ಗಾಂಜಾ ವ್ಯಸನಿಯ ಪ್ರೀತಿಯ ಬಲೆಯಲ್ಲಿ ಬಿದ್ದವಳ ದುರಂತ ಅಂತ್ಯ: ತಾಯಿ ಬೆನ್ನಲ್ಲೆ ಯುವತಿಯೂ ಆತ್ಮಹತ್ಯೆ

Drug Addictor
Published on

ಬೆಂಗಳೂರು: ಹದಿಹರೆಯದಲ್ಲೇ ಪ್ರೀತಿಯ ಗೀಳಿಗೆ ಬಿದ್ದ ಯುವತಿಯೊಬ್ಬಳು ದುರಂತ ಅಂತ್ಯ ಕಂಡಿರುವ ಘಟನೆ ನಗರದ ಆರ್.ಎಂ.ಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಯಿ ಆತ್ಮಹತ್ಯೆ ಮಾಡಿಕೊಂಡ ಎರಡೇ ತಿಂಗಳಿಗೆ ಮಗಳು ಸಹ ನೇಣಿಗೆ ಶರಣಾಗಿದ್ದಾಳೆ. ಜೆಮಿನಿ (19) ನೇಣಿಗೆ ಶರಣಾದ ಯುವತಿ. ಬೆಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಜೆಮಿನಿ, ಕಾಲೇಜಿನಲ್ಲಿದ್ದಾಗಲೇ ಭರತ್ ಎಂಬಾತನನ್ನು ಪ್ರೀತಿಸುತ್ತಿದ್ದಳು.

ಗಾಂಜಾ ವ್ಯಸನಿಯಾಗಿದ್ದ ಭರತ್ ಸಹವಾಸ ಬೇಡವೆಂದು ಪಾಲಕರು ಬುದ್ಧಿವಾದ ಹೇಳಿದ್ದರು. ಆದರೂ, ಪೋಷಕರ ಮಾತನ್ನು ಧಿಕ್ಕರಿಸಿ ಜೆಮಿನಿ, ಭರತ್​ನನ್ನು ಪ್ರೀತಿಸುತ್ತಿದ್ದಳು. ಇತ್ತ ಮಗಳ ವರ್ತನೆಗೆ ಬೇಸತ್ತ ತಾಯಿ, ಎರಡು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು.

ತಾಯಿಯ ಸಾವಿನ ನಂತರವೂ ಜೆಮಿನಿ, ಭರತ್ ಸಹವಾಸ ಮುಂದುವರೆಸಿದ್ದಳು. ಜ.1 ರಂದು ಜೆಮಿನಿಯ ತಂದೆ ನಾಗರಾಜ್​ಗೆ ಕರೆ ಮಾಡಿದ್ದ ಭರತ್, ಜೆಮಿನಿಗೆ ಶುಭಕೋರಲು ಫೋನ್ ಕೊಡುವಂತೆ ಕೇಳಿದ್ದ. ಆದರೆ, ನಾಗರಾಜ್​ ಫೋನ್​ ಕೊಡದೆ ಭರತ್​ಗೆ ಬೈದು ಬುದ್ಧಿವಾದ ಹೇಳಿದ್ದ.

ಇದಾದ ಕೆಲವೇ ದಿನಗಳಲ್ಲಿ ಅಂದರೆ ಜ.5 ರಂದು ಜೆಮಿನಿ ನೇಣಿಗೆ ಶರಣಾಗಿದ್ದಾಳೆ. ತಂದೆ ನಾಗರಾಜ್ ದೂರಿನನ್ವಯ ಪ್ರಕರಣ ದಾಖಲಲಾಗಿದ್ದು, ಆರೋಪಿ ಭರತ್​ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net