆ. ಇದರಲ್ಲಿ 1 ಕೋಟಿ ರೂ. ಪರಿಹಾರಕ್ಕಾಗಿ ಜಾಗದ ದಾಖಲೆಗಳನ್ನು ಈಗಾಗಲೇ ಪಡೆದುಕೊಳ್ಳಲಾಗಿದೆ. 1.5 ಕೋಟಿ ರೂ. ಪರಿಹಾರದ ದಾಖಲೆಗಳನ್ನು ಜನತೆಯಿಂದ ಪಡೆಯುವ ಕಾರ್ಯ ನಡೆಯುತ್ತಿದೆ. ಈ ಎಲ್ಲ ದಾಖಲೆಗಳನ್ನು ಕೆಪಿಟಿಸಿಎಲ್ ಕೇಂದ್ರ ಕಚೇರಿಗೆ ನೀಡುವ ಕೆಲಸ ಫೆಬ್ರವರಿಯಲ್ಲಿ ನಡೆಯಲಿದೆ. ಪರಿಹಾರಧನವನ್ನು ಕೆಪಿಸಿಟಿಎಲ್ ಸಂಸ್ಥೆಯೇ ನೀಡಲಿದ್ದು, ಜಾಗ ಕಳೆದುಕೊಂಡವರಿಗೆ ಹಣ ನೇರವಾಗಿ ಪಾವತಿಯಾಗಲಿದೆ. 2.5 ಕಿ.ಮೀ. ದೂರದ ಲೈನ್ ಎಳೆಯುವ ಕಾರ್ಯ ಮತ್ತು 1 ಟವರ್ ನಿರ್ಮಾಣ ಕಾಮಗಾರಿ ತಕ್ಷಣ ಆರಂಭಗೊಳ್ಳಲಿದ್ದು, ಫೆಬ್ರವರಿ ಅಂತ್ಯದಲ್ಲಿ ಮಾಡಾವು ವಿದ್ಯುತ್ ಸಬ್‌ಸ್ಟೇಷನ್ ಲೋಕಾರ್ಪಣೆಗೆ ಸಿದ್ಧಗೊಳ್ಳಲಿದೆ.

    ಮಾಡಾವು ವಿದ್ಯುತ್ ಸಬ್‌ಸ್ಟೇಷನ್‌ಗೆ ಸಂಬಂಧಿಸಿ 14 ಲೈನ್‌ಗಳ ಪೈಕಿ 2.5 ಮೀ ಉದ್ದದ ತಂತಿ ಅಳವಡಿಸುವ ಮತ್ತು ಒಂದು ಟವರ್ ನಿರ್ಮಾಣದ ಕೆಲಸವಷ್ಟೇ ಬಾಕಿ ಇದೆ. ಸಂಬಂಧಪಟ್ಟ ಭೂಮಾಲಿಕರಿಗೆ 1.50 ಕೋಟಿ ರೂ. ಪರಿಹಾರ ನೀಡಿ ಕಾಮಗಾರಿ ಪೂರ್ಣಗೊಳಿಸುವ ಪ್ರಕ್ರಿಯೆ ಹಾಗೂ ವ್ಯವಸ್ಥೆಗಳ ಟೆಸ್ಟಿಂಗ್ ಕಾರ್ಯ ನಡೆಯುತ್ತಿದೆ. ಫ್ರೆಬ್ರವರಿ ತಿಂಗಳ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
    ಗಂಗಾಧರ್, ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್

    ಮಾಡಾವು ವಿದ್ಯುತ್ ಸಬ್‌ಸ್ಟೇಷನ್ ಕಾಮಗಾರಿಗೆ ತಡೆಯಾಗಿದ್ದ ನ್ಯಾಯಾಲಯ ದಾವೆಗಳು ತೆರವುಗೊಂಡ ಬಳಿಕ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಸ್ತುತ ಶೀಘ್ರಗತಿಯಲ್ಲಿ ಕೆಲಸ ನಡೆಯುತ್ತಿದ್ದು, ಅಧಿಕಾರಿಗಳು ನೀಡಿರುವ ಭರವಸೆಯಂತೆ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಬಹುದೆಂಬ ನಿರೀಕ್ಷೆಯಿದೆ. ಈ ವಿದ್ಯುತ್ ಸಬ್‌ಸ್ಟೇಷನ್ ಕಾರ್ಯಾರಂಭಗೊಂಡ ಬಳಿಕ ಈ ಭಾಗದಲ್ಲಿ ಕಾಡುತ್ತಿರುವ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಗಬಹುದೆಂಬ ನಿರೀಕ್ಷೆ ನಮ್ಮದು.
    ಎಸ್.ಬಿ.ಜಯರಾಮ ರೈ ಬಳೆಜ್ಜ ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts