More

    ದವಾಖಾನೆಗೆ ದೊರಕಿತು ಚಿಕಿತ್ಸೆ ಭಾಗ್ಯ!

    ಮೋರಟಗಿ: ಚಿಕಿತ್ಸೆ ನೀಡುವ ವೈದ್ಯರಿಲ್ಲದೆ ಭಣಗುಡುತ್ತಿದ್ದ ಗ್ರಾಮದ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಾಲೂಕು ಆರೋಗ್ಯ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಲು ಮುಂದಾದ ಘಟನೆ ನಡೆದಿದೆ.

    ಜಿಪಂ ಸಿಇಒ ರಾಹುಲ್ ಶಿಂಧೆ ಅವರ ಆದೇಶದ ಮೇರೆಗೆ ತಾಲೂಕು ಆರೋಗ್ಯಾಧಿಕಾರಿ ರಾಮಕೃಷ್ಣ ಇಂಗಳೆ ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಆಗಮಿಸಿ ಕೆಟ್ಟು ನಿಂತಿದ್ದ ಬೋರವೆಲ್ ದುರಸ್ತಿಗೆ ಕ್ರಮ ಕೈಗೊಂಡರು. ನೀರು ಹರಿಯುವವರೆಗೆ ನಿಂತು ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ಪರಿಶೀಲಿಸಿ ರೋಗಿಗಳಿಗೆ ಅನುಕೂಲ ಕಲ್ಪಿಸುವಂತೆ ಸಿಬ್ಬಂದಿಗೆ ಸೂಚಿಸಿದರು.

    ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ವಿಜಯವಾಣಿ ದರಕಾರಿಲ್ಲದ ದವಾಖಾನೆ…! ಎಂಬ ಶೀರ್ಷಿಕೆಯಡಿ ಶನಿವಾರ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

    30ಕ್ಕೂ ಹೆಚ್ಚು ಗ್ರಾಮಗಳ ಜನತೆಗೆ ಆಸರೆಯಾದ ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಅಂಬುಲೆನ್ಸ್ ಹಾಗೂ ನೀರಿನ ವ್ಯವಸ್ಥೆ ಇಲ್ಲದ ಸಮಸ್ಯೆಗಳನ್ನು ಬಿಂಬಿಸುವ ಮೂಲಕ ಜಿಲ್ಲಾಡಳಿತದ ಗಮನ ಸೆಳೆದಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾದರು. ಕೂಡಲೇ ವೈದ್ಯರನ್ನು ನೇಮಿಸುವ ಜತೆಗೆ ಆರೋಗ್ಯ ಕೇಂದ್ರಕ್ಕೆ ಅಂಬುಲೆನ್ಸ್ ಕೂಡ ನೀಡಲಾಗುವುದು ಎಂದರು.
    ಗಂಗಾಧರ ವಸ್ತ್ರದ, ರಾಯಣ್ಣ ಸೊನ್ನಳ್ಳಿ, ಶರಣು ಪೂಜಾರಿ, ಸಂಜಯ ಮೋರೆ, ಶುಶ್ರೂಕಿ ಪ್ರೇಮಲತಾ ಪೇಟೆಪೊಂಗಾರಿ, ಪರಶುರಾಮ ಕೈನೂರ ಇತರರಿದ್ದರು

    ವಿವಿ ಕಳಕಳಿಗೆ ಮೆಚ್ಚುಗೆ

    ಎರಡು ವರ್ಷಗಳಿಂದ ವೈದ್ಯಾಧಿಕಾರಿ ಇಲ್ಲದೆ ತೊಂದರೆ ಅನುಭವಿಸುತ್ತಿದ್ದ ಗ್ರಾಮಸ್ಥರ ಮೊರೆ ಆಲಿಸಿ ವಿಶೇಷ ವರದಿ ಪ್ರಕಟಿಸಿದ ವಿಜಯವಾಣಿ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ವೈದ್ಯರ ನಿಯೋಜನೆ ಭರವಸೆ ದೊರಕಿದ್ದರಿಂದ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಸಿಂದಗಿ ಆಸ್ಪತ್ರೆಗೆ ತೆರಳುವುದು ತಪ್ಪಲಿದೆ. ಈ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿ ಅನುಕೂಲ ಕಲ್ಪಿಸಿದ ವಿಜಯವಾಣಿ ಕಳಕಳಿ ಶ್ಲಾಘನೀಯ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಮೋರಟಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಎರಡು ದಿನಗಳಲ್ಲಿ ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗುವುದು. ವಾರದೊಳಗೆ ಜಿಡಿಎಂಒ ವೈದ್ಯಾಧಿಕಾರಿಯನ್ನು ನೇಮಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲಾಗುವುದು.
    ಡಾ.ರಾಜಕುಮಾರ್ ಯರಗಲ್, ಜಿಲ್ಲಾ ಆರೋಗ್ಯಾಧಿಕಾರಿ, ವಿಜಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts