More

    ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಷ್ಟದತ್ತ, ಕಳಪೆ ತಂತ್ರಜ್ಞಾನಕ್ಕೆ ಓರ್ವ ಬಲಿ-ನಾಲ್ವರ ಸ್ಥಿತಿ ಚಿಂತಾಜನಕ, ಆಡಳಿತ ಮಂಡಳಿ ವಜಾಕ್ಕೆ ಒಕ್ಕೋರಲ ಆಗ್ರಹ

    ವಿಜಯಪುರ: ಆಡಳಿತ ಮಂಡಳಿಯ ನಿರ್ಲಕ್ಷ್ಯ ಹಾಗೂ ಅಪ್ರಾಮಾಣಿಕತೆಯಿಂದಾಗಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ದಿನೇ ದಿನೇ ಹಾನಿಯತ್ತ ಹೆಜ್ಜೆ ಇರಿಸಿದ್ದು, ಇದೀಗ ಕಳಪೆ ತಂತ್ರಜ್ಞಾನಕ್ಕೆ ಓರ್ವ ಬಲಿಯಾಗಿ ಇನ್ನೂ ನಾಲ್ವರು ಸಾವು ನೋವಿನ ನಡುವೆ ಹೋರಾಡುತ್ತಿದ್ದಾರೆಂದು ಕಾರ್ಖಾನೆ ಮಾಜಿ ಅಧ್ಯಕ್ಷ ಕುಮಾರ ದೇಸಾಯಿ ಜೈನಾಪುರ ಅಸಮಾಧಾನ ಹೊರಹಾಕಿದರು.

    ಬಬಲೇಶ್ವರ ತಾಲೂಕಿನ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ದೇಶದಲ್ಲಿಯೇ ಖ್ಯಾತಿ ಗಳಿಸಿತ್ತು. ಕಬ್ಬು ಬೆಳೆಗಾರರಿಗೆ ಆದರ್ಶಪ್ರಿಯವಾಗಿತ್ತು. ಇಂಥ ಕಾರ್ಖಾನೆ ಇದೀಗ ಹಾಲಿ ಆಡಳಿತ ಮಂಡಳಿಯ ದುರಾಡಳಿತಕ್ಕೆ ಸಿಲುಕಿ ಕೋಟ್ಯಂತರ ರೂಪಾಯಿ ಹಾನಿಯತ್ತ ಸಾಗಿದೆ. ಈ ಬಗ್ಗೆ ಕಾರ್ಖಾನೆಯ ಹಿತ ಚಿಂತಕರು ಸರ್ವ ಸಾಮಾನ್ಯ ಸಭೆಯಲ್ಲಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಕಾರ್ಖಾನೆ ತಪ್ಪು ನಿರ್ಧಾರಗಳು:

    ಈ ಹಿಂದೆ ಪ್ರತಿ ದಿನ 6000 ಟನ್ ಕಬ್ಬು ನುರಿಸುವ ಸಾಮರ್ಥ್ಯವನ್ನು 7500 ಟನ್‌ಗೆ ವಿಸ್ತರಿಸಲು ಸುಮಾರು 238 ಕೋಟಿ ವೆಚ್ಚದಲ್ಲಿ ಟೆಂಡರ್ ಮಾಡಲಾಗಿತ್ತು. ಆದರೆ, ಹಾಲಿ ಆಡಳಿತ ಮಂಡಳಿ ಈ ಟೆಂಡರ್‌ನ್ನು 7500ರ ಬದಲಾಗಿ 4000 ಟನ್ ಸಾಮರ್ಥ್ಯಕ್ಕೆ ಇಳಿಸಿ 290 ಕೋಟಿ ರೂ.ವೆಚ್ಚ ಮಾಡಿ ಅಂದಾಜು 70 ಕೋಟಿ ಅವ್ಯವಹಾರ ನಡೆಸಿರುವುದು ಕಂಡು ಬಂದಿತ್ತು. 51 ಕೋಟಿಗೆ ಹೊಸ ವಿಸ್ತರಣೆ ಕೈಗೊಳ್ಳಲು 2017 ಅ. 23 ರಂದು ಹೊಸ ಬಾಯ್ಲರ್ ಅಳವಡಿಸಲು ಇಸ್‌ಜಾಕ್ ಕಂಪನಿಗೆ ಟೆಂಡರ್ ನೀಡಲು ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ನಂತರ ಬಂದ ಆಡಳಿತ ಮಂಡಳಿ ಇಸ್‌ಜಾಕ್ ಕಂಪನಿಗೆ ನೀಡಿರುವ ಟೆಂಡರ್ ರದ್ದು ಪಡಿಸಿ, ಕೆಟಿಟಿಪಿ ಆ್ಯಕ್ಟ್ ಉಲ್ಲಂಘಿಸಿ ಎಸ್.ಎಸ್. ಇಂಜಿನಿಯರಿಂಗ್ ಪುಣೆಗೆ ವಹಿಸಲಾಯಿತು. ಈ ಕಂಪನಿಗೆ 49 ಕೋಟಿ ರೂ. ನೀಡಿರುವುದು ಕಾನೂನು ಬಾಹಿರವಾಗಿದೆ. ಹೀಗಾಗಿ ಇಸ್‌ಜಾಕ್ ಕಂಪನಿಯವರು ಕೋರ್ಟ್‌ಗೆ ಮೊರೆ ಹೋದರು. ಆಗ ಆಡಳಿತ ಮಂಡಳಿ ತಪ್ಪೊಪ್ಪಿಕೊಂಡು ದಂಡ ಭರಣ ಮಾಡಿ ಸುಮಾರು 3 ಕೋಟಿ ರೂಪಾಯಿ ಕಂಪನಿಗೆ ಮರಳಿಸಿದ್ದಾರೆ. ಇದಕ್ಕೂ ಮೊದಲಿದ್ದ ಆಡಳಿತ ಮಂಡಳಿ ಸಹ 2.50 ಕೋಟಿ ರೂ.ಮುಂಗಡ ಕೊಟ್ಟಿದ್ದಾರೆ. ಒಟ್ಟಾರೆ ಕಾರ್ಖಾನೆಗೆ 5.5 ಕೋಟಿ ರೂಪಾಯಿ ಹಾನಿಯಾಗಿದೆ ಎಂದರು.

    ಕಳಪೆ ತಂತ್ರಜ್ಞಾನ:

    ಇಷ್ಟೆಲ್ಲಾ ನಿಯಮಬಾಹಿರ ಕೃತ್ಯದ ಹೊರತಾಗಿಯೂ ಎಸ್‌ಎಸ್ ಇಂಜಿನಿಯರಿಂಗ್‌ಗೆ ಗುತ್ತಿಗೆ ನೀಡಿದ್ದು, ಆ ಕಂಪನಿ ಕಳಪೆ ಗುಣಮಟ್ಟದ ಬಾಯ್ಲರ್ ಅಳವಡಿಸಲು ಮುಂದಾದ ಪರಿಣಾಮ ಇಂದು ಓರ್ವ ಕಾರ್ಮಿಕ ಅಸುನೀಗಿ ಇನ್ನೂ ನಾಲ್ವರು ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ.
    ಬಾಯ್ಲಿಂಗ್ ಹೌಸ್ ಮತ್ತು ಮಿಲ್ ನಿರ್ಮಾಣ ಮಾಡಲು ಮಾ. 2018 ರಂದು ಉಲ್ಕಾ ಪುಣೆ ಕಂಪನಿಗೆ 91 ಕೋಟಿಗೆ ಟೆಂಡರ್ ನೀಡಲಾಗಿತ್ತು. ಡಿಪಿಆರ್ ಪ್ರಕಾರ 7500 ಟನ್ ಪ್ರತಿ ದಿನ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿತ್ತು. ಆದರೆ ಈಗಿನ ಕಂಪನಿ 7500 ಟನ್ ಬದಲಾಗಿ 4000ಟನ್ ಗೆ ಇಳಿಸಿದೆ. ಅದರಲ್ಲಿಯೂ ಅಂದಾಜು 25ಕೋಟಿ ರುಪಾಯಿ ಹಣ ಅವ್ಯವಹಾರ ನಡೆದಿರುವುದು ಕಂಡು ಬಂದಿದೆ ಎಂದರು.

    ಕ್ರಮಕ್ಕೆ ಒತ್ತಾಯ:

    ಅವ್ಯವಹಾರ, ಅಪ್ರಮಾಣಿಕತೆ ಹಾಗೂ ಭ್ರಷ್ಟಾಚಾರದಿಂದಾಗಿ ಕಾರ್ಖಾನೆ ಅಧೋಗತಿಗೆ ಇಳಿದಿದೆ. ಸೆಪ್ಟೆಂಬರ್ 2022ರಲ್ಲಿ ನಡೆದ ಸಾಮಾನ್ಯ ಸಭೆ ನಂತರದಲ್ಲಿ ಆದ ಅವ್ಯವಹಾರ ಕುರಿತು ಬೆಂಗಳೂರಿನ ಸಕ್ಕರೆ ಆಯುಕ್ತರ ಗಮನಕ್ಕೆ ತರಲಾಗಿದೆ. ಆಡಳಿತ ಮಂಡಳಿಯನ್ನು ವಜಾ ಮಾಡಲು ಕೋರಲಾಗಿದೆ. ಇನ್ನಾದರೂ ಸರ್ಕಾರ ರೈತರ ಹಿತಾಸಕ್ತಿಗೆ ಅತ್ಯಂತ ಸೂಕ್ತವಾಗಿರವ ಈ ಕಾರ್ಖಾನೆಯ ಹಾಲಿ ಅಧ್ಯಕ್ಷರು ಮತ್ತು ವ್ಯವಸ್ಥಾಪಕರ ನಿರ್ದೇಶಕರ ಮೇಲೆ ಸೂಕ್ತ ಕ್ರಮ ಕೈಗೊಂಡು ಹಾಲಿ ಆಡಳಿತ ಮಂಡಳಿಯನ್ನು ವಜಾಗೊಳಿಸಬೇಕೆಂದು ಮನವಿ ಮಾಡಿದರು.
    ಡಾ.ಕೆ.ಎಚ್. ಮುಂಬಾರಡ್ಡಿ, ಎಚ್.ಎಸ್. ಕೋನರಡ್ಡಿ,(ಜಂಬಗಿ), ಬಸನಗೌಡ ಪಾಟೀಲ (ಹೊಸೂರ), ಜಿ.ಕೆ. ಪಾಟೀಲ (ಬಾಡಗಿ), ಟಿ.ಜಿ. ನಾಯಕ, ಟಿ.ಕೆ. ಪಾಟೀಲ ಗಲಗಲಿ, ಅಶೋಕ ಲೆಂಕೆಣ್ಣವರ, ಉಮೇಶ ಮಲ್ಲಣ್ಣವರ, ಚಂದ್ರಶೇಖರ ಪಾಟೀಲ, ಜಯಪ್ಪ ಬಿರಾದಾರ, ಮಂಜು ಆಲಬಾಳ, ಸುಭಾಷ ಸಾಹುಕಾರ, ರಮೇಶ ಗಡಜಾನ, ರೈತ ಹಣಮಂತ ಹರನಟ್ಟಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts