More

    ಲಾಕ್‌ಡೌನ್ ಆದೇಶಕ್ಕೆ ಸ್ಪಂದಿಸದ ಜನರು

    ಬೆಳಗಾವಿ: ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೆಳಗಾವಿ ಸೇರಿ ಸುಮಾರು 9 ಜಿಲ್ಲೆಗಳನ್ನು ಲಾಕ್‌ಡೌನ್ ಮಾಡಿದೆ. ಆದರೆ, ಸೋಮವಾರ ನಗರದಲ್ಲಿ ಜನರು ಸರ್ಕಾರದ ಆದೇಶ ಮೀರಿ ಮಾರುಕಟ್ಟೆಯಲ್ಲಿ ಮುಗಿಬಿದ್ದು ದಿನಬಳಕೆ ವಸ್ತುಗಳನ್ನು ಖರೀದಿಸಿದರು.

    ಹೆಚ್ಚಿನ ಜನರು ಒಂದೆಡೆ ಸೇರಬೇಡಿ ಎಂದು ಜಿಲ್ಲಾಡಳಿತ ಹೇಳುತ್ತಿದ್ದರೂ ಜನತೆ ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ನೆರೆಯ ಮಹಾರಾಷ್ಟ್ರದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್ ಮಾಡಿದರೂ ಸಾರ್ವಜನಿಕರು ಸರಿಯಾಗಿ ಸ್ಪಂದಿಸುತ್ತಿಲ್ಲ. ಪೊಲೀಸರು ಕಿರಾಣಿ, ಹಾಲು ಹಾಗೂ ಔಷಧ, ಹಣ್ಣು ಮತ್ತು ತರಕಾರಿ ಅಂಗಡಿ ಹೊರತುಪಡಿಸಿ ಉಳಿದ ಮಳಿಗೆಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಬೆಳಗಾವಿಯ ಹೋಟೆಲ್‌ಗಳಲ್ಲಿ ಸೇವೆ ಸ್ಥಗಿತಗೊಳಿಸಲಾಗಿದ್ದು, ಪಾರ್ಸಲ್ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

    ಬೆಳಗ್ಗೆಯೇ ಖಡೇಬಜಾರ್‌ನಿಂದ ಕಾರ್ಯಾಚರಣೆ ನಡೆಸಿ ಇತರೆ ಅಂಗಡಿ-ಮುಂಗಟ್ಟುಗಳು ತೆರೆಯದಂತೆ ನಿಗಾ ವಹಿಸಲಾಗಿತ್ತು. ಪೊಲೀಸರು ಬೆಳಗಾವಿ ನಗರದ ಎಲ್ಲ ಬಾರ್ ಆ್ಯಂಡ್ ರೆಸ್ಟೋರಂಟ್ ಹಾಗೂ ವೈನ್‌ಶಾಪ್, ಗಾರ್ಮೆಂಟ್ ತೆರೆಯದಂತೆ
    ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು.

    ಹಬ್ಬದ ಖರೀದಿ: ಕೆಲವರು ಕರೊನಾಗೆ ಹೆದರಿ ಮನೆಯಲ್ಲಿ ಕುಳಿತರೆ, ಕೆಲವರು ತಲೆಕೆಡಿಸಿಕೊಳ್ಳದೆ ಸೋಮವಾರ ತರಕಾರಿಯೊಂದಿಗೆ ಯುಗಾದಿ ಹಬ್ಬದ ಸಾಮಗ್ರಿ ಖರೀದಿಸಿದರು. ಜನ ಗುಂಪು-ಗುಂಪಾಗಿ ಹೂವು, ಹಣ್ಣು, ತೆಂಗಿನಕಾಯಿ, ಬಿಲ್ವಪತ್ರೆ ಹಾಗೂ ತುಳಸಿ ಖರೀದಿಸಿದರು. ನಗರದ ಗಣಪತಿ ಗಲ್ಲಿ, ಕೋತವಾಲ್ ಗಲ್ಲಿ, ಖಡೇಬಜಾರ್ ಹಾಗೂ ಇನ್ನಿತರ ಪ್ರದೇಶದಲ್ಲಿ ಜನದಟ್ಟಣೆ ಹೆಚ್ಚಾಗಿತ್ತು.

    ಜನರ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ಲಾಕ್‌ಡೌನ್ ಮಾಡಲಾಗಿದೆ. ಅಗತ್ಯವಿರುವ ದಿನಸಿ ಅಂಗಡಿ, ಔಷಧ ಹಾಗೂ ತರಕಾರಿ ಅಂಗಡಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದನ್ನು ಜನ ಹಾಗೂ ಅಂಗಡಿಗಳ ಮಾಲೀಕರು ದುರುಪಯೋಗ ಮಾಡಿಕೊಳ್ಳಬಾರದು. ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು.
    | ಡಾ. ಎಸ್.ಬಿ.ಬೊಮ್ಮನಹಳ್ಳಿ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts