More

    ಎಂ-ಸ್ಯಾಂಡ್, ಜಲ್ಲಿಗೆ ಕೃತಕ ಅಭಾವ ; ಸಿವಿಲ್ ಕಾಮಗಾರಿಗಳಿಗೆ ಗ್ರಹಣ ; ಬೀದಿಗೆ ಬಿದ್ದ ಶ್ರಮಿಕರ ಬದುಕು ಅಭಿವೃದ್ಧಿಗೆ ಕಂಟಕ

    ತುಮಕೂರು: ಇತ್ತೀಚಿನ ಕೆಲವು ಅವಘಡದ ಪರಿಣಾಮವಾಗಿ ರಾಜ್ಯಾದ್ಯಂತ ಕ್ರಷರ್‌ಗಳಲ್ಲಿ ಸ್ಫೋಟಕ ವಸ್ತುಗಳ ಬಳಕೆಗೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ. ಇದೇ ಕಾರಣದಿಂದ ಬಹುತೇಕ ಕ್ವಾರಿಗಳಲ್ಲಿ ಯಂತ್ರಗಳು ಸ್ಥಗಿತವಾಗಿವೆ. ಕಚ್ಚಾ ವಸ್ತುಗಳಿಲ್ಲದೆ ರಾಜ್ಯದೆಲ್ಲೆಡೆ ಸಿವಿಲ್ ಕಾಮಗಾರಿಗಳಿಗೆ ಗ್ರಹಣ ಬಡಿದಂತಾಗಿದೆ.

    ಶಿವಮೊಗ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಹುತೇಕ ಕ್ರಷರ್‌ಗಳು ಕಳೆದೈದು ದಿನದಿಂದ ಸ್ಥಗಿತವಾಗಿವೆ. ಹಾಗಾಗಿ, ಗುಣಮಟ್ಟಕ್ಕೆ ಹೆಸರಾಗಿರುವ ತುಮಕೂರು ಜಿಲ್ಲೆಯ ಎಂ.ಸ್ಯಾಂಡ್, ಜಲ್ಲಿ, ಜಿಎಸ್‌ಬಿ, ಡಸ್ಟ್, ವಾಟರ್‌ವಾಶ್ ಮತ್ತಿತರ ಕಚ್ಚಾ ಸಾಮಗ್ರಿಗಳಿಗೆ ಹೊರ ಜಿಲ್ಲೆಗಳಲ್ಲಿ ವಿಪರೀತ ಬೇಡಿಕೆ ಸೃಷ್ಟಿಯಾಗಿದ್ದು ಹಿಗ್ಗಾಮುಗ್ಗಾ ದರ ಏರಿಸಲಾಗಿದೆ.

    ಬೇಡಿಕೆಯನ್ನೇ ವರವಾಗಿಸಿಕೊಂಡಿರುವ ಕೆಲವು ಕ್ರಷರ್ ಮಾಲೀಕರು ಕೃತಕ ಅಭಾವ ಸೃಷ್ಟಿಸಿದ್ದು ಸ್ಥಳೀಯವಾಗಿ ಎಂ-ಸ್ಯಾಂಡ್, ಜಲ್ಲಿ ಸಿಗದೆ ಜಿಲ್ಲೆಯೆಲ್ಲೆಡೆ ಸರ್ಕಾರಿ ಹಾಗೂ ಖಾಸಗಿ ಕಾಮಗಾರಿಗಳಿಗೆ ಗ್ರಹಣ ಬಡಿದಿದೆ. ಇದನ್ನೇ ನಂಬಿಕೊಂಡು ಬದುಕುತ್ತಿರುವ ಲಕ್ಷಾಂತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆಗೆ ಪರಿಹಾರ ಸೂಚಿಸಬೇಕಿದೆ.

    ಏಕಾಏಕಿ ದರ ಹೆಚ್ಚಳ: ಕಾಮಗಾರಿಗೆ ಅಗತ್ಯವಾದ ಕಚ್ಚಾ ಸಾಮಗ್ರಿಗಳಿಗೆ ಬೇಡಿಕೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕ್ರಷರ್‌ಗಳು ಏಕಾಏಕಿ ದರ ಹೆಚ್ಚಳಕ್ಕೆ ಮುಂದಾಗಿರುವುದು ಕಟ್ಟಡ ನಿರ್ಮಾಣ ಹಾಗೂ ಸರ್ಕಾರಿ ಇಲಾಖೆ ಗುತ್ತಿಗೆದಾರರ ನೆಮ್ಮದಿ ಕೆಡಿಸಿದೆ.

    ಟನ್‌ಗೆ 100ರೂ. ಹಾಗೂ 80ರೂ. ಇದ್ದ ಪರ್ಮಿಟ್ ಶುಲ್ಕವನ್ನು 100ರೂ.ಗೆ ಏರಿಸಲಾಗಿದೆ.
    ಹಣಕಾಸು ವರ್ಷದ ಕೊನೆಯ ತಿಂಗಳಾದ ಮಾರ್ಚ್ ಅಂತ್ಯದಲ್ಲಿ ಸರ್ಕಾರಿ ಕಾಮಗಾರಿಗಳು ಹೆಚ್ಚು ನಡೆಯುವುದು ವಾಡಿಕೆ, ಕರೊನಾ ಕಾರಣಕ್ಕೆ ಈ ವರ್ಷ ಇನ್ನೂ ಹೆಚ್ಚಿನ ಕಾಮಗಾರಿಗಳು ಏಕಕಾಲದಲ್ಲಿ ಆರಂಭವಾಗಿವೆ. ಕ್ರಷರ್‌ಗಳಲ್ಲಿ ಕಚ್ಚಾ ಸಾಮಗ್ರಿಗಳ ಕೃತಕ ಅಭಾವ ಸೃಷ್ಟಿಸಿರುವ ಕಾರಣಕ್ಕೆ ಕೆಲಸಗಳು ಹಿಂದುಳಿಯಲಿವೆ, ವಿವಿಧ ಇಲಾಖೆಗಳ ಇಂಜಿನಿಯರ್ಸ್‌ಗಳು ತರಾತುರಿಯಲ್ಲಿ ಬಿಲ್ ಬರೆಯುವ ಸಾಧ್ಯತೆಗಳಿರುವುದರಿಂದ ಅಕ್ರಮಕ್ಕೂ ದಾರಿ ಮಾಡಿಕೊಡಲಿದೆ.

    ಶಿವಮೊಗ್ಗ, ದಾವಣಗೆರೆ ಭಾಗದಲ್ಲಿ ಬೇಡಿಕೆ: ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ಹೆಚ್ಚು ಸರ್ಕಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಎಂ-ಸ್ಯಾಂಡ್, ಜಲ್ಲಿ, ಜಿಎಸ್‌ಬಿ ಮತ್ತಿತರರ ಕಚ್ಚಾ ಸಾಮಗ್ರಿಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಇತ್ತೀಚಿಗೆ ಜಿಲಿಟಿನ್ ಸ್ಫೋಟದ ಕಾರಣಕ್ಕೆ ಆ ಜಿಲ್ಲೆಯಲ್ಲಿ ಕ್ರಷರ್‌ಗಳು ಸ್ಥಗಿತವಾಗಿದ್ದು ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕ್ರಷರ್‌ಗಳಿಂದ ಸಾವಿರಾರು ಟನ್ ದಿನನಿತ್ಯ ದುಬಾರಿ ಬೆಲೆ ಕೊಟ್ಟು ಕೊಂಡೊಯ್ಯಲಾಗುತ್ತಿದೆ. ದಾವಣಗೆರೆ, ಶಿವಮೊಗ್ಗ ಹಾಗೂ ಉತ್ತರ ಕರ್ನಾಟಕದಿಂದ ವಿವಿಧ ವಸ್ತುಗಳನ್ನು ಬೆಂಗಳೂರಿಗೆ ತರುವ ಟಿಪ್ಪರ್‌ಗಳು ವಾಪಸಾಗುವಾಗ ಖಾಲಿ ಹೋಗುವ ಬದಲಾಗಿ ಕ್ರಷರ್‌ಗಳಿಂದ ಜಲ್ಲಿ, ಎಂ.ಸ್ಯಾಂಡ್ ತುಂಬಿಕೊಂಡು ತೆರಳಲು ಆರಂಭಿಸಿರುವುದು ಕ್ರಷರ್‌ಗಳಿಗೆ ಹಬ್ಬವಾಗಿದ್ದು ಏಕಾಏಕಿ ದರ ಹೆಚ್ಚಿಸಿದ್ದಾರೆ, ಸ್ಥಳೀಯರಿಗೆ ವಸ್ತುಗಳು ಸಿಗದಂತೆ ಕೃತಕ ಅಭಾವ ಸೃಷ್ಟಿಸಲಾಗಿದೆ.

    ತೂಕದಲ್ಲಿಯೂ ಮಹಾಮೋಸ: ಹೊರ ಜಿಲ್ಲೆಗಳಿಂದ ಬರುತ್ತಿರುವ ಟಿಪ್ಪರ್‌ಗಳಿಗೆ ನೀರುಮಿಶ್ರಿತ ಎಂ.ಸ್ಯಾಂಡ್, ಡಸ್ಟ್ ತುಂಬಿ ತೂಕ ಹಾಕಿ ಮೋಸ ಮಾಡುವ ಕೆಲಸವೂ ಕ್ರಷರ್‌ಗಳಲ್ಲಿ ನಡೆಯುತ್ತಿದೆ ಎಂಬ ದೂರುಗಳಿವೆ. ಎಂ- ಸ್ಯಾಂಡ್‌ಗೆ ನೀರು ಹಾಕಿದರೆ ಅದರ ತೂಕ ದುಪ್ಪಟ್ಟಾಗುತ್ತಿದ್ದು ಗ್ರಾಹಕರಿಗೆ ಮೋಸವಾಗಲಿದೆ. ಇದೇ ದಂಧೆ ವ್ಯಾಪಕವಾಗಿ ನಡೆಸಲು ಅನುಕೂಲವಾಗುವಂತೆ ಸ್ಥಳೀಯ ಟಿಪ್ಪರ್‌ಗಳಿಗೆ ಕಡಿವಾಣ ಹಾಕಿ ಹೊರ ಜಿಲ್ಲೆಯ ಟಿಪ್ಪರ್‌ಗಳಿಗೆ ಕಚ್ಚಾವಸ್ತು ನೀಡಲು ಆದ್ಯತೆ ನೀಡಲಾಗುತ್ತಿದೆ.

    ತುಮಕೂರು ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಟಿಪ್ಪರ್‌ಗಳಿದ್ದು ಪ್ರತಿನಿತ್ಯ ಕನಿಷ್ಠ 3 ಲೋಡ್ ಸಾಗಣೆ ಮಾಡುತ್ತಿದ್ದೆವು, ಸ್ಫೋಟಕ ಸಾಮಗ್ರಿ ಅಭಾವದಿಂದ ಬಹುತೇಕ ಕ್ರಷರ್‌ಗಳು ಸ್ತಬ್ಧವಾಗಿವೆ. ಜಿಲ್ಲೆಯೆಲ್ಲೆಡೆ ಸರ್ಕಾರಿ ಹಾಗೂ ಖಾಸಗಿ ಕಾಮಗಾರಿಗಳು ನಿಂತಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಿವೆ.
    ರಾಕೇಶ್ ಟಿಪ್ಪರ್ ಮಾಲೀಕ, ತುಮಕೂರು

    ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೆ ಕೂಡಲೇ ಇಲಾಖೆ ಗಮನಕ್ಕೆ ತಂದು ಲೈಸೆನ್ಸ್ ಪಡೆದು ನಿಯಮಾನುಸಾರ ಕ್ರಷರ್ ನಡೆಸಬೇಕು, ನಿಯಮ ಪಾಲಿಸಿದೆ ಬಂಡೆ ಬ್ಲಾಸ್ಟ್ ಮಾಡುತ್ತಿರುವ ಹಿನ್ನೆಲೆಯಲ್ಲಿ ರೈತರು, ಜನ ಸಾಮಾನ್ಯರಿಗೆ ತೊಂದರೆ ಆಗುತ್ತದೆ ಎಂಬ ದೂರಿದೆ, ಸ್ಫೋಟಕ ವಸ್ತು ಬಳಸುವ ಬಗ್ಗೆ ಮಾಹಿತಿ ನೀಡಬೇಕು, ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಪಡೆದು ಕ್ರಷರ್ ನಡೆಸಬೇಕು.
    ಅಜಯ್ ಉಪವಿಭಾಗಾಧಿಕಾರಿ, ತುಮಕೂರು ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts