More

    ಲಾಕ್‌ಡೌನ್ ಸೇವಕರಿಗೆ ಸಲಾಂ…

    ಬೆಳಗಾವಿ: ವಿಶ್ವದ ನಿದ್ದೆಗೆಡಿಸುತ್ತಿರುವ ಮಾರಕ ಕರೊನಾ ವೈರಸ್ ನಿಯಂತ್ರಣಕ್ಕೆ ವೈಯಕ್ತಿಕ ಜೀವನ, ಆರೋಗ್ಯ ಕಾಳಜಿ ಮರೆತು ಗ್ರಾಮೀಣ ಭಾಗದಲ್ಲಿ ಗ್ರಾಪಂ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಲೆಕ್ಕಾಧಿಕಾರಿಗಳು ಶ್ರಮಿಸುತ್ತಿದ್ದಾರೆ. ಅವರೆಲ್ಲರ ಕಾರ್ಯಕ್ಕೆ ಸರ್ಕಾರ, ಸಂಘ-ಸಂಸ್ಥೆಗಳು ಮಾತ್ರವಲ್ಲದೆ ಸಾರ್ವಜನಿಕರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರಗಳಿಂದ ಸ್ವಗ್ರಾಮಗಳಿಗೆ ಆಗಮಿಸುವ ಜನರ ಮೇಲೆ ಕಣ್ಣಿಡಲು ಸರ್ಕಾರ ಗ್ರಾಪಂ ಸಿಬ್ಬಂದಿ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಿದ್ದು, ಮನೆ-ಮನೆಗೆ ತೆರಳಿ ಜನರಿಗೆ ಕರೊನಾ ನಿಯಂತ್ರಣ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಜತೆಗೆ ಕ್ವಾರಂಟೈನ್‌ಗೆ ಒಳಪಟ್ಟ ಸೋಂಕಿತರ ಮಾಹಿತಿಯನ್ನು ನಿತ್ಯವೂ ಅಧಿಕಾರಿಗಳಿಗೆ ಅಪ್‌ಡೇಟ್ ಮಾಡುತ್ತಿದ್ದಾರೆ.

    ಸವಾಲಾದ ನಿಯಂತ್ರಣ ಕಾರ್ಯ: 4-5 ದಿನಗಳ ಅವಧಿಯಲ್ಲಿ ಗೋಕಾಕ, ರಾಮದುರ್ಗ, ಸವದತ್ತಿ, ಬೈಲಹೊಂಗಲ, ಖಾನಾಪುರ, ಕಿತ್ತೂರು ಸೇರಿ ಜಿಲ್ಲೆಯ 240ಕ್ಕೂ ಅಧಿಕ ಹಳ್ಳಿಗಳಿಗೆ ಬೆಂಗಳೂರು, ಹೈದ್ರಾಬಾದ್, ಮುಂಬೈ, ವಾಸ್ಕೋ, ಪುಣೆ ಸೇರಿ ವಿವಿಧ ಪ್ರದೇಶಗಳಿಂದ ಜನರು ಆಗಮಿಸಿದ್ದಾರೆ. ಈ ಪೈಕಿ ಕೆಲವರನ್ನು ತಪಾಸಣೆಗೆ ಒಳಪಡಿಸಿ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಆದರೆ, ಗಾಮೀಣ ಭಾಗದಲ್ಲಿ ಜನರು ಹೋಂ ಕ್ವಾರಂಟೈನ್‌ನಲ್ಲಿರುವವರು ಹಾಗೂ ಅವರ ಕುಟುಂಬಸ್ಥರನ್ನು ಕಂಡರೆ ಭೀತಿಗೆ ಒಳಗಾಗುತ್ತಿದ್ದಾರೆ. ಕೆಲವರು ಅವರ ಮನೆಗಳತ್ತ ತೆರಳಲು ಭಯಪಡುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರನ್ನು ನಿಯಂತ್ರಿಸುವುದು ಗ್ರಾಪಂ ಸಿಬ್ಬಂದಿಗೆ ಸವಾಲಾಗಿದೆ.

    ಸಮಿತಿ ರಚನೆ: ಗ್ರಾಮೀಣ ಭಾಗದಲ್ಲಿ ಸೋಂಕು ತಡೆಗಟ್ಟುವ ಉದ್ದೇಶ ಹಾಗೂ ಜನರಿಗೆ ಜಾಗೃತಿ ಮೂಡಿಸಲು ಸರ್ಕಾರ ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ಸಮಿತಿ ರಚನೆ ಮಾಡಿದೆ. ಗ್ರಾಪಂ ಆಡಳಿತ ಮಂಡಳಿಗೆ ಈ ಸಮಿತಿ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಆದರೆ, ನಾವು ಎಷ್ಟೇ ಅರಿವು ಮೂಡಿಸಿದರೂ ಜನರು ಮನೆಯಿಂದ ಹೊರಗೆ ಬರುವುದನ್ನು ನಿಲ್ಲಿಸುತ್ತಿಲ್ಲ. ಆದರೂ ನಾವು ನಮ್ಮ ಕಾರ್ಯ ನಿಲ್ಲಿಸುವುದಿಲ್ಲ ಎನ್ನುತ್ತಾರೆ ಆಶಾ, ಅಂಗನವಾಡಿ ಕಾರ್ಯಕರ್ತೆರು.

    ನಾವೂ ನಿಮ್ಮಂತೆ ಮನುಷ್ಯರೇ…

    ನಿತ್ಯ ಬೆಳಗ್ಗೆಯಿಂದ ಸಂಜೆಯವರೆಗೆ ಗ್ರಾಮಗಳಲ್ಲಿ ಸಂಚರಿಸಿ ಜನರಿಗೆ ತಿಳಿವಳಿಕೆ ಮೂಡಿಸುತ್ತಿದ್ದೇವೆ. ಕರೊನಾ ಲಕ್ಷಣಗಳು ಕಂಡುಬಂದರೆ ಅಂತಹವರನ್ನು ಕ್ವಾರಂಟೈನ್‌ಗೆ ಸೇರಿಸುತ್ತೇವೆ. ಇಷ್ಟೆಲ್ಲ ಕೆಲಸ ಮುಗಿಸಿ ಸಂಜೆ ಮನೆಗೆ ಹೋದರೆ ಕುಟುಂಬ ಸದಸ್ಯರು ನಮ್ಮನ್ನು ಅನುಮಾನದಿಂದ ನೋಡುತ್ತಾರೆ. ಗ್ರಾಮಗಳಲ್ಲಿ ತೆರಳುವಾಗ ಜನರು ನಮ್ಮನ್ನು ಕರೊನಾ ಪತ್ತೆ ಹಚ್ಚುವವರು ಎಂದು ಟೀಕಿಸುತ್ತಾರೆ. ನಾವು ಮಾಡುವ ಈ ಕಾಯಕ ಸಮಾಜ ಹಾಗೂ ಸಮಾಜದ ಜನರ ಒಳಿತಿಗಾಗಿ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರುತ್ತಾರೆ ಆಶಾ ಕಾರ್ಯಕರ್ತೆಯರು.

    ಸರ್ಕಾರದ ನಿರ್ದೇಶನದಂತೆ ಕರೊನಾ ತಡೆಗಟ್ಟಲು, ಸೋಂಕಿತರನ್ನು ಪತ್ತೆ ಹಚ್ಚಲು ಗ್ರಾಪಂ ಮಟ್ಟದಲ್ಲಿ ಕಾರ್ಯಪಡೆ ಸಮಿತಿ ರಚಿಸಲಾಗಿದೆ. ಆ ಸಮಿತಿ ಮೂಲಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ಅವರಿಗೆ ಸಹಕಾರ ನೀಡಬೇಕು.
    | ಡಾ. ಕೆ.ವಿ. ರಾಜೇಂದ್ರ ಜಿಪಂ ಸಿಇಒ

    ಕರೊನಾ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಗ್ರಾಪಂ ಸಿಬ್ಬಂದಿ, ಪಿಡಿಒ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
    | ಡಾ. ಎಸ್.ಬಿ. ಬೊಮ್ಮನಹಳ್ಳಿ ಜಿಲ್ಲಾಧಿಕಾರಿ


    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts