More

    ಪ್ರೇಮಕಥೆ: ಮದುವೆಗೂ ಮುನ್ನ ಕಾಡಿದವನು…

    ಬದುಕಿನಲ್ಲಿ ಒಮ್ಮೆಯಾದರೂ ಎಲ್ಲರ ಎದೆಗೂಡಿನಲ್ಲಿ ಅರಳುವ ಪ್ರೇಮ ಒಂದು ಮಧುರ ಕ್ಷಣ. ಪ್ರೇಮ ನಿವೇದನೆಯ ತಲ್ಲಣಗಳು, ಅದಕ್ಕೆ ಬರುವ ಸಕಾರಾತ್ಮಕ ಪ್ರತಿಕ್ರಿಯೆ… ಅದರ ಪರಿಣಾಮವಾಗಿ ಉಂಟಾಗುವ ಉಲ್ಲಾಸ ಇನ್ನಷ್ಟು ಮಧುರ. ಆ ದಿನಗಳ ವಿರಹವೂ ಮಧುರ ಯಾತನೆಯೇ. ಅವೆಲ್ಲವನ್ನೂ ದಾಟಿ ಮದುವೆ ಎಂಬಲ್ಲಿಗೆ ಬಂದು ನಿಂತರೆ ಅದೇ ದೊಡ್ಡ ಖುಷಿ. ಮದುವೆಯ ನಂತರವೂ ಪ್ರೀತಿ ತಾಜಾ ಆಗಿಯೇ ಉಳಿದರಂತೂ ಅದು ಅಮರಪ್ರೇಮ. ಅಂಥ ಪ್ರೇಮದ ಬಗ್ಗೆ ಬರೆದು ಕಳಿಸಿ ಎಂದು ‘ವಿಜಯವಾಣಿ’ ನೀಡಿದ್ದ ಕರೆಗೆ ಸಾವಿರಾರು ಓದುಗರು ಸ್ಪಂದಿಸಿದ್ದಾರೆ. ಆಯ್ದ ಯಶಸ್ವೀ ನೈಜ ಪ್ರೇಮಕಥೆಗಳು ಇಲ್ಲಿವೆ.

    ನಮ್ಮ ಪ್ರೀತಿ ಪ್ರಾರಂಭವಾಗಿದ್ದು ನಾನು ಪದವಿ ಮುಗಿಸಿದ ವರುಷ. ನನ್ನ ಇನಿಯ ಅವರ ತಂದೆ ಜತೆ ನಮ್ಮ ಗೃಹಪ್ರವೇಶಕ್ಕೆ ಬಂದಿದ್ದರು. ನನಗೆ ಮೊದಲ ನೋಟದಲ್ಲಿಯೇ ಪ್ರೀತಿ ಮೂಡಿತು. ಅವರು ಬ್ಯಾಂಕ್ ಉದ್ಯೋಗಿ ಎಂದು ತಿಳಿದು ಸ್ವಲ್ಪ ಹೆಚ್ಚೇ ಸಂತೋಷವಾಯಿತು. ಅವನಿಗಾಗಿ ದಿನಕ್ಕೊಂದು ಕವನ ಬರೆಯುತ್ತಿದ್ದೆ. ಪ್ರೀತಿ ಜಾಸ್ತಿಯಾದರೆ 2-3 ಕವನಗಳನ್ನು ರಚಿಸುತ್ತಿದೆ. ವಾಟ್ಸ್ ಆಪ್​ನಲ್ಲಿ ಕಳಿಸುತ್ತಿದ್ದೆ. ಆದರೆ ರಿಪ್ಲೈ ಬರುತ್ತಿರಲಿಲ್ಲ. ಕದ್ದು ಮುಚ್ಚಿ ಎಂದಿಗೂ ಭೇಟಿಯಾಗಲು ಆತ ಒಪ್ಪಲಿಲ್ಲ. ನಮ್ಮ ಮನೆಗೆ ಬಂದು ನನ್ನನ್ನು, ನನ್ನ ಮನೆಯಲ್ಲಿರುವ ಎಲ್ಲರನ್ನು ಮಾತನಾಡಿಸಿ ಹೋಗುವ ಆತನ ನಡತೆ ನನಗೆ ತುಂಬಾ ಹಿಡಿಸಿತು. ನನಗೂ ಪ್ರೇಮಿಗಳ ಥರ ಓಡಾಡುವ ಆಸೆಯಿತ್ತು. ಆದರೆ ಅಂಥ ಯಾವ ಸನ್ನಿವೇಶವೂ ನಮ್ಮ ಪ್ರೀತಿಯ ಸಂದರ್ಭದಲ್ಲಿ ಇರಲಿಲ್ಲ. ನನ್ನ ಜನ್ಮದಿನದಂದು ಒಂದು ಸಣ್ಣ ಗಿಫ್ಟ್ ಆದರೂ ತಂದುಕೊಡುತ್ತಾನೆ ಎಂದು ಭಾವಿಸಿದ್ದೆ. ನಿರಾಸೆಯಾಯಿತು. ನನ್ನ ಈ ಎಲ್ಲ ನೋವಿಗೆ ಮದುವೆಯ ದಿನದ ರಾತ್ರಿಯೇ ಉತ್ತರ ಸಿಕ್ಕಿತು. ನನ್ನ ಜನ್ಮದಿನ, ಪ್ರೇಮಿಗಳ ದಿನದ ಉಡುಗೊರೆ ಜತೆಗೆ ನನ್ನ ಕವನಗಳನ್ನೆಲ್ಲ ದಿನಾಂಕ ಸಹಿತ ಬರೆದ ಒಂದು ಡೈರಿ ಎಲ್ಲವನ್ನೂ ನನ್ನ ಕೈಗೆ ಇಟ್ಟಾಗ ನನ್ನ ಮನಸ್ಸಿಗೆ ಆದ ಆನಂದ ಅಷ್ಟಿಷ್ಟಲ್ಲ. ತನ್ನ ಅಪ್ಪ ಅಮ್ಮನನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದ ಕಾರಣ ಅವರಿಗೆ ನೋವಾಗುವ ಯಾವುದೇ ಕೆಲಸ ಆತ ಮಾಡುವುದಿಲ್ಲ. ನಾವಿಬ್ಬರೂ ಒಂದೇ ಊರಿನಲ್ಲಿ ಇರುವುದರಿಂದ ನಾವು ಎಲ್ಲೇ ತಿರುಗಿದರೂ ಒಬ್ಬರಲ್ಲ ಒಬ್ಬರು ನೋಡುತ್ತಾರೆ. ಅದು ಪಾಲಕರ ಕಿವಿಗೆ ಬಿದ್ದರೆ ಅವರಿಗೆ ಬೇಜಾರಾಗುವುದು ಸಹಜ ಎನ್ನುವುದು ಆತನ ನಿಲುವಿಗೆ ಕಾರಣವಾಗಿತ್ತು ಎಂದು ತಿಳಿದಾಗ ಅಭಿಮಾನ ಉಕ್ಕಿಬಂತು. ಮದುವೆಯ ಮೊದಲು ನನ್ನನ್ನು ಎಲ್ಲಿಗೂ ಕರೆದುಕೊಂಡು ಹೋಗಿಲ್ಲವೆಂದು ಆತನಿಗೆ ಬೇಸರವಿದೆ. ಆದ್ದರಿಂದ ಮದುವೆಯ ನಂತರ ದೆಹಲಿ, ಮನಾಲಿ, ಚಂಡೀಗಡ, ಶಿಮ್ಲಾ, ಗೋವಾ ಹೀಗೆ ನಮ್ಮಪ್ರೀತಿಯ ಪಯಣ ಪ್ರಾರಂಭವಾಗಿದೆ. ಸ್ವಲ್ಪ ತ್ಯಾಗ, ಸ್ವಲ್ಪ ವಿರಹಗಳ ಜತೆಗೆ ಮದುವೆಯೆಂಬ ಸಾರ್ಥಕತೆಯೇ ನಿಜವಾದ ಪ್ರೀತಿ.

    | ಲತಾ ಪವನಕುಮಾರ ಶಿರಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts