More

    ಲಾಕ್‌ಡೌನ್ ಸಂಕಷ್ಟಕ್ಕೆ ಕೊನೆಗೂ ಕಾಂಗ್ರೆಸ್ ಸ್ಪಂದನೆ

    ತುಮಕೂರು: ಕರೊನಾ ಹಿನ್ನೆಲೆಯಲ್ಲಿ ದೇಶವ್ಯಾಪಿ ಲಾಕ್‌ಡೌನ್ ಜಾರಿಯಾಗಿ 15 ದಿನಗಳ ಬಳಿಕ ಸಂಕಷ್ಟಕ್ಕೆ ಸಿಲುಕಿರುವವರ ಪಾಲಿಗೆ ಜಿಲ್ಲಾ ಕಾಂಗ್ರೆಸ್ ಸ್ಪಂದಿಸಲು ಮುಂದಾಗಿದೆ!

    ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕಾಂಗ್ರೆಸ್ ಕರೊನಾ ಸಹಾಯವಾಣಿಗೆ ಚಾಲನೆ ನೀಡಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಾತನಾಡಿ, ಲಾಕ್‌ಡೌನ್‌ನಿಂದ ಯಾವುದೇ ಸಮಸ್ಯೆಗಳಿದ್ದರೂ ಜಿಲ್ಲೆಯ ಜನರು ಜಿಲ್ಲಾ ಕಚೇರಿಯಲ್ಲಿ ತೆರೆದಿರುವ ಸಹಾಯವಾಣಿಗೆ ಕರೆ ಮಾಡಿದರೆ ಪಕ್ಷದ ವತಿಯಿಂದ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.

    ಸರ್ಕಾರ ಬಯಸಿದರೆ ಕಾಂಗ್ರೆಸ್ ಎಲ್ಲ ರೀತಿಯ ಸಹಕಾರ, ಸಲಹೆಗಳನ್ನು ಕೊಡಲು ಸಿದ್ಧವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕರೊನಾ ಹರಡದಂತೆ ನಿಯಂತ್ರಿಸುವಲ್ಲಿ ಮುಂಜಾಗ್ರತಾ ಕ್ರಮಕೈಗೊಂಡಿವೆ. ತುಮಕೂರು, ನೆಲಮಂಗಲ ಬಳಿಯ ಬೇಗೂರಿನಲ್ಲಿರುವ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಗಳನ್ನು ಕರೊನಾ ಚಿಕಿತ್ಸೆಗೆ ಬಿಟ್ಟುಕೊಡಲಾಗಿದೆ. ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿನಿತ್ಯ 500ಮಂದಿಗೆ ಊಟೋ ಪಚಾರದ ವ್ಯವಸ್ಥೆ ಮಾಡುತ್ತಿದ್ದು, ಕಚೇರಿಯಲ್ಲೆ ಅಕ್ಕಿ ಹಾಗೂ ತರಕಾರಿ ಸಂಗ್ರಹಿಸಿಟ್ಟುಕೊಳ್ಳಲಾಗಿದೆ ಎಂದರು.

    ಸಿಎಂ ಜತೆ ಚರ್ಚೆ: ಆಟೋ ಚಾಲಕರು, ಕೂಲಿಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಈ ಬಗ್ಗೆ ಸಿಎಂ ಜತೆ ಚರ್ಚಿಸಿ ನೆರವು ಕೊಡಿಸಲು ಪ್ರಯತ್ನಿಸಲಾಗುವುದು. ಮಡಿವಾಳರು, ಹಮಾಲಿಗಳು, ಕ್ಷೌರಿಕ ವೃತ್ತಿಯವರು ದಿನದ ದುಡಿಮೆಗಾಗಿ ಕೆಲಸ ಮಾಡುತ್ತಿದ್ದು ಲಾಕ್‌ಡೌನ್‌ನಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಈ ಬಗ್ಗೆ ಸಹ ಸಿಎಂ ಗಮನಸೆಳೆಯಲಾಗವುದು ಎಂದು ಪರಮೇಶ್ವರ್ ಭರವಸೆಯಿತ್ತರು. ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ , ಜಿ.ಎಸ್.ಸೋಮಶೇಖರ್, ಕೊಂಡವಾಡಿ ಚಂದ್ರಶೇಖರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾರುದ್ರೇಶ್, ರೇವಣ್ಣಸಿದ್ದಯ್ಯ, ತರುಣೇಶ್, ಬಿ.ಎಸ್. ದಿನೇಶ್ ಹಾಜರಿದ್ದರು.

    ತಪ್ಪಿಸಿಕೊಂಡು ತಿರುಗಬೇಡಿ: ದೆಹಲಿಯ ತಬ್ಲಿಘಿ ಜಮಾತ್‌ನಲ್ಲಿ ಭಾಗವಹಿಸಿದ್ದವರು ಊರಿಗೆ ಮರಳಿದ ಬಳಿಕ ತಪ್ಪಿಸಿಕೊಂಡು ತಿರುಗಬೇಡಿ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮನವಿ ಮಾಡಿದರು. ತಬ್ಲಿಘಿಗಳು ಖುದ್ದು ತಾವೇ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಸ್ವಯಂ ಆಸ್ಪತ್ರೆಗೆ ತೆರಳಿ ಪರೀಕ್ಷೆಗೊಳಪಡಬೇಕು. ಸೋಂಕು ಹರಡುವುದನ್ನು ತಪ್ಪಿಸಲು ಐಸೋಲೇಷನ್‌ನಲ್ಲಿರಬೇಕು. ಇಲ್ಲದಿದ್ದರೆ ಅನಾಹುತ ಸಂಭವಿಸಿ ನಿಮ್ಮ ನೆರೆಹೊರೆ, ಮನೆಯ ವರಿಗೂ ತೊಂದರೆಯಾಗಲಿದೆ ಎಂದು ಎಚ್ಚರಿಸಿದರು.

    ಕಾಂಗ್ರೆಸ್ ಹೆಲ್ಪ್ ಲೈನ್: ಜಿಲ್ಲೆಯ ಜನತೆ ಕರೊನಾ ಭೀತಿ, ಸಮಸ್ಯೆ, ಮಾಹಿತಿ ಇತ್ಯಾದಿ ಏನೇ ಬೇಕಿದ್ದರೂ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ತೆರೆದಿರುವ ಸಹಾಯವಾಣಿ ಕೇಂದ್ರದ ಹೆಲ್ಪ್‌ಲೈನ್ ನಂ.7019528070 ಅಥವಾ 8792243411 ಇಲ್ಲಿಗೆ ಕರೆ ಮಾಡಬಹುದು.

    10 ವರ್ಷಗಳಿಂದ ಕಾರ್ಮಿಕ ಇಲಾಖೆಯಲ್ಲಿ ಖರ್ಚಾಗದೇ ಉಳಿದಿರುವ 7 ಸಾವಿರ ಕೋಟಿ ಸೆಸ್ ಹಣವನ್ನು ಕೇಂದ್ರದ ಅನುಮತಿ ಪಡೆದು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬಳಸಬೇಕು. ಕೇಂದ್ರ ಸರ್ಕಾರದಿಂದ ಸಿಎಂ ಅನುಮತಿ ಪಡೆಯಲಿ.
    ಡಾ.ಜಿ.ಪರಮೇಶ್ವರ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts