More

    ಮಾದಕವಸ್ತುಗಳ ವ್ಯಸನ ತೊರೆಯಲು ಲಾಕ್​ಡೌನ್ ಸಕಾಲ

    | ಪಂಕಜ ಕೆ.ಎಂ ಬೆಂಗಳೂರು

    ಒಂದು ಹಂತಕ್ಕೆ ವ್ಯಕ್ತಿಯ ಜೀವನ ಸಂಪೂರ್ಣ ನಾಶ ಮಾಡುವ ಈ ಮಾದಕ ವ್ಯಸನದ ಪ್ರಮಾಣ ಕೋವಿಡ್ ಸೋಂಕು ನಿಯಂತ್ರಿಸಲು ವಿಧಿಸಿದ್ದ ಲಾಕ್​ಡೌನ್ ಸಂದರ್ಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹಾಗಾಗಿ ಇಂತಹ ಸಮಸ್ಯೆಯಿಂದಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆಯೂ ಇಳಿಕೆಯಾಗಿದೆ.

    ಕೋವಿಡ್​ಪೂರ್ವದಲ್ಲಿ ನಿಮ್ಹಾನ್ಸ್​ನ ದುಶ್ಚಟಗಳ ನಿವಾರಣಾ ಕೇಂದ್ರಕ್ಕೆ ಪ್ರತಿನಿತ್ಯ 120-150 ಮಂದಿ ಚಿಕಿತ್ಸೆಗೆ ಆಗಮಿಸುತ್ತಿದ್ದರು. ಲಾಕ್​ಡೌನ್ ಸಂದರ್ಭದಲ್ಲಿ ಈ ಸಂಖ್ಯೆ 60-70ಕ್ಕೆ ಇಳಿಕೆಯಾಗಿದೆ. ದೀರ್ಘಕಾಲದ ಲಾಕ್​ಡೌನ್, ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂ, ಬಾರ್ ಹಾಗೂ ಪಬ್​ಗಳಿಗೆ ಅವಕಾಶ ನಿಷೇಧ ಇತ್ಯಾದಿ ಕಠಿಣ ಕ್ರಮಗಳಿಂದಾಗಿ ಮದ್ಯ ದೊರೆಯದೆ ಮಾದಕ ವ್ಯಸನಕ್ಕೆ ಒಳಗಾಗುವವರ ಸಂಖ್ಯೆ ಕಡಿಮೆಯಾಗಿತ್ತು. ಮಾತ್ರವಲ್ಲ, ಮದ್ಯಪಾನ, ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳನ್ನು ತೊರೆಯಲು ಬಯಸುವ ವ್ಯಸನಿಗಳಿಗೆ ಲಾಕ್​ಡೌನ್ ಸುಸಮಯವಾಗಿತ್ತು. ಆದರೆ ಲಾಕ್​ಡೌನ್ ತೆರವಿನೊಂದಿಗೆ ಕೆಲಸದ ಒತ್ತಡ, ಆರ್ಥಿಕ ಸಮಸ್ಯೆ, ಮದ್ಯ ಲಭ್ಯತೆಯಿಂದಾಗಿ ಮತ್ತೆ ವ್ಯಸನಿಗಳ ಸಂಖ್ಯೆ ಹೆಚ್ಚಲೂಬಹುದು ಎನ್ನುತ್ತಾರೆ ವೈದ್ಯರು.

    ತಾವು ರೂಢಿಸಿಕೊಂಡಿರುವ ವ್ಯಸನದಿಂದ ಮಾತ್ರವೇ ಸ್ವಾಭಾವಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಈ ವ್ಯಸನಿಗಳು ಭಾವಿಸಿರುತ್ತಾರೆ. ವ್ಯಕ್ತಿಯೊಬ್ಬ ಪ್ರತಿದಿನ ನಿರಂತರವಾಗಿ ಮಾದಕ ವಸ್ತುಗಳನ್ನು ಬಳಸಲು ಹಂಬಲಿಸುತ್ತಿದ್ದರೆ, ಅದಕ್ಕಾಗಿ ಹಾತೊರೆಯುತ್ತಾರೆ ಮತ್ತು ಅದರ ಹೊರತಾಗಿ ಬದುಕಲು ಸಾಧ್ಯವೇ ಇಲ್ಲ ಎಂಬಷ್ಟು ಆ ಚಟಕ್ಕೆ ಅವಲಂಬಿತರಾಗಿರುತ್ತಾರೆ. ದೀರ್ಘಸಮಯ ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲಿಯೇ ಇರುತ್ತಿದ್ದ ಕಾರಣ, ಲಾಕ್​ಡೌನ್ ಜತೆಗೆ ಆರ್ಥಿಕ ಸಮಸ್ಯೆಯೂ ಕೆಲವರು ದುಶ್ಚಟಗಳಿಂದ ಹಿಂದೆ ಸರಿಯುವಂತೆ ಮಾಡಿದೆ.

    ಮಾದಕ ದ್ರವ್ಯ ವ್ಯಸನದ ಆರಂಭ ಹೇಗೆ?: ಮೊದಮೊದಲು ಮದ್ಯವನ್ನು ಕುತೂಹಲಕ್ಕಾಗಿ ಸೇವಿಸಲು ಆರಂಭಿಸುವಂತೆ, ಜನರು ತಮ್ಮೊಳಗಿನ ಒತ್ತಡವನ್ನು ಶಮನಗೊಳಿಸಲೆಂದೋ, ಸ್ನೇಹಿತರ ಒತ್ತಾಯಕ್ಕೋ… ನಾನಾ ಕಾರಣಗಳೊಂದಿಗೆ ಮಾದಕದ್ರವ್ಯಗಳನ್ನು ಉಪಯೋಗಿಸಲು ಪ್ರಾರಂಭಿಸುತ್ತಾರೆ. ದುರ್ಬಲ ವ್ಯಕ್ತಿತ್ವ ಹಾಗೂ ಮನೋಸಾಮರ್ಥ್ಯ ಕಡಿಮೆ ಇದ್ದವರು ಮಾದಕದ್ರವ್ಯ ವ್ಯಸನಿಗಳಾಗುತ್ತಾರೆ. ವ್ಯಸನಿಗಳು ಸೋಮಾರಿಗಳಾಗಿರುವುದರಿಂದ ಅವರ ವರ್ತನೆಯಲ್ಲಿ ಬದಲಾವಣೆ ಕಷ್ಟ ಎನ್ನುತ್ತಾರೆ ವೈದ್ಯರು.

    ಮಾದಕ ವಸ್ತುಗಳು ಯಾವುವು?: ಧೂಮಪಾನ, ಗಾಂಜಾ ಮುಂತಾದವುಗಳನ್ನು ಸೇದುವುದು, ಇಂಜೆಕ್ಷನ್ ಚುಚ್ಚಿಕೊಳ್ಳುವುದು, ಜಗಿಯುವುದು, ಕುಡಿಯು ವುದು ಮುಂತಾಗಿ ಅನೇಕ ವಿಧದಲ್ಲಿ ಮಾದಕ ದ್ರವ್ಯಗಳನ್ನು ಬಳಸಲಾಗುತ್ತದೆ. ಭಾರತದಲ್ಲಿ ಗಾಂಜಾ, ತಂಬಾಕು, ಮತ್ತು ವೈದ್ಯರ ಸಲಹೆ ಪಡೆಯದೆ ಔಷಧಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು ಮಾದಕ ದ್ರವ್ಯಗಳೇ!

    ವ್ಯಸನದ ದುಷ್ಪರಿಣಾಮಗಳು: ದೀರ್ಘಕಾಲದ ಡ್ರಗ್ಸ್ ಸೇವೆನೆಯಿಂದ ಮಿದುಳಿನ ಕ್ರಿಯೆಗಳಾದ ಕಲಿಕೆ, ನಿರ್ಧಾರ, ವರ್ತನೆ, ನಿಯಂತ್ರಣ ಮುಂತಾದವುಗಳ ನಿರ್ವಹಣೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆ ಮತ್ತು ಬೇರೆ ರೀತಿಯ ಮಾನಸಿಕ ಅಸ್ವಸ್ಥತೆಗಳಿಗೆ ಒಳಗಾಗಬಹುದು. ಕುಟುಂಬ, ಸ್ನೇಹಿತರು ಅಥವಾ ಮನೆ ಹಾಗೂ ಹೊರಗಿನ ಕೆಲಸಗಳ ಜವಾಬ್ದಾರಿ ಕುರಿತು ಸರಿಯಾಗಿ ಗಮನ ನೀಡಲು ಸಾಧ್ಯವಾಗುವುದಿಲ್ಲ. ಆರಂಭದಲ್ಲೇ ಇದರ ಬಗ್ಗೆ ಎಚ್ಚರ ವಹಿಸದಿದ್ದರೆ ವ್ಯಸನದಿಂದ ಮುಕ್ತರಾಗುವುದು ಕಷ್ಟಸಾಧ್ಯವಾಗಲಿದೆ.

    104 ಸಂಪರ್ಕಿಸಿ: ಮಾದಕ ವ್ಯಸನಗಳಿಂದ ಮುಕ್ತರಾಗಲು ಬಯಸುವವರು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ/ಸಮುದಾಯ ಆರೋಗ್ಯ ಕೇಂದ್ರ/ತಾಲ್ಲೂಕು ಆಸ್ಪತ್ರೆ/ ಜಿಲ್ಲಾಸ್ಪತ್ರೆ/ ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರಗಳನ್ನು ಸಂರ್ಪಸಿ ಅಥವಾ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ.

    ಆರೋಗ್ಯ ಸಮಸ್ಯೆ: ಮಾದಕ ವ್ಯಸನದಿಂದ ಲಿವರ್ ಸಮಸ್ಯೆ, ಮಿದುಳಿನ ಜೀವಕೋಶಗಳ ಕುಗ್ಗುವಿಕ, ಖಿನ್ನತೆ, ಕಿರಿಕಿರಿ, ಅಧಿಕ ರಕ್ತದೊತ್ತಡ, ಅಜೀರ್ಣ ತೊಂದರೆಗಳು, ಕ್ಯಾನ್ಸರ್, ಹೃದಯ ಸಮಸ್ಯೆ, ಪಾರ್ಶ್ವವಾಯು ತೊಂದರೆ,ಲೈಂಗಿಕ ದೌರ್ಬಲ್ಯ, ಅಕಾಲಿಕ ಮುಪ್ಪು ಮಹಿಳೆಯರಲ್ಲಿ ಭ್ರೂಣಕ್ಕೆ ತೊಂದರೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

    ಮಾದಕ ವಸ್ತು ವ್ಯಸನ ತೊಲಗಿಸಿ

    ಮಾದಕವಸ್ತುಗಳ ವ್ಯಸನ ತೊರೆಯಲು ಲಾಕ್​ಡೌನ್ ಸಕಾಲದೇಶದ ಆರೋಗ್ಯ ಕ್ಷೇತ್ರದ ಮುಂದಿರುವ ಸವಾಲುಗಳಲ್ಲಿ ಮಾದಕ ವಸ್ತು ವ್ಯಸನದ ಪಾಲು ದೊಡ್ಡದು. ಕೋವಿಡ್ ಬಂದ ಬಳಿಕ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಆರೋಗ್ಯ ಮೂಲಸೌಕರ್ಯ ಹೆಚ್ಚಿಸುವ ಕೆಲಸಕ್ಕೆ ವೇಗ ದೊರೆತಿದೆ. ಆದರೆ ಮಾದಕ ವಸ್ತುಗಳ ಬಳಕೆ ಈ ಮೂಲಸೌಕರ್ಯದ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇತ್ತೀಚೆಗೆ ನಡೆಸಿದ ಅಧ್ಯಯನ ಪ್ರಕಾರ, ದೇಶದಲ್ಲಿ 14-15 ವಯಸ್ಸಿನ ಮಕ್ಕಳು ಹೆಚ್ಚಾಗಿ ಮಾದಕ ವಸ್ತು ಬಳಸುತ್ತಿದ್ದಾರೆ! ಇಂತಹ ಆಘಾತಕಾರಿ ಬೆಳವಣಿಗೆ ಸಮಾಜ, ದೇಶದ ಅಭಿವೃದ್ಧಿಗೆ ತೊಡಕುಂಟು ಮಾಡುತ್ತಿದೆ ಎಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ನಿಯಂತ್ರಿಸಲು ಕೆಲ ವರ್ಷಗಳಿಂದೀಚೆಗೆ ಕಠಿಣ ಕಾನೂನು ಕ್ರಮಗಳು ಜಾರಿಯಾಗಿವೆ. ಆದರೆ ಕಾನೂನುಗಿಂತ ಹೆಚ್ಚಾಗಿ ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸುವ, ಯುವಜನರು ಮಾದಕ ವಸ್ತುಗಳ ಬಳಕೆಯ ಬಗ್ಗೆಯೇ ಆಲೋಚಿಸದಂತಹ ವಾತಾವರಣವನ್ನು ನಿರ್ವಿುಸುವ ಅಗತ್ಯತೆ ಹೆಚ್ಚಿದೆ. ಸರ್ಕಾರ ಮಾತ್ರವಲ್ಲದೆ, ಪಾಲಕರು, ಶಿಕ್ಷಣ ಸಂಸ್ಥೆಗಳು ಕೂಡಿ ಇದರ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗೋಣ ಎಂದು ಸುಧಾಕರ್ ಕರೆ ನೀಡಿದ್ದಾರೆ.

    ಮಾದಕವಸ್ತುಗಳ ವ್ಯಸನ ತೊರೆಯಲು ಲಾಕ್​ಡೌನ್ ಸಕಾಲಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ ಆಚರಣೆ ಮಾಡಲಾಗುತ್ತಿದೆ. ಮಾದಕ ವಸ್ತುಗಳಿಂದ ಯುವ ಜನರನ್ನು ಎಚ್ಚರಿಸಿ ರಕ್ಷಣೆ ಮಾಡಲು ಜಾಗೃತಿ ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದು, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಿದೆ. ಔಷಧಗಳನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೂ ಕಡಿವಾಣ ಹಾಕಬೇಕಾಗಿದೆ. ವೈದ್ಯರ ಚೀಟಿ ಇಲ್ಲದೆ ಔಷಧ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಸಹಕಾರ ನೀಡಿದರೆ ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ.

    | ಜಾವೆದ್ ಆಖ್ತರ್ ಅಪರ ಮುಖ್ಯ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

    ಕೋವಿಡ್ ನಿಯಂತ್ರಿಸಲು ವಿಧಿಸಿದ್ದ ಲಾಕ್​ಡೌನ್ ನಿಂದಾಗಿ ಮದ್ಯ ಸೇರಿ ಮಾದಕ ವಸ್ತುಗಳು ದೊರೆಯದೆ ವ್ಯಸನಿಗಳ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಲಾಕ್​ಡೌನ್ ತೆರವಿನೊಂದಿಗೆ ಜನರಲ್ಲಿ ಒತ್ತಡ ಸೇರಿ ನಾನಾ ಕಾರಣಗಳಿಂದ ಮತ್ತೆ ಹೆಚ್ಚಳ ಆಗಲೂಬಹುದು.

    | ಡಾ. ಪ್ರತಿಮಾ ಮೂರ್ತಿ ನಿರ್ದೇಶಕಿ, ನಿಮ್ಹಾನ್ಸ್

    ಕರೊನಾ ಸೋಂಕಿನ ಆತಂಕ ಎಲ್ಲೆಡೆ ಇದೆ. ಅದರಿಂದ ಆತಂಕ ನಿವಾರಣೆಯತ್ತ ಯುವಜನತೆ ಗಮನ ಹರಿಸಬೇಕು. ಅದನ್ನು ಹೊರತುಪಡಿಸಿ ತಂಬಾಕು ಸೇರಿ ಮಾದಕ ವಸ್ತುಗಳತ್ತ ಆಕರ್ಷಿತರಾಗುವುದು ಒಳ್ಳೆಯದಲ್ಲ. ಹೀಗಾಗಿ ಯುವಕರು ಬೇರೆ ಯಾವುದೇ ಯೋಚನೆ ಮಾಡದೆ, ಸಮಾಜಮುಖಿ ಕೆಲಸಗಳತ್ತ ತೊಡಗಿಕೊಳ್ಳಬೇಕು ಹಾಗೂ ಕರೊನಾ ಸೋಂಕಿನಿಂದ ಜನರನ್ನು ರಕ್ಷಿಸುವತ್ತ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.

    | ಡಾ.ವಿಜೇಂದ್ರಪ್ರಕಾಶ್ ಹಿಮಾಲಯ ಡ್ರಗ್ ಕಂಪನಿ ಪ್ರಧಾನ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts