More

    ಯುರೋಪ್ ದೇಶಗಳಲ್ಲಿ ಲಾಕ್​ಡೌನ್ ಸಡಿಲ

    ರೋಮ್ ಮಹಾಮಾರಿ ಕರೊನಾ ವೈರಸ್ ರೋಗದಿಂದ ಹೆಚ್ಚು ಬಾಧಿತವಾಗಿರುವ ಯುರೋಪ್​ನಲ್ಲಿ ಅನೇಕ ದೇಶಗಳು ಲಾಕ್​ಡೌನ್ ಸಡಿಲಗೊಳಿಸಲು ನಿರ್ಧರಿಸಿವೆ. ಆದರೆ, ಸೋಂಕು ಮತ್ತು ಸಾವಿನ ಪ್ರಕರಣಗಳು ಇನ್ನೂ ಹತೋಟಿಗೆ ಬಾರದ ಸ್ಥಿತಿ ಇರುವುದರಿಂದ ಈ ನಿರ್ಧಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕಳವಳ ಕೂಡ ವ್ಯಕ್ತವಾಗಿದೆ. ಕರೊನಾ ಸಾವಿನ ಸಂಖ್ಯೆಯಲ್ಲಿ ಅಮೆರಿಕ ನಂತರ ಎರಡನೇ ಸ್ಥಾನದಲ್ಲಿರುವ ಇಟಲಿಯಲ್ಲಿ ಎರಡು ತಿಂಗಳಿಂದ ಜಾರಿಯಲ್ಲಿರುವ ಲಾಕ್​ಡೌನ್ ಕ್ರಮೇಣ ಸಡಿಲಿಕೆಯಾಗುವತ್ತ ಹೆಜ್ಜೆಯಿಟ್ಟಿದೆ. ಜನರು ಪಾರ್ಕ್​ಗಳಲ್ಲಿ ಓಡಾಡಲು ಹಾಗೂ ಸಂಬಂಧಿಕರನ್ನು ಭೇಟಿ ಮಾಡಲು ಸೋಮವಾರದಿಂದ ಅವಕಾಶ ಕಲ್ಪಿಸಲಾಗಿದೆ. ರೆಸ್ಟೋರೆಂಟ್​ಗಳನ್ನು ತೆರೆಯಲಾಗಿದ್ದು, ಗ್ರಾಹಕರು ಆಹಾರ ಸಾಮಗ್ರಿಗಳನ್ನು ಪಾರ್ಸೆಲ್ ಒಯ್ಯಬಹುದಾಗಿದೆ. ಹೊಟೇಲ್​ನಲ್ಲಿ ಕುಳಿತು ತಿನ್ನುವಂತಿಲ್ಲ. ಸಗಟು ವ್ಯಾಪಾರ ಅಂಗಡಿಗಳು ಕೂಡ ವ್ಯವಹಾರ ನಡೆಸಬಹುದಾಗಿದೆ. ಆದರೆ, ಲಾಕ್​ಡೌನ್​ನಲ್ಲಿ ನೀಡಲಾಗಿರುವ ಈ ರಿಯಾಯತಿ ಎಷ್ಟು ದಿನ ಇರಲಿದೆ ಎನ್ನುವ ಬಗ್ಗೆ ಜನತೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ದೇಶದಲ್ಲಿ ಇನ್ನೂ ಕೆಲವು ನಿರ್ಬಂಧಗಳು ಮುಂದುವರಿಯಬೇಕಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

    ಇದನ್ನೂ ಓದಿ: ಜಗತ್ತು ಕರೊನಾ ವಿರುದ್ಧ ಹೋರಾಡ್ತಿದ್ರೆ ‘ಕೆಲವರು’ ಭಯೋತ್ಪಾದನೆ ಹರಡುತ್ತಿದ್ದಾರೆ: ಪಾಕ್‌ಗೆ ಮೋದಿ ಚಾಟಿ

    ಮಕ್ಕಳ ಸಂಭ್ರಮ

    ನಿಯಮಗಳ ಸಡಿಲಿಕೆಯಿಂದ ಇಟಲಿಯ ಜನರು ಸಂಭ್ರಮಪಡುತ್ತಿದ್ದಾರೆ. ಪುಟ್ಟ ಮಕ್ಕಳಿಗಾಗಿ ಮನರಂಜನಾ ಚಟುವಟಿಕೆಗಳನ್ನು ಸಂಘಟಿಸಲು ಆರಂಭಿಸಿದ್ದಾರೆ. ಪುಟಾಣಿಗಳು ತಾತ-ಅಜ್ಜಿಯರೊಂದಿಗೆ ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸಬಹುದಾಗಿದೆ. ಗಾರ್ಡನ್​ಗಳಲ್ಲಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಆಟೋಮೊಬೈಲ್ ಮತ್ತು ಕಟ್ಟಡ ನಿರ್ವಣದಂಥ ಕೆಲವು ವಲಯಗಳು ಈಗಾಗಲೇ ಕೆಲಸ ಪ್ರಾರಂಭಿಸಿವೆ. ವೆನೆಟೊ ಮತ್ತು ಕಲಾಬ್ರಿಯಾ ತುಂಬಾ ಮುಂಚೆಯೇ ಲಾಕ್​ಡೌನ್ ಸಡಿಲಿಸಿದ್ದು ಬಾರ್​ಗಳು ಮತ್ತು ರೆಸ್ಟೊರಾಗಳನ್ನು ತೆರೆಯಲು ಅನುಮತಿಸಿದ್ದವು.

    ವುಹಾನ್ ಲ್ಯಾಬ್ ಮೇಲೆ ಮತ್ತೆ ಕೆಂಗಣ್ಣು

    ಕೊವಿಡ್-19 ಮಹಾಮಾರಿ ವೈರಸ್ ಚೀನಾದ ವುಹಾನ್​ನ ಒಂದು ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿದ್ದು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಭಾನುವಾರ ಪುನರುಚ್ಚರಿಸಿದ್ದಾರೆ. ವಿಶ್ವದಾದ್ಯಂತ ಜನರ ಪ್ರಾಣ ಹಾನಿಗೆ ಕಾರಣವಾದ ರೋಗಕ್ಕೆ ಚೀನಾವನ್ನು ಹೊಣೆ ಮಾಡಬೇಕೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಹಿಸುತ್ತಲೇ ಬಂದಿದ್ದಾರೆ. ಅದಕ್ಕೆ ಪಾಂಪಿಯೊ ಪುಷ್ಟಿ ನೀಡಿದ್ದಾರೆ. ಜಗತ್ತಿಗೆ ಸೋಂಕು ಹರಡುವಲ್ಲಿ ಚೀನಾ ಇತಿಹಾಸವನ್ನೇ ಹೊಂದಿದೆ. ಅದರ ಪ್ರಯೋಗಾಲಯಗಳು ಕಳಪೆಯಾಗಿವೆ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ವಲಸೆ ಕಾರ್ಮಿಕರಿಗೆ ಕೊಟ್ರು ಸಿಹಿ ಸುದ್ದಿ

    ಫುಟ್​ಬಾಲ್​ಗೆ ಅನುಮತಿ?

    ಜರ್ಮನಿ, ಸ್ಪೇನ್ ಮುಂತಾದ ದೇಶಗಳು ಕೂಡ ಲಾಕ್​ಡೌನ್ ರಿಯಾಯಿತಿಗೆ ಮುಂದಾಗಿವೆ. ಸ್ಲೊವೇನಿಯಾ, ಪೋಲಂಡ್ ಮತ್ತು ಹಂಗೆರಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ಹಾಗೂ ವ್ಯಾಪಾರ ವ್ಯವಹಾರಕ್ಕೆ ಭಾಗಶಃ ಅವಕಾಶ ನೀಡಲಾಗಿದೆ. ಜರ್ಮನಿಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಸಂಕೇತವೋ ಎನ್ನುವಂತೆ ಈ ತಿಂಗಳು ದೇಶದ ಫುಟ್ಬಾಲ್ ಋತು ಆರಂಭಕ್ಕೆ ಅನುಮತಿ ನೀಡಲು ಆಂತರಿಕ ಹಾಗೂ ಕ್ರೀಡಾ ಸಚಿವರು ಒಲವು ತೋರಿದ್ದಾರೆ. ತಂಡಗಳು ನಿಯಮಗಳನ್ನು ಪಾಲಿಸಲು ಒಪ್ಪುವುದಾದರೆ ಮಾತ್ರ ಅನುಮತಿ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. 48 ದಿನಗಳ ಲಾಕ್​ಡೌನ್ ನಂತರ, ಸ್ಪೇನ್​ನಲ್ಲಿ ಸೋಮವಾರ ಸಾರ್ವಜನಿಕ ಸಾರಿಗೆ ಆರಂಭವಾಗಿದ್ದು ಮುಖಗವಚ ಧರಿಸುವುದು ಕಡ್ಡಾಯವಾಗಿದೆ. ಹೊರಾಂಗಣದಲ್ಲಿ ವ್ಯಾಯಾಮ ಹಾಗೂ ವಾಕಿಂಗ್​ಗೆ ಅವಕಾಶ ಕಲ್ಪಿಸಲಾಗಿದೆ. ಬ್ರಿಟನ್ ಸರ್ಕಾರ ಕೂಡ ಲಾಕ್​ಡೌನ್ ಸಡಿಲಿಕೆಗೆ ಈ ವಾರ ನಿಯಮಾವಳಿ ರೂಪಿಸಲಿದೆ. ಮಹಾಮಾರಿ ರೋಗ ಮತ್ತೆ ವಕ್ಕರಿಸಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿರುವ ಹಿನ್ನೆಲೆಯಲ್ಲಿ ನಿರ್ಬಂಧಗಳ ಸಡಿಲಿಕೆಯಲ್ಲಿ ಸಮತೋಲನ ಕಾಪಾಡಲು ಎಚ್ಚರಿಕೆ ವಹಿಸಲಾಗುತ್ತಿದೆ. ವೈರಸ್ ದಾಳಿಯಿಂದಾಗಿ ನೆಲಕಚ್ಚಿರುವ ಆರ್ಥಿಕತೆಯ ಪುನರುಜ್ಜೀವನಕ್ಕಾಗಿ ಎಚ್ಚರದಿಂದ ನಿರ್ಬಂಧ ಸಡಿಲಿಕೆ ಅಗತ್ಯ ಎಂಬುದು ಸರ್ಕಾರಗಳ ಭಾವನೆ.

    ಜಪಾನ್​ನ ತುರ್ತು ಪರಿಸ್ಥಿತಿ ವಿಸ್ತರಣೆ

    ಟೋಕಿಯೊ: ಜಪಾನ್​ನಲ್ಲಿ ಕರೊನಾ ವೈರಸ್ ಪ್ರಸರಣ ತಡೆಯಲು ಘೋಷಿಸಲಾಗಿರುವ ತುರ್ತು ಪರಿಸ್ಥಿತಿಯನ್ನು ಮೇ 31ರವರೆಗೆ ಮುಂದುವರೆಸುವುದಾಗಿ ಪ್ರಧಾನಿ ಶಿಂಜೋ ಅಬೆ ತಿಳಿಸಿದ್ದಾರೆ. ಟೋಕಿಯೊ ಸೇರಿದಂತೆ ದೇಶದ ಏಳು ಪ್ರಾಂತ್ಯಗಳಲ್ಲಿ ಏ. 7ರಿಂದ ಒಂದು ತಿಂಗಳ ಕಾಲ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ಪ್ರಪಂಚದ ಎಲ್ಲ ದೇಶಗಳೂ ಲಾಕ್​ಡೌನ್ ಮಾಡುತ್ತಿದ್ದರೆ ಜಪಾನ್ ಮಾತ್ರ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಲಾಕ್​ಡೌನ್​ನಂತೆ ತುರ್ತು ಪರಿಸ್ಥಿತಿಯಲ್ಲಿ ಕಡ್ಡಾಯವೆಂಬ ನಿಯಮವಿರುವುದಿಲ್ಲ. ಮನೆಯಿಂದ ಹೊರಬರದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಸರ್ಕಾರ ಸೂಚನೆ ನೀಡಿರುತ್ತದೆ. ಅದಕ್ಕೆ ಸ್ಪಂದಿಸಿದ ಜನರು ಶಾಲಾ ಕಾಲೇಜು ಸೇರಿದಂತೆ ಅಲ್ಲ ಅಂಗಡಿ ಮುಂಗಟ್ಟನ್ನು (ಅಗತ್ಯ ಸೇವೆ ಹೊರತುಪಡಿಸಿ) ಮುಚ್ಚಿದ್ದಾರೆ. ದೇಶದಲ್ಲಿ ಈವರೆಗೆ 17,789 ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 549 ಮಂದಿ ಮೃತರಾಗಿದ್ದಾರೆ.

    ಇದನ್ನೂ ಓದಿ: ತರಕಾರಿ ಖರೀದಿ ನಿಲ್ಲ್ಲಿಸಬೇಡಿ; ಸಂಸದ ಡಿಕೆ ಸುರೇಶ್ ಅಭಿಮತ; ಬಡವರಿಗೆ ತರಕಾರಿ ವಿತರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts