More

    ಮೀನು ವ್ಯಾಪಾರಕ್ಕೆ ಶುಕ್ರ ದೆಸೆ, ದ.ಕ, ಉಡುಪಿಯಲ್ಲಿ 5 ಕೆಎಫ್‌ಡಿಸಿ ಏಜೆನ್ಸಿ ಮಳಿಗೆ

    ಪ್ರಕಾಶ್ ಮಂಜೇಶ್ವರ ಮಂಗಳೂರು

    ಮೀನು ವ್ಯಾಪಾರ ಇಂದು ನಿರ್ದಿಷ್ಟ ಸಮುದಾಯ, ಜನವರ್ಗದ ಜೀವನ ಮಾರ್ಗವಾಗಿ ಉಳಿದಿಲ್ಲ. ಬಹುತೇಕ ಜಾತಿಯ ಜನರು, ಉನ್ನತ ವ್ಯಾಸಂಗ ನಡೆಸಿದವರೂ ಮೀನು ವ್ಯಾಪಾರ ನಡೆಸಲು ಮುಂದೆ ಬರುತ್ತಿದ್ದಾರೆ. ಇಂತಹ ಅವಕಾಶಗಳನ್ನು ಬಳಸಿಕೊಳ್ಳಲು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮವೂ (ಕೆಎಫ್‌ಡಿಸಿ) ಸಿದ್ಧವಾಗಿದೆ.

    ಬೆಂಗಳೂರು ನಗರವೊಂದರಲ್ಲೇ 200 ಖಾಸಗಿ ಮೀನಿನ ಮಳಿಗೆಗಳು ಆರಂಭಗೊಂಡಿವೆ. ಕೆಎಫ್‌ಡಿಸಿಯಿಂದ ಏಜೆನ್ಸಿ ಪಡೆದು ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಒಟ್ಟು 5 (ಮೂಡುಬಿದಿರೆ-2, ವಾಮಂಜೂರು, ಹಿರಿಯಡ್ಕ, ಹೆಬ್ರಿಯಲ್ಲಿ ಒಂದೊಂದು) ಹಾಗೂ ಬೆಂಗಳೂರಿನಲ್ಲಿ 21 ಹೊಸ ಮೀನು ಮಾರಾಟ ಮಳಿಗೆಗಳು ಆರಂಭವಾಗುತ್ತಿವೆ ಎನ್ನುತ್ತಾರೆ ಕೆಎಫ್‌ಡಿಸಿ ಅಧ್ಯಕ್ಷ ನಿತಿನ್ ಕುಮಾರ್.

    ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಹಿಂದೆ ದಿನಂಪ್ರತಿ ಒಬ್ಬರು ಅಥವಾ ಇಬ್ಬರು ಮೀನು ವ್ಯಾಪಾರಿಗಳು ಮಾರಾಟಕ್ಕೆ ಬರುತ್ತಿದ್ದ ಜಾಗದಲ್ಲಿ ಇಂದು ದಿನಪೂರ್ತಿ 6-7 ಜನರು ಬರುತ್ತಿದ್ದಾರೆ. ಇದರಿಂದ ಇದ್ದ ಆದಾಯವೇ ಹಂಚಿಹೋಗುತ್ತದೆ ಎಂದು ಇಲ್ಲಿ ಹಿಂದಿನಿಂದಲೇ ಇದ್ದ ವ್ಯಾಪಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಈ ನಡುವೆ, ಮೀನು ತಿನ್ನುವವರ ಸಂಖ್ಯೆಯೂ ಹೆಚ್ಚಿರುವುದು ಗಮನಾರ್ಹ.

    ಖಾಸಗಿ ಸಂಸ್ಥೆಯಿಂದ ಮಳಿಗೆ: ಕರೊನಾ ಜನರ ಆಲೋಚನೆ ಮಾರ್ಗವನ್ನೇ ಬದಲಾಯಿಸಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗ ಕಳೆದುಕೊಂಡು ವಾಪಸಾದ ಅನೇಕ ಮಂದಿ ಊರಿನಲ್ಲೇ ಅಧಿಕ ಬಂಡವಾಳದ ಆವಶ್ಯಕತೆ ಇಲ್ಲದ ಮೀನು ಮಾರಾಟ, ಬೇಕರಿ, ತರಕಾರಿ ಮಾರಾಟದಂತಹ ವಿವಿಧ ವ್ಯಾಪಾರಗಳಲ್ಲಿ ಬದುಕುವ ದಾರಿ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

    ವರ್ಷದ ಹಿಂದಿನ ತನಕವೂ ಮೀನು ವ್ಯಾಪಾರ ನಿರ್ದಿಷ್ಟ ಸಮುದಾಯ, ಜನ ವರ್ಗದ ಉದ್ಯೋಗ ಆಗಿತ್ತು. ಈ ವಾದಕ್ಕೆ ಪ್ರದೇಶದಲ್ಲಿ ಕೆಲವು ಮಾತ್ರ ಅಪವಾದಗಳಿರುತ್ತಿದ್ದವು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮೀನು ಮಾರಾಟ ಮಳಿಗೆಗಳು, ಸ್ಟಾಲ್‌ಗಳು ಮಾರುಕಟ್ಟೆ ಹೊರತುಪಡಿಸಿ ಅಲ್ಲಲ್ಲಿ ಆರಂಭಗೊಂಡಿವೆ. ಜಾತಿ ಮತ ಭೇದವಿಲ್ಲದೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವುದು ಕಂಡುಬರುತ್ತಿದೆ. ಖಾಸಗಿ ಸಂಸ್ಥೆಗಳು ಸುಸಜ್ಜಿತ ಮಳಿಗೆಗಳನ್ನು, ಚೈನ್ ಮಾದರಿಯಲ್ಲಿ ತೆರೆಯುತ್ತಿವೆ. ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದ ಯುವಕರೂ ಮೀನು ಮಾರಾಟವನ್ನು ಪ್ರಮುಖ ಉದ್ಯಮ ಎಂದು ಪರಿಗಣಿಸಿ ಮಳಿಗೆಗಳನ್ನು ತೆರೆಯುತ್ತಿರುವುದನ್ನು ಕಾಣಬಹುದು.

    ಮತ್ಸೃ ಕ್ಷಾಮ ಮುಂದುವರಿಕೆ: ದೊಡ್ಡಮಟ್ಟದಲ್ಲಿ ಮತ್ಸೊೃೀದ್ಯಮ ಅವಕಾಶಗಳ ಬಾಗಿಲು ತೆರೆಯುವ ಹೊತ್ತಲ್ಲೇ ಮಂಗಳೂರು ಭಾಗದಲ್ಲಿ ಮತ್ಸೃ ಕ್ಷಾಮ ಮುಂದುವರಿದಿದೆ. ಕಡಲಿಗೆ ಇಳಿದರೆ ಡೀಸೆಲ್ ಖರ್ಚು ಭರಿಸುವುದು ಕೂಡ ಕಷ್ಟವಾಗುತ್ತಿದೆ ಎನ್ನುವುದು ಬೋಟ್ ಮಾಲೀಕರ ಅಳಲು. ಆದ್ದರಿಂದ ರಜೆಯಲ್ಲಿ ಊರಿಗೆ ತೆರಳಿರುವ ಆಳ ಸಮುದ್ರ ಮೀನುಗಾರಿಕೆ ಬೋಟ್ ಸಿಬ್ಬಂದಿಯಲ್ಲಿ ‘ಸ್ವಲ್ಪ ದಿನ ರಜೆ ಮುಂದುವರಿಸಿ’ ಎಂದು ಕರಾವಳಿಯ ಕೆಲ ಬೋಟ್ ಮಾಲೀಕರು ಮನವಿ ಮಾಡಿಕೊಂಡಿದ್ದಾರೆ. ಆಳ ಸಮುದ್ರ ಮೀನುಗಾರಿಕೆ ನಡೆಸುತ್ತಿರುವ ಶೇ.70 ಬೋಟ್‌ಗಳು ಕಡಲಿಗೆ ಇಳಿಯುತ್ತಿಲ್ಲ. ಒಂದು ಕಡೆ ಮೀನು ಇಲ್ಲ. ಇನ್ನೊಂದು ಕಡೆ ಡೀಸೆಲ್ ದರ ಏರಿಕೆ ಆಗಿದೆ. ಪರಿಣಾಮ ಶೇ.70 ಬೋಟುಗಳು ಕಡಲಿಗೆ ಇಳಿಯುತ್ತಿಲ್ಲ ಎನ್ನುತ್ತಾರೆ ಮಲ್ಪೆಯ ಮೀನುಗಾರರ ಮುಖಂಡ ಸತೀಶ್ ಕುಂದರ್. ಆಂಧ್ರ ಪ್ರದೇಶ, ತಮಿಳುನಾಡಿನ ಮೀನುಗಳು ಭಾರಿ ಪ್ರಮಾಣದಲ್ಲಿ ಮಂಗಳೂರು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

    ಹೆಚ್ಚಿದ ಪೈಪೋಟಿ: ಹಳ್ಳಿಗಳಲ್ಲಿ ಮೀನು ಮಾರಾಟ ದ್ವಿಚಕ್ರ ವಾಹನಗಳ ಮೂಲಕವೇ ಹೆಚ್ಚು ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಆಮ್ನಿ, ಪಿಕಪ್ ವಾಹನಗಳಲ್ಲಿ ಮೀನು ಮಾರಾಟ ಮಾಡಲಾಗುತ್ತಿದೆ. ಮಲ್ಪೆ ಅಥವಾ ಮಂಗಳೂರಿನಿಂದ ತಂದ ಮೀನನ್ನು ನೇರವಾಗಿ ಸ್ಪರ್ಧಾತ್ಮಕ ದರದಲ್ಲಿ ಮಾರುತ್ತಿರುವುದರಿಂದ ಗ್ರಾಹಕರಿಗೂ ಆಯ್ಕೆಗಳು ಹೆಚ್ಚಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts