More

    ಲೋಕಾಯುಕ್ತ ನ್ಯಾ ಪಾಟೀಲ್ ನಗರ ಪ್ರದಕ್ಷಿಣೆ, ಮೆಗ್ಗಾನ್, ಪಾಲಿಕೆ ವಿರುದ್ಧ ಕೇಸ್

    ಶಿವಮೊಗ್ಗ: ಎರಡು ದಿನಗಳ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಶನಿವಾರ ನಗರ ಪ್ರದಕ್ಷಿಣೆ ಹಾಕಿದ್ದು ಮಹಾನಗರ ಪಾಲಿಕೆ ಮತ್ತು ಮೆಗ್ಗಾನ್ ಆಸ್ಪತ್ರೆ ಲೋಪಗಳ ಕುರಿತು ಅಸಮಾಧಾನ ಹೊರಹಾಕಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಿಸಿ ಮುಟ್ಟಿಸಿದರು.
    ಬೆಳ್ಳಂಬೆಳಗ್ಗೆ ಗೋಪಾಳ ರಸ್ತೆ, ವಿನೋಬನಗರ ರಸ್ತೆ, ಸಾಗರ ರಸ್ತೆ, ಶಂಕರಮಠ ರಸ್ತೆ, ಕುವೆಂಪು ರಸ್ತೆ, ಬಿ.ಎಚ್.ರಸ್ತೆ, ಎನ್.ಟಿ.ರಸ್ತೆ, ಗೋಪಿವೃತ್ತ ಸೇರಿದಂತೆ ಹಲವೆಡೆ ಸಂಚರಿಸಿ ಸ್ವಚ್ಛತೆ ಬಗ್ಗೆ ಪರಿಶೀಲಿಸಿದರು. ಈ ವೇಳೆ ಹಲವೆಡೆ ಸ್ವಚ್ಛತೆ ಕಾರ್ಯ ಸಮರ್ಪಕವಾಗಿದ್ದರಿಂದ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಧೀಶರು ಸ್ಥಳದಲ್ಲೇ ಕೇಸ್ ದಾಖಲಿಸಿಕೊಳ್ಳಲು ಸೂಚನೆ ನೀಡಿದರು.
    ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ಮತ್ತು ಸೀರೋಗ ವಿಭಾಗಕ್ಕೆ ಭೇಟಿ ನೀಡಿದ ನ್ಯಾಯಾಧೀಶರು ಮಕ್ಕಳ ಪಾಲಕರನ್ನು ವಿಚಾರಿಸಿ ಮಾಹಿತಿ ಪಡೆದರು. ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಕೆಲ ಮಕ್ಕಳ ಪಾಲಕರ ದೂರು ನೀಡಿದರು. ಸಿಬ್ಬಂದಿ ಸ್ಪಂದಿಸುತ್ತಿಲ್ಲವೆಂಬ ಹಾಗೂ ಕಳಪೆ ಆಹಾರ ಕೊಡುತ್ತಿದ್ದಾರೆಂಬ ಆರೋಪವೂ ಕೇಳಿಬಂತು. ಆಸ್ಪತ್ರೆ ವಾತಾವರಣ ಕಂಡು ಲೋಕಾಯುಕ್ತರು ಗರಂ ಆದರು.ಹಳೇಕಟ್ಟಡ ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಸುಮೋಟೊ ಕೇಸ್ ದಾಖಲಿಸಿಕೊಳ್ಳಲು ನಿರ್ದೇಶನ ನೀಡಿದರು.
    ಆಸ್ಪತ್ರೆ ವಿವಿಧ ವಾರ್ಡ್, ಮಕ್ಕಳ ತೀವ್ರ ನಿಗಾಘಟಕ ಪರಿಶೀಲಿಸಿ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಮಕ್ಕಳ ವಿಭಾಗಕ್ಕೂ ಭೇಟಿ ನೀಡಿದ ಲೋಕಾಯುಕ್ತರು ಮಕ್ಕಳ ವಾರ್ಡ್, ತುರ್ತು ಚಿಕಿತ್ಸಾ ಘಟಕ, ಪೌಷ್ಠಿಕ ಪುನರ್ವಸತಿ ಕೇಂದ್ರ ವೀಕ್ಷಣೆ ಮಾಡಿದರು. ಶರಾವತಿ ಮಕ್ಕಳ ವಿಭಾಗ ಜೀರ್ಣಾವಸ್ಥೆ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತರು, ಒಂದು ತಿಂಗಳ ಗಡುವು ನೀಡಿದರು. ಮುಂದಿನ ತಿಂಗಳು ಮತ್ತೆ ಭೇಟಿ ನೀಡುತ್ತೇನೆ. ಇಡೀ ತಂಡದೊಂದಿಗೆ ಮತ್ತೆ ಬರುತ್ತೇನೆ. ಆಸ್ಪತ್ರೆಯಲ್ಲಿ ಸೌಲಭ್ಯ ಸಮರ್ಪಕವಾಗಿರಬೇಕು ಎಂದು ಎಚ್ಚರಿಕೆ ನೀಡಿದರು. ಸಿಬ್ಬಂದಿ ಹಾಜರಾತಿ, ಔಷಧ ರಿಜಿಸ್ಟರ್ ಸಮರ್ಪಕವಾಗಿರಬೇಕು ಎಂದು ವೈದ್ಯರಿಗೆ ಸೂಚಿಸಿದರು.
    ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಶ್ರೀಧರ್, ಜಿಲ್ಲಾ ಶಸ್ತ್ರಚಿಕಿತ್ಸ ಡಾ. ಸಿದ್ದನಗೌಡ ಪಾಟೀಲ್, ಲೋಕಾಯುಕ್ತ ಎಸ್ಪಿ ಎನ್.ವಾಸುದೇವರಾಮ, ಡಿವೈಎಸ್ಪಿ ಎನ್.ಮೃತ್ಯುಂಜಯ, ಇನ್‌ಸ್ಪೆಕ್ಟರ್‌ಗಳಾದ ಎಚ್.ರಾಧಾಕೃಷ್ಣ, ಎಚ್.ಎಂ.ಜಗನ್ನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts