More

    ಕಡಿಮೆ ವೆಚ್ಚದಲ್ಲಿ ಜನಸಮಾನ್ಯರಿಗೆ ಚಿಕಿತ್ಸೆ ಕೊಡಿ

    ಘಟಪ್ರಭಾ: ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ ಕಡಿಮೆ ವೆಚ್ಚದಲ್ಲಿ ಕರೊನಾ ಚಿಕಿತ್ಸೆ ನೀಡಲು ನಿರ್ಧರಿಸಿರುವ ಜಗದ್ಗುರು ಗುರುಸಿದ್ಧೇಶ್ವರ ಸಹಕಾರಿ (ಜೆಜಿಕೋ) ಆಸ್ಪತ್ರೆಯಿಂದ ಜನಸಮಾನ್ಯರಿಗೆ ಅನುಕೂಲವಾಗಲಿದೆ ಎಂದು ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ
    ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದ್ದಾರೆ.

    ಇಲ್ಲಿನ ಜಗದ್ಗುರು ಗುರುಸಿದ್ಧೇಶ್ವರ ಸಹಕಾರಿ ಆಸ್ಪತ್ರೆಯಲ್ಲಿ ಸರ್ಕಾರದ ಆದೇಶದಂತೆ ಕರೊನಾ ಸೋಂಕಿತರ ಚಿಕಿತ್ಸೆಯ ಕಾರ್ಯಾರಂಭಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಮಹಾಮಾರಿ ಕರೊನಾಕ್ಕೆ ಎಲ್ಲರೂ ಭಯಪಡುವ ಸಂದರ್ಭದಲ್ಲಿ ಇಲ್ಲಿನ ಆಡಳಿತ ಮಂಡಳಿಯವರು ಈ ರೋಗಕ್ಕೆ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲು ಪ್ರಾರಂಭಿಸಿರುವುದು ಉತ್ತಮ ಬೆಳವಣಿಗೆ. ಮೂರುಸಾವಿರ ಮಠದ ಲಿಂ.ಜಗದ್ಗುರು ಗುರುಸಿದ್ಧೇಶ್ವರರು ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡುವುದಕ್ಕಾಗಿ ಆರಂಭಿಸಿದ ಈ ಆಸ್ಪತ್ರೆಯು ಜನರ ಆರೋಗ್ಯ ರಕ್ಷಣೆಯಲ್ಲಿ ಇನ್ನೂ ಹೆಚ್ಚಿನ ಪಾತ್ರವಹಿಸಲಿ ಎಂದು ಹಾರೈಸಿದರು.

    ಇಂದು ಕೆಲವು ಖಾಸಗಿ ಆಸ್ಪತ್ರೆಯಲ್ಲಿ ಕರೊನಾ ಚಿಕಿತ್ಸೆ ಪಡೆದು ಜೀವ ಉಳಿಸಿಕೊಳ್ಳಬೇಕಾದರೆ, ಗಳಿಸಿದ ಆಸ್ತಿಯನ್ನೆಲ್ಲ ಮಾರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಹಾಗೂ ಬಡವರು ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲದಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಎಲ್ಲ ಆಸ್ಪತ್ರೆಗಳಲ್ಲಿ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ದೊರೆಯುವಂತಾಗಲಿ ಎಂದರು.

    ಮುಖ್ಯವೈದ್ಯಾಧಿಕಾರಿ ಡಾ.ಬಿ.ಕೆ.ಪಾಟೀಲ ಮಾತನಾಡಿ, ಘಟಪ್ರಭಾದಲ್ಲಿ ಕೋವಿಡ್ ಹೆಲ್ತ್ ಸೆಂಟರ್ ಅನ್ನು ಪ್ರಥಮವಾಗಿ ತಮ್ಮ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದ್ದು, ಎಲ್ಲಾ ಸೌಲತ್ತುಗಳನ್ನು ಒದಗಿಸಲಾಗಿದೆ. 4 ಹೈಪ್ರೋ ಯಂತ್ರ, 2 ವೆಂಟಿಲೇಟರ್, 4 ಎಚ್‌ಎಫ್‌ಎನ್‌ಸಿ ಯಂತ್ರ, 30 ಆಕ್ಸಿಜನ್ ಬೆಡ್ ಸೇರಿ 50 ಹಾಸಿಗೆ ವ್ಯವಸ್ಥೆ ಮಾಡಲಾಗಿದ್ದು, 10 ವೈದ್ಯರು ಸೇರಿ 25ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಒಂದು ದಿನಕ್ಕೆ ಜನರಲ್ ವಾರ್ಡಿನಲ್ಲಿ ಎಲ್ಲಾ ವ್ಯವಸ್ಥೆ ನೀಡಿ 8 ಸಾವಿರ ದರ ನಿಗದಿ ಮಾಡಲಾಗಿದೆ ಎಂದು ಹೇಳಿದರು.

    ಜೆ.ಜಿ.ಸಹಕಾರಿ ಆಸ್ಪತ್ರೆಯ ಚೇರ್ಮನ್ ಬಿ.ಆರ್.ಪಾಟೀಲ, ನಿರ್ದೇಶಕರಾದ ಅಪ್ಪಯ್ಯ ಬಡಕುಂದ್ರಿ, ಚಂದ್ರಶೇಖರ ಕಾಡದವರ, ಸುರೇಶ ಕಾಡದವರ, ಎಸ್.ಎಂ.ಚಂದರಗಿ, ಬಿ.ಎಂ.ಬಂಡಿ, ಆರ್.ಜಿ.ಪತ್ತಾರ, ಆಶಾದೇವಿ ಕತ್ತಿ ಹಾಗೂ ಪ್ರಾಚಾರ್ಯ ಡಾ.ಜೆ.ಕೆ.ಶರ್ಮಾ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts