More

    ಭಾವಗೀತೆಗೆ ಮನಸೋತ ಶಿಕ್ಷಣ ಪ್ರೇಮಿಗಳು

    ವಿಜಯಪುರ: ಮುಸ್ಸಂಜೆಯ ಮಬ್ಬಿನಲ್ಲಿ, ತಂಪಾದ ವಾತಾವರಣದಲ್ಲಿ, ಮಿನುಗುವ ಬಣ್ಣದ ದೀಪಗಳ ಮಧ್ಯದಲ್ಲಿ, ಭವ್ಯ ಅಲಂಕೃತ ವೇದಿಕೆಯಲ್ಲಿ ನಾಡಿನ ಖ್ಯಾತ ಗಾಯಕರ ಕಂಠದಿಂದ ಹೊರಹೊಮ್ಮಿದ ಸಂಗೀತ, ಹಾಸ್ಯ ಹಾಗೂ ನೃತ್ಯ ವೈಭವ ಕೆಲ ಹೊತ್ತು ಪ್ರೇಕ್ಷಕರನ್ನು ಮೈ ಮರೆಯುವಂತೆ ಮಾಡಿತು !

    ಇಲ್ಲಿನ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ವಿಜಯವಾಣಿ ಹಾಗೂ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮೂರು ದಿನದ ಎಜುಕೇಶನ್ ಎಕ್ಸಪೋದ ಮೊದಲ ದಿನವಾದ ಸೋಮವಾರ ಸಂಜೆ ನಡೆದ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಗಳು ಜನಮನ ಸೂರೆಗೊಂಡವು. ಮಾತ್ರವಲ್ಲ, ಭಾವಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಖ್ಯಾತ ಗಾಯಕರು ಒಬ್ಬರಿಗಿಂತ ಒಬ್ಬರು ಮೀರಿಸುವಂತೆ ಸುಂದರ ಗೀತೆ ಪ್ರಸ್ತುತ ಪಡಿಸಿ ಸಂಗೀತಾಸಕ್ತರಿಂದ ಷಹಬ್ಬಾಷ್‌ಗಿರಿ ಗಿಟ್ಟಿಸಿಕೊಂಡರು.

    ಇದನ್ನೂ ಓದಿ: ವಿದ್ಯಾವಂತರು ಕೃಷಿಯತ್ತ ಹೊರಳಲಿ-ಡಾ. ರವೀಂದ್ರ ಬೆಳ್ಳಿ ಸಲಹೆ

    ಕಿರುತೆರೆಯ ಖ್ಯಾತ ಗಾಯಕಿ ಸಾಕ್ಷಿ ಹಿರೇಮಠ ಗಾಯನಸುಧೆಗೆ ನೆರೆದ ಜನಸ್ತೋಮ ಕೇಕೆ, ಸಿಳ್ಳೆ ಹಾಕಿ, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿತು. ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕು ಎಂಬ ಗೀತೆ ಪ್ರಸ್ತುತ ಪಡಿಸುತ್ತಿದ್ದಂತೆ ಜನ ಭಾವಲೋಕ ಪ್ರವೇಶಿಸಿದರು.

    ಜನುಮ ನೀಡುತ್ತಾಳೆ ಕನ್ನಡತಾಯಿ, ಪಾಪ ತೊಳೆಯುತ್ತಾಳೆ ಕಾವೇರಿ ತಾಯಿ ಎಂದು ಸಾಕ್ಷಿ ಸುಶ್ರಾವ್ಯವಾಗಿ ಹಾಡು ಹೇಳುತ್ತಿದ್ದಂತೆ ಜನರ ನರನಾಡಿಗಳಲ್ಲಿ ನಾಡು ನುಡಿಯ ಅಭಿಮಾನ ಪುಟಿದೇಳುವಂತೆ ಮಾಡಿತು.

    ನೀ ಸಿಗದೇ ಬಾಳೊಂದು ಬೇಳೇ ಕೃಷ್ಣಾ ಎಂಬ ಹಾಡು ಪ್ರೇಕ್ಷಕರನ್ನು ಭಕ್ತಿಯ ಸುಧೆಯಲ್ಲಿ ತೇಲಾಡುವಂತಾಗಿಸಿತು.

    ಗಾಯಕ ಪಂಡಿತ ದಾದಾ ಅವರ ಹಿಂದಿ ಹಾಡು, ಖುಷಿ ಪಡಸಾಲಿ ಅವರ ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ನಾನು ಎಂಬ ಗೀತೆಗೆ ಜನ ಹುಚ್ಚೆದ್ದು ಕುಣಿದಾಡಿದರು. ಎಂ.ಎಂ. ಶಿವಶಂಕರ ತಮ್ಮ ಕಂಚಿನ ಕಂಠದಲ್ಲಿ ‘ಮುಂಗೋಳಿ ಕೂಗಿತ್ತು ಕನ್ನಡದ ಪದ ಹಾಡಿ ರಥವೇರಿ ಬರುತ್ತಿದ್ದ ನೇಸರಗೆ’ ಎಂದು ಧ್ವನಿ ಏರಿಸಿ ಹಾಡುತ್ತಿದ್ದಂತೆ ಮೈ ಮನಗಳಲ್ಲಿ ವಿದ್ಯುತ್ ಸಂಚಾರವಾದಂತಾಯಿತು.

    ವಿಶ್ವಜಿತ ಜೆ.ಎಸ್. ಅವರು ‘ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ’ ಎಂಬ ಭಾವಗೀತೆ ಪ್ರಸ್ತುತ ಪಡಿಸಿದಾಗ ಮನದಲ್ಲಿ ಸದ್ಭಾವ ಮೂಡಿಸಿತು. ಜೇಷ್ಠ ಶಿವಾ ಅವರ ‘ಮುನಿಸು ತರವೇ ಮುಗುದೆ ಹಿತವಾಗಿ ನಗಲೂ ಬಾರದೆ’ ಎಂಬ ಭಾವಗೀತೆ, ಸುಭಾಸ ಡಿ ಅವರ ‘ನೀನಿಲ್ಲದೇ ನನಗೇನಿದೆ….ಮನಸ್ಸೆಲ್ಲಾ ನಿನ್ನಲ್ಲಿ ನೆಲೆಯಾಗಿದೆ..ಕನಸ್ಸೆಲ್ಲ ಕಣ್ಣಲ್ಲಿ ಸೆರೆಯಾಗಿದೆ…’ ಗೀತೆ ಹಾಗೂ ಸಮರ್ಥ ಹಿರೇಮಠ ಅವರ ‘ಸ್ನೇಹ ಅತಿ ಮಧುರ’ ಎಂಬ ಗೀತೆಗೆ ಜನರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದರು.

    ದ.ರಾ. ಬೇಂದ್ರೇ ವಿರಚಿತ ‘ದೇಹವೊಂದು ದೇವ ವೀಣೆ ನರ ನರವೂ ತಂತಿ ತಾನೆ’ ಎಂಬ ಹಾಡು ಹೇಳಿದ ಆನಂದ ಹೊನವಾಡ ಸಂಗೀತಾಸಕ್ತರ ಮನದಲ್ಲಿ ಕೆಲ ಕಾಲ ತಮ್ಮ ಛಾಪು ಅಚ್ಚೊತ್ತಿದ್ದರು. ಯಶೋದಾ ಜೋಷಿ, ಸೋನು ಬರಗಿ, ಕಿರಣ, ಟಿ.ಬಿ. ಪಲ್ಲೇದ, ಬಸಯ್ಯ ಹಿರೇಮಠ ಹೀಗೆ ಅನೇಕ ಗಾಯಕರು ತಮ್ಮ ಕಂಚಿನ ಕಂಠದಿಂದ ಸುಂದರ ಭಾವಗೀತೆ ಪ್ರಸ್ತುತ ಪಡಿಸುವ ಮೂಲಕ ಸಂಗೀತಾಸಕ್ತರ ಮನಗೆದ್ದರು.

    ಸಂಗೀತ ಕಾರ್ಯಕ್ರಮ ಕಣ್ಮನ ತುಂಬಿಕೊಳ್ಳಲು ಬಂದಿದ್ದ ಪುಟ್ಟ ಬಾಲಕಿ ಆದ್ಯ ಇದ್ದಕ್ಕಿದ್ದಂತೆ ತಾನೂ ಹಾಡುವುದಾಗಿ ವೇದಿಕೆ ಏರಿದಾಗ ಜನ ಆಕೆಯ ಸಂಗೀತ ಪ್ರೇಮಕ್ಕೆ ಚಪ್ಪಾಳೆ ತಟ್ಟಿದರು. ‘ಅಂಗಳದೊಳು ರಾಮನಾಡಿದ ಚಂದ್ರ ಬೇಕೆಂದು ತಾ ಹಠ ಮಾಡಿದ….ತಾಯಿಗೆ ಕೈ ಮಾಡಿದ ತೋರಿದ ದಿಟ್ಟಿಸಿ ಅವನ್ನನ್ನೊಮ್ಮೆ ನೋಡಿದ…..ಚಿಣ್ಣಿ-ಕೋಲು ಬೇಡವೆಂದು ಬೀಸಾಡಿದ’ ಎಂದು ಆದ್ಯಾ ರಾಗಬದ್ದವಾಗಿ ಹಾಡಿದಳು.

    ಹೊಟ್ಟೆ ಹುಣ್ಣಾಗಿಸಿದ ಹಾಸ್ಯ ಕಲಾವಿದ

    ಖ್ಯಾತ ಹಾಸ್ಯ ಕಲಾವಿದ ಪ್ರಶಾಂತ ಚೌಧರಿ ಎಂದಿನಂತೆ ತಮ್ಮ ಹಾಸ್ಯ ಚಟಾಕಿ ಹಾರಿಸುವ ಮೂಲಕ ಶಿಕ್ಷಣ ಮೇಳಕ್ಕೆ ಮೆರಗು ನೀಡಿದರು. ತಮ್ಮದೇ ಭಾಷಾ ಶೈಲಿ, ಹಾವ ಭಾವ, ಹಾಡು, ಜೋಕ್ಸ್, ಮಿಮಿಕ್ಸಿ ಮೂಲಕ ಪ್ರಶಾಂತ ಚೌಧರಿ ಪ್ರಶಾಂತವಾಗಿದ್ದ ಪ್ರೇಕ್ಷಕರ ಮನದಲ್ಲಿ ನಗೆ ಬುಗ್ಗೆ ಎಬ್ಬಿಸಿದರು. ಸುದೀರ್ಘ ಅವಧಿ ಹಾಸ್ಯದ ಹೊನಲು ಹರಿಸಿ ಪ್ರೇಕ್ಷಕರ ಮೆಚ್ಚುಗೆ ಗಿಟ್ಟಿಸಿಕೊಂಡರು. ಇವರೊಂದಿಗೆ ಆಗಮಿಸಿದ್ದ ಹಿರಿಯ ಕಲಾವಿದ ಆರ್.ಬಿ. ಮುದುಕಣ್ಣವರ ತಮ್ಮ ಹಳೆಯ ಕಾಲದ ಅನುಭವವನ್ನೇ ಹಾಸ್ಯವಾಗಿ ಹಂಚಿಕೊಂಡರು. ವಿಜಯವಾಣಿ ಹಾಗೂ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯಿಂದ ಸನ್ಮಾನಿಸಿ ಗೌರವಿಸಲಾಯಿತು.

    ಬಹುಮಾನ ವಿತರಣೆ

    ಭಾವಗೀತೆ ಸ್ಪರ್ಧೆಯಲ್ಲಿ ಆನಂದ ಹೊನವಾಡ ಪ್ರಥಮ, ಸೋನು ಬರಗಿ ದ್ವಿತೀಯ ಹಾಗೂ ಸಮರ್ಥ ಹಿರೇಮಠ ತೃತೀಯ ಸ್ಥಾನ ಪಡೆದರು. ಹಿರಿಯ ಗಾಯಕರಾದ ಹರೀಶ ಹೆಗಡೆ ಹಾಗೂ ಶ್ರೀಪಾಂಡುರಂಗ ಕುಲಕರ್ಣಿ ನಿರ್ಣಾಯಕರಾಗಿ ಭಾಗವಹಿಸಿದ್ದರು. ಸ್ಥಾನಿಕ ಸಂಪಾದಕರಾದ ಕೆ.ಎನ್. ರಮೇಶ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts