More

    ರಾಜಕೀಯ ನಡೆ ಗೌಪ್ಯವಾಗಿರಿಸಿದ ಎಂ.ಟಿ.ಕೃಷ್ಣೇಗೌಡ

    ಅರಕಲಗೂಡು : ಜನಪರವಾಗಿದ್ದ ನಾನು ಲಾಭಕ್ಕಾಗಿ ರಾಜಕೀಯಕ್ಕೆ ಬಂದವನಲ್ಲ. ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವುದೇ ನನ್ನ ಮುಖ್ಯ ಗುರಿಯಾಗಿದ್ದು ಇಂದಿಗೂ ಜನರ ಒಲವು ಅಭಿವೃದ್ಧಿ ಕಡೆಗಿದೆ ಎಂದು ಹೇಳುವ ಮೂಲಕ ತಮ್ಮ ರಾಜಕೀಯದ ಮುಂದಿನ ನಡೆಯನ್ನು ವಿಧಾನಸಭಾ ಕ್ಷೇತ್ರದ ಪಕ್ಷೇತರ ಪರಾಜಿತ ಅಭ್ಯರ್ಥಿ ಎಂ.ಟಿ.ಕೃಷ್ಣೇಗೌಡ ಗೌಪ್ಯವಾಗಿರಿಸಿದರು.

    ತಮ್ಮ ಮುಂದಿನ ನಿಲುವು ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲು ಪಟ್ಟಣದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಅಭಿಪ್ರಾಯ ಸಭೆಯಲ್ಲಿ ಮಾತನಾಡಿದ ಅವರು, ನಾವು ಯಾವ ಪಕ್ಷದ ಕಡೆಗೆ ಹೋಗಬೇಕೆಂದು ನಿರ್ಧರಿಸಿಲ್ಲ. ಕೆಲವು ದಿನಗಳ ಹಿಂದೆ ಸಿಎಂ, ಡಿಸಿಎಂ ಅವರು ಕರೆ ಮಾಡಿ ಭೇಟಿಯಾಗುವಂತೆ ತಿಳಿಸಿದರು. ಆದರೆ, ನಾನು ಚೆನ್ನೈನಲ್ಲಿ ಇದ್ದೇನೆ ಎಂದಾಗ ನಾಳೆಯಾದರೂ ಭೇಟಿಯಾಗುವಂತೆ ಹೇಳಿದರು. ಅಲ್ಲಿಂದ ಬಂದು ಕೆಪಿಸಿಸಿ ಕಚೇರಿಗೆ ಹೋದಾಗ ಐದಾರು ಸಾವಿರ ಜನರಿದ್ದರು. ಇದು ಸರಿಯಾದ ಸಮಯವಲ್ಲ ಎಂದು ತಿಳಿದು ವಾಪಸ್ ಬಂದೆ. ಅಷ್ಟ್ಟು ಬಿಟ್ಟರೆ ಕೆಪಿಸಿಸಿ ಹತ್ತಿರ ನಿಂತಿರಲಿಲ್ಲ. ತಾಲೂಕಿನಲ್ಲಿರುವ ಸಮಸ್ಯೆ ಬಗೆಹರಿಸಲು ಬಂದಿದ್ದೇನೆಯೇ ಹೊರತು ಯಾವ ರಾಜಕಾರಣಿ ಮನೆ ಮುಂದೆ ಹೋಗಿ ನನಗೆ ಅಧಿಕಾರ ನೀಡುವಂತೆ ಕೇಳುವವನಲ್ಲ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಎಂದು ಹೇಳಿದರು.

    ಇಂದು ಕೆಲವು ಕಡೆಗಳಲ್ಲಿ 700 ಅಡಿ ಬೋರ್‌ವೆಲ್ ಕೊರೆಸಿದರೂ ನೀರು ಬರುತ್ತಿಲ್ಲ. ಆದರೆ ನಾನು 7 ಕೆರೆಗಳನ್ನು ಕಟ್ಟಿದ್ದು ಎಲ್ಲಿ ಬೋರ್‌ವೆಲ್ ಕೊರೆಸಿದರೂ 350 ಅಡಿಗೆ ನೀರು ಬರುತ್ತದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕಿದೆ ಎಂದರು.

    ತಾಲೂಕಿನಲ್ಲಿ ಕ್ಷೇತ್ರದ ಸಾವಿರಾರು ಯುವಕರು ಉದ್ಯೋಗಕ್ಕಾಗಿ ಬೇರೆ ಬೇರೆ ಜಿಲ್ಲೆಗಳಿಗೆ ಹೋಗುತ್ತಿದ್ದಾರೆ. ತಾಲೂಕಿನ ಅಭಿವೃದ್ಧಿಯ ಜತೆಗೆ ಹಾಲು ಉತ್ಪಾದನಾ ಕೇಂದ್ರ ತೆರೆದು ತಾಲೂಕಿನಲ್ಲೇ ಯುವಕರಿಗೆ ಉದ್ಯೋಗ ಸಿಗುವಂತೆ ಮಾಡಬೇಕೆಂಬ ಉದ್ದೇಶವಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು. ಮುಂದಿನ ನಡೆಯ ಬಗ್ಗೆ ನಿಮ್ಮೆಲ್ಲರ ಅಭಿಪ್ರಾಯ ಪಡೆದು, ಅದರಂತೆ ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ತಮ್ಮ ಮುಂದಿನ ನಡೆಯನ್ನು ಗೌಪ್ಯವಾಗಿರಿಸಿದರು.ಬೇರೆಯವರಂತೆ ಹಣ ಬರುತ್ತದೆ ರಾಜಕೀಯ ಮಾಡೋಣ ಎಂದು ಬಂದವನಲ್ಲ. ನನ್ನ ಕೆಲಸ ಮಾಡಿಕೊಂಡು ನಾವು ಗಳಿಸಿದ ಹಣದಿಂದಲೇ ಕೆಲಸ ಮಾಡಿಕೊಂಡು ಬಂದಿದ್ದೇನೇ ಹೊರತು ಬೇರೆ ಹಣದಿಂದಲ್ಲ. ತಾಲೂಕು ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ ಎಂದರು.

    ನಾನು ಕಚೇರಿ ಮುಚ್ಚಿಕೊಂಡು ಹೋಗಿಲ್ಲ. ನನಗಿರುವುದು ಒಂದೇ ಮನೆ. ನಾನು ನಿಮ್ಮೊಂದಿಗೆ ಇರುತ್ತೇನೆ. ಏನೇ ಕಷ್ಟವಿದ್ದರೂ ತಿಳಿಸುವಂತೆ ಮನವಿ ಮಾಡಿದರು. ಈ ವೇಳೆ ಹಲವಾರು ಮುಖಂಡರು ಮಾತನಾಡಿ, ನಿಮ್ಮ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು. ಮುಖಂಡರಾದ ಎನ್. ರವಿಕುಮಾರ್, ಪರಮೇಶ್, ಲೋಕೇಶ್, ಬಿಳಿಗೂಲಿ ರಾಮೇಗೌಡ, ಜಮೀರ್, ಆಸಿಮ್, ರಾಜೇಗೌಡ, ವೆಂಕಟೇಶ್, ಕಾಂತರಾಜ್, ಹೇಮಂತ್ ಕುಮಾರ್, ರವೀಂದ್ರ, ವಸಂತ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts