More

    ಒಂಬತ್ತು ಕಡೆ ಲೋಕಾಯುಕ್ತ ದಾಳಿ

    ಕಲಬುರಗಿ: ಜಿಲ್ಲೆಯ ನಾಡ ಕಚೇರಿ ಸೇರಿ ಒಂಬತ್ತು ಕಡೆ ೫೦ಕ್ಕೂ ಅಧಿಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸೋಮವಾರ ದಿಢೀರ್ ದಾಳಿ ನಡೆಸಿ ಕಡತ ಪರಿಶೀಲಿಸಿದರು. ವಿವಿಧ ಶುಲ್ಕಗಳಿಗೆ ಸಂಗ್ರಹಿಸಿದ ಹಣ ಹೊರತುಪಡಿಸಿ ಹೆಚ್ಚುವರಿಯಾಗಿದ್ದ ೪೯,೦೦೦ ರೂ. ನಗದು ವಶಪಡಿಸಿಕೊಂಡಿದ್ದು, ಎಲ್ಲೆಡೆ ತಡರಾತ್ರಿವರೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.

    ಜಿಲ್ಲೆಯ ನಾಡ ಕಚೇರಿ, ಅಟಲ್ ಜನಸ್ನೇಹಿ, ಆಧಾರ್ ಸೇವಾ, ನೆಮ್ಮದಿ ಕೇಂದ್ರಗಳಲ್ಲಿ ಹೆಚ್ಚುವರಿ ಹಣ ಪಡೆಯುವುದು, ಭ್ರಷ್ಟಾಚಾರ, ಏಜೆಂಟರ ಮೂಲಕ ಲಂಚ ಪಡೆಯವ ದೂರುಗಳು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಕಲಬುರಗಿ ನಗರ, ಜೇವರ್ಗಿ, ಅಫಜಲಪುರ, ಶಹಾಬಾದ್, ಸೇಡಂ, ಚಿಂಚೋಳಿ, ಆಳಂದ, ಚಿತ್ತಾಪುರ ಮತ್ತು ಯಡ್ರಾಮಿ ತಾಲೂಕಿನ ಕಚೇರಿಗಳಲ್ಲಿ ದಾಳಿ ಮಾಡಿ ಕಡತಗಳ ತಪಾಸಣೆ ನಡೆಸಲಾಗಿದೆ.

    ಸರ್ಕಾರದ ವಿವಿಧ ಸೇವೆಗಳಿಗೆ ವಿಧಿಸುತ್ತಿರುವ ಶುಲ್ಕ ಮತ್ತು ಸಿಬ್ಬಂದಿ ಬಳಿ ಇದ್ದ ಹಣದ ಲೆಕ್ಕ ಹಾಕಲಾಯಿತು. ಈ ವೇಳೆ ಚಿತ್ತಾಪುರ ಆಧಾರ್ ಸೇವಾ ಕೇಂದ್ರದಲ್ಲಿ ೧೨,೦೦೦ ಹಾಗೂ ನಗರದ ನಾಡ ಕಚೇರಿಯಲ್ಲಿ ೩೭,೦೦೦ ಸೇರಿ ೪೯ ಸಾವಿರ ಹೆಚ್ಚುವರಿ ನಗದು ಪತ್ತೆಯಾಗಿದೆ.

    ಲೋಕಾಯುಕ್ತ ಎಸ್‌ಪಿ ಕೆ.ಜೆ. ಆ್ಯಂಟೋನಿ ಮಾರ್ಗದರ್ಶನದಲ್ಲಿ ಕಲಬುರಗಿ ನಾಡ ಕಚೇರಿಯಲ್ಲಿ ಮಂಜುನಾಥ ಗಂಗಾಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

    ನೆಮ್ಮದಿ ಕೇಂದ್ರದ ಕಡತ ಪರಿಶೀಲನೆ: ಜೇವರ್ಗಿ: ಮಿನಿ ವಿಧಾನಸೌಧದಲ್ಲಿರುವ ನೆಮ್ಮದಿ ಕೇಂದ್ರಕ್ಕೆ ಲೋಕಾಯುಕ್ತರು ಸೋಮವಾರ ಹಠಾತ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಡಿವೈಎಸ್‌ಪಿ ಗೀತಾ ಬೆನಹಾಳ ಮಾತನಾಡಿ, ಎರಡು ತಿಂಗಳ ಹಿಂದೆ ಜಿಲ್ಲೆಯ ನೆಮ್ಮದಿ ಕೇಂದ್ರಗಳಲ್ಲಿ ನಿಗದಿತ ಅವಧಿಯಲ್ಲಿ ಕಡತಗಳ ವಿಲೇವಾರಿ ವಿಳಂಬ, ಅರ್ಜಿಗೆ ಹೆಚ್ಚಿನ ಹಣ ಪಡೆಯುತ್ತಿರುವ ದೂರು ಕೇಳಿಬಂದಿದ್ದರಿಂದ ಕಡತ ಪರಿಶೀಲಿಸಲಾಗುತ್ತಿದೆ. ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿ ಕೆಲಸ ಮಾಡಿಕೊಡಬೇಕು ಎಂದರು. ಹಳ್ಳಿಗಳಿಂದ ಬರುವ ಜನರನ್ನು ವಿನಾಕಾರಣ ಅಲೆದಾಡಿಸುತ್ತಿರುವ ದೂರುಗಳಿವೆ. ಕಡತಗಳಲ್ಲಿ ಲೋಪದೋಷ ಕಂಡು ಬಂದಲ್ಲಿ ಸಂಬಂಧಿತ ನೌಕರ ಹಾಗೂ ಹಿರಿಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು. ತಹಸೀಲ್ದಾರ್ ಮಲ್ಲಣ್ಣ ಯಲಗೋಡ, ಗ್ರೇಡ್-೨ ತಹಸೀಲ್ದಾರ್ ಪ್ರಸನ್ನಕುಮಾರ ಮುಘೇಕರ್, ಲೋಕಾಯುಕ್ತ ತಂಡದ ಫಯೀಮ್, ಪ್ರದೀಪ, ಜಯಶ್ರೀ, ಪವಾಡೆಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts