More

    ಕಾಪು ತಾಲೂಕಲ್ಲಿ ಗಾಳಿ-ಮಳೆಗೆ ಅಪಾರ ಹಾನಿ

    ಕಾಪು: ಕಾಪು ತಾಲೂಕಿನ ವಿವಿಧೆಡೆ ಮಂಗಳವಾರ ಸಾಯಂಕಾಲ ಸುರಿದ ಭಾರಿ ಗಾಳಿ ಮಳೆಗೆ ಅಪಾರ ಹಾನಿ ಉಂಟಾಗಿದೆ.
    ಉಚ್ಚಿಲ – ಮುದರಂಗಡಿ ರಸ್ತೆಯ ಎಲ್ಲೂರಿನಲ್ಲಿ, ಶಿರ್ವ ಸಮೀಪದ ಬಂಟಕಲ್ಲು, ಮುದರಂಗಡಿ, ಕಟಪಾಡಿ ಸಹಿತ ಹಲವೆಡೆ ವಿದ್ಯುತ್ ಕಂಬಗಳಿಗೆ ಮರ ಬಿದ್ದು 10ಕ್ಕೂ ಅಧಿಕ ವಿದ್ಯುತ್ ಕಂಬಗಳು ತುಂಡಾಗಿವೆ. ಮೆಸ್ಕಾಂ ಸಿಬ್ಬಂದಿ ಸಾರ್ವಜನಿಕರ ಸಹಕಾರದೊಂದಿಗೆ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

    ಮೂಳೂರು ಪೇಟೆಯಲ್ಲಿ ಕಲ್ಲಂಗಡಿ ಮಾರಾಟದ ಅಂಗಡಿಯೊಂದರ ಮೇಲೆ ಮರ ಉರುಳಿ ಬಿದ್ದಿದ್ದು, ವ್ಯಾಪಾರಿ ಪವಾಡಸದೃಶ ರೀತಿ ಪಾರಾಗಿದ್ದಾರೆ. ಉಚ್ಚಿಲ ಮುದರಂಗಡಿ ರಸ್ತೆಯಲ್ಲಿ ಎಲ್ಲೂರು ಬಳಿ ಮರ ಬುಡ ಸಮೇತ ರಸ್ತೆಗೆ ಬಿದ್ದಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.
    ಕಾಪು ಪುರಸಭೆ ವ್ಯಾಪ್ತಿಯ ಕಾಪು ಸಂತೆ ಮಾರ್ಕೆಟ್, ಉಡುಪಿ – ಮಂಗಳೂರು ಸರ್ವೀಸ್ ರಸ್ತೆ, ವಿದ್ಯಾನಿಕೇತನ ಶಾಲೆ ಬಳಿ ಹಾಗೂ ಜಿಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಮಳೆ ನೀರು ರಸ್ತೆಯಲ್ಲೇ ಹರಿದ ಪರಿಣಾಮ ಸಂಚಾರ ಅಸ್ತವ್ಯಸ್ತವಾಯಿತು. ಹಳೇ ಮಾರಿಗುಡಿ ದ್ವಾರದ ಬಳಿ ಕೆಸರು ನೀರು ತುಂಬಿದ ಪರಿಣಾಮ ಜನ ನಡೆದಾಡಲು ಪರದಾಡಿದರು.

    ನೀರು ತುಂಬಿದ್ದ ಪ್ರದೇಶಗಳಿಗೆ ಕಾಪು ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್ ಅವರು ಪುರಸಭೆ ಅಧಿಕಾರಿಗಳ ಸಹಿತವಾಗಿ ಭೇಟಿ ನೀಡಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗಲು ಅವಶ್ಯಕವಾಗಿರುವ ಚರಂಡಿಗಳನ್ನು ಸಿದ್ಧಪಡಿಸಿ ನೀಡಲು ಸೂಚಿಸಿದರು.

    ಕೈ ಕೊಟ್ಟ ವಿದ್ಯುತ್: ಗಾಳಿ, ಮಳೆ, ಸಿಡಿಲಿನ ಆರ್ಭಟಕ್ಕೆ ಕಾಪು ಮೆಸ್ಕಾಂ ವ್ಯಾಪ್ತಿಯ ಹಲವೆಡೆ ವಿದ್ಯುತ್ ಸಂಪೂರ್ಣ ಕೈಕೊಟ್ಟಿದೆ. ಕಾಪು ಪೇಟೆಯಲ್ಲಿ ಮಂಗಳವಾರ ಮುಂಜಾನೆಯಿಂದಲೇ ವಿದ್ಯುತ್ ಕಣ್ಣಾಮುಚ್ಚಾಳೆ ನಡೆಯುತ್ತಿದ್ದು, ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಜೋಡಣೆಗೆ ಶ್ರಮಿಸುತ್ತಿದ್ದಾರೆ.

    ಸಿಡಿಲ ಹೊಡೆತಕ್ಕೆ ಮನೆಗೆ ಹಾನಿ: ಪಡುಬಿದ್ರಿ ಮುದರಂಗಡಿ ಮೈಕೋಡಿ ಸತೀಶ್ ಪೂಜಾರಿ ಅವರ ಮನೆಗೆ ಮಂಗಳವಾರ ಸಿಡಿಲು ಬಡಿದು ಮನೆ ಗೋಡೆ ಬಿರುಕು ಬಿಟ್ಟಿದ್ದು, ತೆಂಗಿನ ಮರ, ಮನೆ ಸಂಪರ್ಕದ ವಿದ್ಯುತ್ ತಂತಿ ಹಾಗೂ ಸ್ವಿಚ್ ಬೋರ್ಡು ಸಹಿತ ಉಪಕರಣಗಳಿಗೆ ಹಾನಿಯಾಗಿದೆ. ಸಿಡಿಲಿನ ಅಬ್ಬರಕ್ಕೆ ವಿದ್ಯಾನಗರ ದುರ್ಗಾಮಂದಿರ ಬಳಿ ನಿವಾಸಿಗಳಾದ ಮೀನಾಕ್ಷಿ ಆಚಾರ್ಯ, ಸುರೇಖಾ ಆಚಾರ್ಯ ಅವರಿಗೆ ಆಘಾತವಾಗಿದ್ದು, ಅವರನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೀನಾಕ್ಷಿ ಅಪಾಯದಿಂದ ಪಾರಾಗಿದ್ದು, ಸುರೇಖಾ ಅವರಿಗೆ ಸುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬಂಟಕಲ್ಲು ಮರಕ್ಕೆ ಹಾನಿ: ಬಂಟಕಲ್ಲು ಶಿರ್ವ ಪರಿಸರದಲ್ಲಿ ಮಂಗಳವಾರ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಬಂಟಕಲ್ಲು ಶಾಲೆ ಸಮೀಪದ ಬೃಹತ್ ಮರಕ್ಕೆ ಸಿಡಿಲು ಬಡಿದು ಮರಕ್ಕೆ ಹಾನಿಯಾಗಿದೆ.

    ಅಂಗಡಿ ಕೋಣೆ ಜಖಂ:
    ಬ್ರಹ್ಮಾವರ ತಾಲೂಕಿನ 38ನೇ ಕಳತ್ತೂರು ಗ್ರಾಮದ ಸಂತೆಕಟ್ಟೆ ಎಂಬಲ್ಲಿ ಮಂಗಳವಾರ ಸಾಯಂಕಾಲ ಗಾಳಿ ಮಳೆಗೆ ಮರ ಉರುಳಿ ಬಿದ್ದು, ಗೌರಿ ಸೇರ್ವೆಗಾರ್ ಎಂಬುವರ ಅಂಗಡಿ ಕೋಣೆ ಜಖಂಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts