More

    ಗ್ರಾಮೀಣ ಭಾಗದಲ್ಲೂ ಅರಳಿತು ಕಮಲ

    ಗದಗ: ಪ್ರಸಕ್ತ ಸಾಲಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದು ಈ ಮೂಲಕ ಪ್ರಥಮ ಬಾರಿಗೆ ಜಿಲ್ಲೆಯ ಗ್ರಾಮೀಣ ಭಾಗದಲ್ಲೂ ಕಮಲ ಅರಳಿದಂತಾಗಿದೆ. ಕಳೆದ ಮೂರ್ನಾಲ್ಕು ದಶಕಗಳಿಂದಲೂ ಗ್ರಾಮೀಣ ಪ್ರದೇಶದಲ್ಲಿ ಬಿಗಿ ಹಿಡಿತದೊಂದಿಗೆ ಆಡಳಿತ ನಡೆಸುತ್ತಿದ್ದ ಕೈ ಶಕ್ತಿಯನ್ನು ಕುಗ್ಗಿಸುವಲ್ಲಿ ಬಿಜೆಪಿ ಯಶ ಕಂಡಿದೆ.

    ಜಿಲ್ಲೆಯ 117 ಗ್ರಾಪಂಗಳ ಪೈಕಿ 1593 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 722 ಬಿಜೆಪಿ ಹಾಗೂ 691 ಕಾಂಗ್ರೆಸ್ ಬೆಂಬಲಿಗರು ಮತ್ತು 180 ಜನರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಮುಂಡರಗಿ, ಗಜೇಂದ್ರಗಡ, ನರಗುಂದ ತಾಲೂಕುಗಳಲ್ಲಿ ಬಿಜೆಪಿ ಬೆಂಬಲಿಗರು ಹೆಚ್ಚು ಸ್ಥಾನಗಳನ್ನು ಗಳಿಸಿದ್ದಾರೆ. ಗದಗ, ರೋಣ ತಾಲೂಕಿನಲ್ಲಿ ಕೈಗೆ ಬಲ ಬಂದಿದೆ. ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲ ಎನಿಸಿದರೂ ಕೊಂಚ ಕಾಂಗ್ರೆಸ್ ಮುಂದಿದೆ.

    ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಪೈಕಿ ನರಗುಂದ, ರೋಣ, ಶಿರಹಟ್ಟಿ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರದ್ದಾರೆ. ಗದಗ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಹಾವೇರಿ ಲೋಕಸಭೆ ಸದಸ್ಯರು ಸಹ ಬಿಜೆಪಿಯವರು ಇರುವುದರಿಂದ ಸಹಜವಾಗಿ ಈ ಚುನಾವಣೆ ಬಿಜೆಪಿಗೆ ಸವಾಲು ಎನಿಸಿತ್ತು. ಹೀಗಾಗಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಜಿಲ್ಲಾ ಮುಖಂಡರು ಗ್ರಾಮೀಣ ಮಟ್ಟಕ್ಕೆ ತೆರಳಿ ಪ್ರಚಾರ ಮಾಡಿ ಮತದಾರರ ಮನವೊಲಿಸುವ ಕೆಲಸ ಮಾಡಿದರು.

    ಒಂದು ಸಲವಾದರೂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಮಲ ಅರಳಿಸಬೇಕು ಎಂಬ ಕಾರಣದಿಂದ ಬೂತ್​ವಾರು ಮಟ್ಟದಲ್ಲಿ ವಿವಿಧ ತಂಡಗಳನ್ನು ರಚಿಸಲಾಯಿತು. ಆ ತಂಡಕ್ಕೆ ಒಬ್ಬ ಮೇಲ್ವಿಚಾರಕನನ್ನು ನೇಮಿಸಿ ಕಟ್ಟುನಿಟ್ಟಾಗಿ ಪ್ರಚಾರ ಹಾಗೂ ಕಾರ್ಯತಂತ್ರ ನಡೆಸಿದ್ದರಿಂದ ಈ ಚುನಾವಣೆಯಲ್ಲಿ ಬಿಜೆಪಿ ಪಾರಮ್ಯ ಮೆರೆಯಲು ಸಾಧ್ಯವಾಯಿತು.

    ಬಿಜೆಪಿ ಮುಖಂಡರು ಜಿಲ್ಲೆಯಲ್ಲಿ ಗ್ರಾಮ ಸ್ವರಾಜ್ ಕಾರ್ಯಕ್ರಮ ಆಯೋಜಿಸಿ ಕಾರ್ಯಕರ್ತರಲ್ಲಿ ಹುರುಪು, ಹುಮ್ಮಸ್ಸು ತುಂಬಿದರು. ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಅವರು ಪಕ್ಷದ ಜಿಲ್ಲಾ ಕಾರ್ಯಾಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಭೂಮಿ ಪೂಜ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ನಿಮ್ಮೊಂದಿಗೆ ನಾವಿದ್ದೇವೆ, ಮುನ್ನುಗ್ಗಿ’ ಎಂದು ಧೈರ್ಯ ಹೇಳಿದ್ದು ಕಮಲ ಪಡೆಯಲ್ಲಿ ಉತ್ಸಾಹ ಇಮ್ಮಡಿಗೊಂಡಿತು.

    ಕಳೆದ ಸಲ ಕೈ ಮೇಲು

    2015ರಲ್ಲಿ ಜರುಗಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ 800ಕ್ಕೂ ಅಧಿಕ ಸ್ಥಾನ ಗಳಿಸಿ ಮೇಲುಗೈ ಸಾಧಿಸಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು. ಜಿಲ್ಲೆಯ ನಾಲ್ಕೂ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಸಾವಿರಾರು ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲಾಗಿತ್ತು. ಹೀಗಾಗಿ, ಅಂದಿನ ಆಡಳಿತಾರೂಢ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದರು. ಅಂದು ಬಿಜೆಪಿ 690 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

    ಭದ್ರಕೋಟೆಗೆ ನುಗ್ಗಿದ ಕಮಲ

    ಗದಗ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 12 ಗ್ರಾಮ ಪಂಚಾಯಿತಿಗಳ ಪೈಕಿ ಹುಲಕೋಟಿ, ಕುರ್ತಕೋಟಿ, ಬಿಂಕದಕಟ್ಟಿ, ಅಸುಂಡಿ, ಅಂತೂರ-ಬೆಂತೂರ ಗ್ರಾಮ ಪಂಚಾಯಿತಿಗಳು ಕಾಂಗ್ರೆಸ್​ನ ಅಖಂಡ ಭದ್ರಕೋಟೆಗಳು. ಕಳೆದ ಮೂರ್ನಾಲ್ಕು ದಶಕಗಳಿಂದ ಈ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಪ್ರತಿಸ್ಪರ್ಧಿ ಇಲ್ಲದೆ ಇರುವುದರಿಂದ ಅವಿರೋಧವಾಗಿ ಆಯ್ಕೆ ನಡೆಯುತ್ತಿತ್ತು. ಕಳೆದ ಗ್ರಾಪಂ ಪಂಚಾಯಿತಿ ಚುನಾವಣೆವರೆಗೂ ಇದು ನಡೆದುಕೊಂಡೇ ಬಂದಿತ್ತು. ಆದರೆ, ಈ ಸಲದ ಚುನಾವಣೆಯಲ್ಲಿ ವಾತಾವರಣ ಬದಲಾಗಿದ್ದು, ಈ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕಣದಲ್ಲಿದ್ದು ಸಡ್ಡು ಹೊಡೆದರು. ಹುಲಕೋಟಿ ಹೊರತುಪಡಿಸಿ ಉಳಿದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಬಿಜೆಪಿ ಖಾತೆ ತೆರೆದಿದ್ದು ಸಾಧನೆ ಎನಿಸಿತು. ಬಿಂಕದಕಟ್ಟಿ, ಅಸುಂಡಿ ಗ್ರಾಪಂಗಳಲ್ಲಿ ಮೂರ್ನಾಲ್ಕು ಜನರು ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಆದರೆ, ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆ ಕೊಟ್ಟಿದ್ದ ಸೊರಟೂರು ಗ್ರಾಮ ಈ ಸಲ ಕಾಂಗ್ರೆಸ್ ಪರ ವಾಲಿರುವುದು ಗಮನಾರ್ಹ ಸಂಗತಿಯಾಗಿದೆ.

    ಸ್ವಾರಸ್ಯಕರ ಸಂಗತಿಗಳೊಂದಿಗೆ ಹಳ್ಳಿಫೈಟ್ ಸಮಾಪ್ತಿ

    ಗದಗ: ಸಮಮತ ಪಡೆದ ಅಭ್ಯರ್ಥಿಗಳು ಲಾಟರಿ ಮೂಲಕ ಗೆಲುವು ಸಾಧಿಸಿ ಸಂಭ್ರಮಿಸಿದ್ದು, ನರಗುಂದ ತಾಲೂಕಿನ 81ರ ವೃದ್ಧೆ ಮಾಬೂಬಿ ಹುಸೇನಸಾಬ್ ಮುದಕವಿ ಇಳಿವಯಸ್ಸಿನಲ್ಲಿ ಅದೃಷ್ಟ ಪರೀಕ್ಷೆಯಲ್ಲಿ ಗೆದ್ದು ಬೀಗಿದ್ದು, ಶಿಗ್ಲಿ ಬಸ್ಯಾ ಅವರ ಪತ್ನಿ ಗುಲ್ಜಾರಬಾನು ಜಯ ಗಳಿಸಿದ್ದು, ಶಿರಹಟ್ಟಿ ತಾಲೂಕಿನ ಕೂಗನೂರು ಗ್ರಾಪಂಗೆ ಸ್ಪರ್ಧಿಸಿದ್ದ ಅತ್ತೆಯನ್ನು ಮಣಿಸಿದ ಸೊಸೆ ಹೀಗೆ ಹಲವಾರು ಸ್ವಾರಸ್ಯಕರ ಸಂಗತಿಗಳೊಂದಿಗೆ ಹಳ್ಳಿಫೈಟ್ ಮುಕ್ತಾಯಗೊಂಡಿತು.

    ಗುರುವಾರ ಬೆಳಗಿನ ಜಾವದವರೆಗೂ ಮತ ಎಣಿಕೆ ನಡೆಯಿತು. ಪೊಲೀಸರು, ಎಣಿಕೆ ಸಿಬ್ಬಂದಿ ಸೇರಿ ಅಧಿಕಾರಿಗಳು ಅಂತಿಮ ಫಲಿತಾಂಶ ನೀಡಿ ಚುನಾವಣೆ ಪ್ರಕ್ರಿಯೆಯನ್ನು ಗೊಂದಲ, ಗೋಜಲು ಇಲ್ಲದೆ ಪೂರ್ಣಗೊಳಿಸಿದರು.

    ಹೊಸ ವರ್ಷಕ್ಕೆ ಮೊದಲ ವಾರದಲ್ಲಿ ನೂತನ ಸದಸ್ಯರು ಗ್ರಾಪಂ ಪ್ರವೇಶಿಸಲಿದ್ದಾರೆ. ಜಿಲ್ಲೆಯಲ್ಲಿ ಕೇಸರಿ ಪಡೆ ಮೇಲುಗೈ ಸಾಧಿಸಿದೆಯಾದರೂ ಗ್ರಾಪಂ ವಶಪಡಿಸಿಕೊಳ್ಳಲು ಮತ್ತೊಂದು ಸುತ್ತಿನ ಕಸರತ್ತು ನಡೆಸಬೇಕಿದೆ. ಅಲ್ಲದೆ, ಮುಂಬರುವ ದಿನಗಳಲ್ಲಿ ಜಿಪಂ, ತಾಪಂ ಚುನಾವಣೆಗಳು ಎದುರಾಗಲಿದೆ. ಹೀಗಾಗಿ, ಹಳ್ಳಿ ಬೇರುಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ವಿವಿಧ ಪಕ್ಷಗಳು ಗ್ರಾಪಂ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗುವುದರಲ್ಲಿ ಅನುಮಾನವಿಲ್ಲ.

    ವಿಶೇಷವಾಗಿ ಗದಗ ವಿಧಾನಸಭೆ ಕ್ಷೇತ್ರದ 12 ಗ್ರಾಪಂಗಳಲ್ಲಿ ಕಮಲ ತನ್ನ ಅಸ್ತಿತ್ವ ಸ್ಥಾಪಿಸಿದ್ದು ಸಣ್ಣ ವಿಷಯವಲ್ಲ. ನಾಲ್ಕು ದಶಕಗಳ ಕಾಲ ವಿರೋಧಿಗಳೇ ಇಲ್ಲದಂತೆ ಚುನಾವಣೆ ಮಾಡುತ್ತಿದ್ದ ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಗ್ರಾಪಂ ಚುನಾವಣೆಯ ಈ ಬೆಳವಣಿಗೆ ಬಿಸಿ ತುಪ್ಪವಾಗಿದೆ. ಬಿಜೆಪಿ ಕಾಂಗ್ರೆಸ್​ನ ಭದ್ರಕೋಟೆಯನ್ನು ಭೇದಿಸಿದ ಖುಷಿಯಲ್ಲಿದೆ.

    ಚೀಟಿಯಿಂದ ಅಧಿಕಾರ ಭಾಗ್ಯ

    ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗಾಪಂ ವ್ಯಾಪ್ತಿಯ ಕನಕವಾಡ ಗ್ರಾಮದ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪುಷ್ಪಾ ವೀರೇಶರಡ್ಡಿ ಕಾಮರಡ್ಡಿ ಮತ್ತು ಶ್ರೇಯಾ ಸಂತೋಷ ಹಿರೇಮಠ ಇಬ್ಬರಿಗೂ ತಲಾ 318 ಮತಗಳು ಬಂದಿದ್ದವು. ಆಗ ಲಾಟರಿ ಪ್ರಕ್ರಿಯೆ ನಡೆಸಿದಾಗ ಚೀಟಿಯಲ್ಲಿ ಪುಷ್ಪಾ ಕಾಮರಡ್ಡಿ ಹೆಸರು ಬಂದಂತೆ ಒಂದು ಹೆಚ್ಚಿನ ಮತಗಳ ಆಧಾರದಿಂದ ಅವರನ್ನು ವಿಜಯಶಾಲಿಯನ್ನಾಗಿ ಘೊಷಿಸಲಾಯಿತು.

    ಮುಂಡರಗಿ ತಾಲೂಕಿನ ಕದಾಂಪುರ ಗ್ರಾಪಂ ವ್ಯಾಪ್ತಿಯ ಕಪ್ಪತ್ತಗಿರಿ (ಡೋಣಿ ತಾಂಡಾ) ಗ್ರಾಮದಲ್ಲಿ ಸ್ಪರ್ಧಿಸಿದ್ದ ಗೀತಾ ರಾಘವೇಂದ್ರ ರಾಠೋಡ, ಶಾರವ್ವ ವಚನಪ್ಪ ನಾಯಕ ತಲಾ 450 ಮತ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಲಾಟರಿಯಲ್ಲಿ ಚೀಟಿ ಎತ್ತಿದ್ದಾಗ ಗೀತಾ ರಾಘವೇಂದ್ರ ರಾಠೋಡ ಆಯ್ಕೆಯಾದರು. ಹಳ್ಳಿಕೇರಿ ಗ್ರಾಪಂ ವ್ಯಾಪ್ತಿಯ ಹಳ್ಳಿಗುಡಿ ಗ್ರಾಮದ 1ನೇ ವಾರ್ಡ್​ನಿಂದ ಸ್ಪರ್ಧಿಸಿದ್ದ ಕೆಂಚಪ್ಪ ವೀರಾಪುರ, ಅಂದಪ್ಪ ಮಳಪ್ಪ ಅನ್ವಾಲ್ ಸಮನಾಗಿ 222 ಮತ ಪಡೆದಿದ್ದರು. ಹೀಗಾಗಿ ಲಾಟರಿಯಲ್ಲಿ ಚೀಟಿ ಎತ್ತಿದಾಗ ಕೆಂಚಪ್ಪ ವೀರಾಪುರ ಆಯ್ಕೆಗೊಂಡರು.

    ದಂಪತಿ ಮತ್ತೆ ಹಳ್ಳಿ ರಾಜಕೀಯಕ್ಕೆ

    ಶಿರಹಟ್ಟಿ: ಹೆಬ್ಬಾಳ ಗ್ರಾಪಂ ವಾರ್ಡ್ ನಂ. 2ರಿಂದ ಸ್ಪರ್ಧಿಸಿದ್ದ ಪತಿ ಮಹೇಂದ್ರ ಉಡಚಣ್ಣವರ ಗೆದ್ದರೆ, ವಾರ್ಡ್ ನಂ. 4ರಲ್ಲಿ ಅವರ ಪತ್ನಿ ನೇತ್ರಾ ಉಡಚಣ್ಣವರ ಗೆಲುವಿನ ನಗೆ ಬೀರುವ ಮೂಲಕ ಮತ್ತೆ ಹಳ್ಳಿ ರಾಜಕಾರಣಕ್ಕೆ ದಾಪುಗಾಲು ಹಾಕಿದ್ದಾರೆ. ಈ ಹಿಂದೆ ನೇತ್ರಾ ಸದಸ್ಯೆಯಾಗಿ ನಂತರ ಗ್ರಾಪಂ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಮಹೇಂದ್ರ ಉಡಚಣ್ಣವರ ಕಳೆದ ಅವಧಿಯಲ್ಲಿ ಸದಸ್ಯನಾಗಿ ನಂತರ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು ಗಮನಾರ್ಹ ಸಂಗತಿ.

    ಕುತೂಹಲ ಕೆರಳಿಸಿದ ಫಲಿತಾಂಶ

    ನರಗುಂದ: ತಾಲೂಕಿನ ಕಣಕೀಕೊಪ್ಪ ಗ್ರಾಪಂ 76 ವರ್ಷದ ವೃದ್ಧೆ ಯಂಕವ್ವ ಗೋವಿಂದಪ್ಪ ಮಾದರ 575 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಬೆನಕನಕೊಪ್ಪ ಗ್ರಾಪಂನ ಸಂಕಧಾಳದ 2ನೇ ವಾರ್ಡ್​ನ ಬ ವರ್ಗದ ಅಭ್ಯರ್ಥಿಯಾಗಿದ್ದ ಸಿದ್ದಪ್ಪ ಅಂಗಡಿ 290 ಮತಗಳನ್ನು ಪಡೆದಿದ್ದರೂ ಸೋತಿದ್ದರು. ಬಳಿಕ ಸಾಮಾನ್ಯ ಸ್ಥಾನಕ್ಕೆ ಪೈಪೋಟಿ ನೀಡಿ ಅದೃಷ್ಟದ ಗೆಲುವು ತಮ್ಮದಾಗಿಸಿಕೊಳ್ಳುವ ಮೂಲಕ ಸೋತು ಗೆದ್ದಿದ್ದಾರೆ.

    ವಾಸನ ಗ್ರಾಪಂ ವ್ಯಾಪ್ತಿಯ ಲಕಮಾಪುರದ 25 ವರ್ಷದ ಯುವಕ ಪಡಿಯಪ್ಪ ಶೆಲ್ಲಿಕೇರಿ ಪ್ರಥಮ ಬಾರಿಗೆ ಗ್ರಾಪಂ ಚುನಾವಣೆಯಲ್ಲಿ ಗೆದ್ದಿದ್ದಾನೆ. ಕೊಣ್ಣೂರಿನ ರಾಷ್ಟ್ರ ಮಟ್ಟದ ಜಾನಪದ ಕಲಾವಿದ ಪ್ರಕಾಶ ಚಂದಣ್ಣವರ 4ನೇ ವಾರ್ಡ್​ನಿಂದ ಜಯಶಾಲಿಯಾಗಿದ್ದಾನೆ. ಇದೇ ಗ್ರಾಮದ 27 ವರ್ಷದ ಹನುಮಂತಪ್ಪ ಅಣ್ಣಿಗೇರಿ ಕೊಣ್ಣೂರ ಗ್ರಾಪಂಗೆ ಅತಿ ಕಿರಿಯ ಸದಸ್ಯನಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾನೆ.

    ಯಾವ ಗ್ರಾಪಂ ಯಾರ ಮುಡಿಗೆ?

    ಗದಗ: ಜಿಲ್ಲೆಯ 117 ಗ್ರಾಪಂಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿರುವುದು ಗೊತ್ತಿರುವ ಸಂಗತಿ. ಆದರೆ, ಯಾವ ಪಕ್ಷದ ಬೆಂಬಲಿಗರು ಗ್ರಾಪಂ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.

    ಮೇಲ್ನೋಟಕ್ಕೆ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಬೆಂಬಲಿಗರ ಕೈಗೆ ಗ್ರಾಪಂ ಚುಕ್ಕಾಣಿ ಸಿಗಲಿದೆ ಎಂಬ ನಿರೀಕ್ಷೆ ಇದೆ. ಆದರೆ, ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಹಂಚಿಕೆ ಕಾರ್ಯ ಇನ್ನೂ ಆರಂಭವಾಗಬೇಕಿದೆ. ವಾರದೊಳಗೆ ಮೀಸಲಾತಿ ಹಂಚಿಕೆ ಕಾರ್ಯ ಜಿಲ್ಲಾಧಿಕಾರಿ ಇಲ್ಲವೇ ಆಯಾ ತಹಸೀಲ್ದಾರರ ನೇತೃತ್ವದಲ್ಲಿ ನಡೆಯಬಹುದು.

    ಆಯಾ ಗ್ರಾಪಂಗೆ ಹಂಚಿಕೆಯಾಗುವ ಮೀಸಲಾತಿ ಆಧಾರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದು ನಿಗದಿಯಾಗಲಿದೆ. ಪಕ್ಷ ರಹಿತ ಚುನಾವಣೆ ಆಗಿರುವುದರಿಂದ ಮೀಸಲಾತಿಯಡಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಸಿಗಲಿದೆ ಎಂಬುದು ಖಚಿತವಾದರೆ ಬಿಜೆಪಿ ಬೆಂಬಲಿತ ಸದಸ್ಯ ಕಾಂಗ್ರೆಸ್ ಬೆಂಬಲಿಗರ ಗುಂಪಿಗೆ ಇಲ್ಲವೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಿಜೆಪಿ ಬೆಂಬಲಿಗರ ಗುಂಪಿಗೆ ಜಿಗಿಯುವ ಎಲ್ಲ ಸಾಧ್ಯತೆಗಳೂ ಇವೆ. ಹೀಗಾಗಿ ಮೀಸಲಾತಿ ಘೋಷಣೆ ನಂತರವೇ ಅಧಿಕಾರದ ಲಾಬಿ ಜೋರಾಗಲಿದೆ.

    ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ಸಹಜವಾಗಿ ಆ ಪಕ್ಷ ಬೆಂಬಲಿಗರ ಪರವಾಗಿ ಮೀಸಲಾತಿ ಘೋಷಣೆ ಮಾಡಬಹುದು ಎಂದು ಅನೇಕರು ಲೆಕ್ಕಾಚಾರ ಹಾಕುತ್ತಿದ್ದಾರೆ. ಆದರೆ, ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳ ಸಮ್ಮುಖದಲ್ಲಿ ಮೀಸಲಾತಿ ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಸದ್ಯಕ್ಕೆ ಗ್ರಾಪಂಗಳು ಯಾವ ಪಕ್ಷದ ತೆಕ್ಕೆಗೆ ಸೇರಲಿವೆ ಎಂಬುದನ್ನು ಸದ್ಯಕ್ಕೆ ನಿರ್ಣಯಿಸುವುದು ತುಸು ಕಷ್ಟವಾಗುತ್ತಿದೆ.

    ಕರ್ನಾಟಕ ಪಂಚಾಯತ್​ರಾಜ್ ತಿದ್ದುಪಡಿ ವಿಧೇಯಕ 2015ರಡಿ ಗ್ರಾಪಂ ಅಧ್ಯಕ್ಷರ ಅಧಿಕಾರವಧಿ ಐದು ವರ್ಷಕ್ಕೆ ನಿಗದಿಪಡಿಸಲಾಗಿದೆ. ಇದರೊಂದಿಗೆ ಕೇಂದ್ರ, ರಾಜ್ಯ ಸರ್ಕಾರದಿಂದ ಗ್ರಾಪಂಗಳಿಗೆ ನೇರವಾಗಿ ಕೋಟ್ಯಂತರ ರೂ. ಅನುದಾನ ಬರುತ್ತಿರುವುದರಿಂದ ಸಹಜವಾಗಿ ಬಹುತೇಕ ಅಭ್ಯರ್ಥಿಗಳು ಅಧ್ಯಕ್ಷರಾಗಬೇಕೆಂದು ಆಸೆ ಇಮ್ಮಡಿಕೊಂಡಿದೆ.

    ಅಭ್ಯರ್ಥಿಗಳ ಕಸರತ್ತು:

    ಜಯ ಗಳಿಸಿ ಹುಮ್ಮಸ್ಸಿನಲ್ಲಿರುವ ಅಭ್ಯರ್ಥಿಗಳು ಮೀಸಲಾತಿ ಮೂಲಕ ಅಧ್ಯಕ್ಷರಾಗುವ ಅವಕಾಶ ಒಲಿದುಬಂದರೆ ಏನೆಲ್ಲ ಮಾಡಬೇಕು ಎಂಬ ಆಲೋಚನೆಯಲ್ಲಿ ಮಗ್ನರಾಗಿದ್ದಾರೆ. ಮೀಸಲಾತಿಯಡಿ ಅವಕಾಶ ಸಿಕ್ಕರೆ ಉಳಿದ ಸದಸ್ಯರಿಗೆ ಆಸೆ-ಆಮಿಷಗಳ ಮೂಲಕ ತಮ್ಮ ಕಡೆಗೆ ಸೆಳೆದುಕೊಳ್ಳುವ ತಂತ್ರಗಾರಿಕೆ ಜೋರಾಗಿದೆ.

    ಮೀಸಲಾತಿ ಸಭೆ: ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕ್ರಿಯೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯಲಿದೆ. ತಾಲೂಕುವಾರು ನಡೆಯಲಿರುವ ಈ ಸಭೆಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳು ಭಾಗವಹಿಸುತ್ತಾರೆ. ಸಭೆಯಲ್ಲಿ ಪ್ರೊಜೆಕ್ಟರ್ ಮೂಲಕ ಆಯ್ಕೆ ಪ್ರಕ್ರಿಯೆ, ಚುನಾವಣೆ ಆಯೋಗದ ಸೂಚನೆ, ಆದೇಶಗಳು , ಒಂದೊಂದು ವರ್ಗದ ಸಂಪೂರ್ಣ ಮಾಹಿತಿಯನ್ನು ಆರಂಭದಲ್ಲಿಯೇ ಅಭ್ಯರ್ಥಿಗಳಿಗೆ ವಿವರಿಸಲಾಗುತ್ತದೆ. ಇದರಿಂದ ಮೀಸಲಾತಿ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲ, ಗೋಜಲು ಹಾಗೂ ಅನುಮಾನಗಳು ಉಂಟಾಗದಂತೆ ನೋಡಿಕೊಳ್ಳಲಾಗುತ್ತದೆ. ಒಟ್ಟಾರೆ ಸರ್ವ ಅಭ್ಯರ್ಥಿಗಳ ಸಮ್ಮುಖದಲ್ಲಿ ಪಾರದರ್ಶಕವಾಗಿ ಮೀಸಲಾತಿ ಪ್ರಕ್ರಿಯೆ ನಡೆಯಲಿದೆ.

    ಒಂದು ಮತದಿಂದ ಗೆಲುವು

    ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಪಂ ಚುನಾವಣೆಯಲ್ಲಿ ಹನುಮಂತಗೌಡ ಜಡಿಯಪ್ಪಗೌಡ್ರ (ಗದ್ದಿಗೌಡ್ರ) (346 ಮತಗಳು) ಒಂದು ಮತದ ಅಂತರದಿಂದ ಗೆಲುವು ಸಾಧಿಸಿದರು.

    ಗೆದ್ದು ಸೋತ ಅಭ್ಯರ್ಥಿ: ಬೆನಕನಕೊಪ್ಪ ಗ್ರಾಪಂ ವ್ಯಾಪ್ತಿಯ ಸಂಕದಾಳ ಗ್ರಾಮದಿಂದ ಸಾಮಾನ್ಯ ಕ್ಷೇತ್ರದ 2ನೇ ಸ್ಥಾನಕ್ಕೆ ಸ್ಪರ್ಧಿಸಿದ್ದ ಗೌಡಪ್ಪಗೌಡ ಹಿರೇಗೌಡ್ರ 267 ಮತ ಪಡೆದು ಗೆದ್ದಿದ್ದರು. ಆದರೆ, ಹಿಂದುಳಿದ ಬ ವರ್ಗದಿಂದ 290 ಮತ ಪಡೆದು ಸೋತಿದ್ದ ಶಿದ್ದಪ್ಪ ಅಂಗಡಿ ಸಾಮಾನ್ಯ ಕ್ಷೇತ್ರದ ಗೌಡಪ್ಪಗೌಡ ಅವರಿಗಿಂತ ಹೆಚ್ಚು ಮತ ಪಡೆದು ಗೆಲುವು ಸಾಧಿಸಿದರು. ಇದರಿಂದ ಬ ವರ್ಗದಿಂದ ಸ್ಪರ್ಧಿಸಿದ್ದ ಈರಪ್ಪ ನಾಯ್ಕರ (337) ಮತ್ತು ಶಿದ್ದಪ್ಪ ಅಂಗಡಿ 290 ಗೆಲುವು ಸಾಧಿಸಿದಂತಾಗಿದೆ. ಇದರಿಂದ ಒಂದು ಸಾಮಾನ್ಯ ಕ್ಷೇತ್ರ ಬ ವರ್ಗದ ಪಾಲಾಗಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts