More

    ಪ್ರೇಮಕಥೆ: ನಾವು ಮುದ್ದಣ ಮನೋರಮೆಯಲ್ಲ!

    ಬದುಕಿನಲ್ಲಿ ಒಮ್ಮೆಯಾದರೂ ಎಲ್ಲರ ಎದೆಗೂಡಿನಲ್ಲಿ ಅರಳುವ ಪ್ರೇಮ ಒಂದು ಮಧುರ ಕ್ಷಣ. ಪ್ರೇಮ ನಿವೇದನೆಯ ತಲ್ಲಣಗಳು, ಅದಕ್ಕೆ ಬರುವ ಸಕಾರಾತ್ಮಕ ಪ್ರತಿಕ್ರಿಯೆ… ಅದರ ಪರಿಣಾಮವಾಗಿ ಉಂಟಾಗುವ ಉಲ್ಲಾಸ ಇನ್ನಷ್ಟು ಮಧುರ. ಆ ದಿನಗಳ ವಿರಹವೂ ಮಧುರ ಯಾತನೆಯೇ. ಅವೆಲ್ಲವನ್ನೂ ದಾಟಿ ಮದುವೆ ಎಂಬಲ್ಲಿಗೆ ಬಂದು ನಿಂತರೆ ಅದೇ ದೊಡ್ಡ ಖುಷಿ. ಮದುವೆಯ ನಂತರವೂ ಪ್ರೀತಿ ತಾಜಾ ಆಗಿಯೇ ಉಳಿದರಂತೂ ಅದು ಅಮರಪ್ರೇಮ. ಅಂಥ ಪ್ರೇಮದ ಬಗ್ಗೆ ಬರೆದು ಕಳಿಸಿ ಎಂದು ‘ವಿಜಯವಾಣಿ’ ನೀಡಿದ್ದ ಕರೆಗೆ ಸಾವಿರಾರು ಓದುಗರು ಸ್ಪಂದಿಸಿದ್ದಾರೆ. ಆಯ್ದ ಯಶಸ್ವೀ ನೈಜ ಪ್ರೇಮಕಥೆಗಳು ಇಲ್ಲಿವೆ.

    ಈ ಪ್ರೀತಿ ಹುಟ್ಟಲು ವಾರ, ಘಳಿಗೆ, ತಿಂಗಳು, ರಾಹುಕಾಲ ಯಾವ್ದೂ ಇಲ ್ಲಲ್ವ? ನಂಗೂ ಅಂತಹ ಪ್ರೀತಿ ಹುಟ್ಟಿ 15 ವರುಷವಾಯ್ತು. ನಮ್ಮದು ಮಧ್ಯಮ ವರ್ಗದ ಕುಟುಂಬ. ನಾನು ನನ್ನವರನ್ನು ಮೊದಲು ನೋಡಿದಾಗ ಇಷ್ಟವಾದದ್ದು ನೇರ ಮಾತು. ಕಷ್ಟದಿಂದ ಮೇಲಕ್ಕೆ ಬಂದ ಮನೆಯ ಹಿರಿಮಗನ ಕೈ ಹಿಡಿಯಲು ಕಾರಣವನ್ನೇ ಹುಡುಕಲಿಲ್ಲ ನಾನು. ಗುಣ ಅಪ್ಪಟ ಚಿನ್ನ. ಮತ್ತೇನು ಬೇಕು? ರಟ್ಟೆ ಎರಡೂ ಸದಾ ಕ್ರಿಯಾಶೀಲ. ಮಿದುಳೊಂದು ಕಂಪ್ಯೂಟರ್. ಇವೇ ನನ್ನವರ ಬಂಡವಾಳ. ಮನಸ್ಸು ಶುದ್ಧ ಜಲ. ಇವರಿಗೆ ಹೆಗಲಿಗೆ ಹೆಗಲಾಗುವ ಮನಸ್ಸು ಮಾಡಿದೆ. ದೇವರು ನನ್ನ ಎಣಿಕೆಯನ್ನು ಹುಸಿ ಮಾಡಲಿಲ್ಲ. ಹಿರಿಯರ ಆಶೀರ್ವಾದದಿಂದಲೇ ನಮ್ಮಮದುವೆಯಾಯ್ತು. ಕಲ್ಪನಾಲೋಕದಲ್ಲಿ ವಿಹರಿಸಿದ ಪ್ರೇಮಿಗಳಲ್ಲ ನಾವು. ವಿರಹ ವೇದನೆಯ ಉರಿ ನಮಗಾಗಲಿಲ್ಲ. ಯಾಕೆಂದರೆ ಆಯಸ್ಕಾಂತದಂತೆ ನಾನು ನನ್ನವರು. ನಾನು ಅನುಸರಿಸಿದ್ದು, ಅನುಕರಿಸಿದ್ದು ನನ್ನಮ್ಮ- ಅಪ್ಪಯ್ಯನ ನಡುವಿನ ಪ್ರೀತಿ, ಅರ್ಥೈಸಿಕೊಳ್ಳುವ ಪರಿಯನ್ನು. ಅದೆಷ್ಟೇ ಕಷ್ಟ ನಷ್ಟಗಳ ಮಳೆ ಸುರಿದಾಗಲೂ ಅವರು ವಿಚಲಿತರಾಗದೆ ಜೀವನವನ್ನು ಹೋರಾಟವಾಗಿ ಸ್ವೀಕರಿಸಿ ಗೆದ್ದ ದಾರಿಯೇ ನಮಗೂ ಆದರ್ಶ. ನ್ಯಾಯಮಾರ್ಗದ ದುಡಿಮೆ, ಹಾಸಿಗೆ ಇದ್ದಷ್ಟೇ ಕಾಲು ಚಾಚುವ ಬಜೆಟ್, ಸಂಸಾರ ನಿರ್ವಹಣೆಯಲ್ಲಿ ಅಚ್ಚುಕಟ್ಟುತನದ ಅರಿವಿರುವ ಪ್ರೇಮಿಗಳು ಜೀವನದಲ್ಲಿ ಗೆದ್ದೇ ಗೆಲ್ಲುತ್ತಾರೆ. ನಾವು ಮುದ್ದಣ ಮನೋರಮೆಯಲ್ಲ, ರೋಮಿಯೋ ಜೂಲಿಯೆಟ್ಟೂ ಅಲ್ಲ, ಸಾದಾಸೀದಾ ಪ್ರೇಮಿಗಳು.

    | ಪೂರ್ಣಿಮಾ ನರಸಿಂಹ ಭಟ್ಟ ಕಮಲಶಿಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts