More

    ಉದ್ಧವ್ ಠಾಕ್ರೆ ಕುರ್ಚಿ ಮೇಲೆ ಕರೊನಾ ಕರಿಛಾಯೆ?- ಸಿಎಂ ಪಟ್ಟ ಉಳಿಸಿಕೊಳ್ಳೋಕೆ ಅವರೇನು ಮಾಡಬಹುದು?

    ಮುಂಬೈ: ನಾಟಕೀಯ ಬೆಳವಣಿಗೆಯಲ್ಲಿ ಸೈದ್ಧಾಂತಿಕ ವೈರುಧ್ಯ ಇರುವಂತಹ ಕಾಂಗ್ರೆಸ್ ಮತ್ತು ಎನ್​ಸಿಪಿ ಜತೆ ಸೇರಿ ಮಹಾರಾಷ್ಟ್ರ ವಿಕಾಸ ಅಘಾಡಿ ಮೈತ್ರಿ ಸರ್ಕಾರ ರಚಿಸಿ ಮುಖ್ಯಮಂತ್ರಿ ಪಟ್ಟಕ್ಕೇರಿದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಕುರ್ಚಿ ಈಗ ಅಪಾಯದಲ್ಲಿದೆ. ಅದರ ಮೇಲೆ ಕರೊನಾ ಕರಿಛಾಯೆ ಆವರಿಸಿದೆ.

    ಕರೊನಾ ಲಾಕ್​ಡೌನ್ ಕಾರಣಕ್ಕೆ ಕುರ್ಚಿ ಉಳಿಸಿಕೊಳ್ಳಲು ಉದ್ಧವ್ ಠಾಕ್ರೆ ಈಗ ಹರಸಾಹಸ ಪಡಬೇಕಾಗಿದೆ. ಕಾರಣ ಇಷ್ಟೆ – ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಠಾಕ್ರೆ ಇದುವರೆಗೂ ವಿಧಾನಸಭೆ ಅಥವಾ ವಿಧಾನಪರಿಷತ್​ನ ಸದಸ್ಯರಾಗಿಲ್ಲ. ಸಂವಿಧಾನದ ಅನುಚ್ಚೇಧ 164(4)ರ ಪ್ರಕಾರ ಈ ರೀತಿ ಅಧಿಕಾರ ಸ್ವೀಕರಿಸಿದವರು, ಅಧಿಕಾರ ಸ್ವೀಕರಿಸಿದ ದಿನದಿಂದ ಆರು ತಿಂಗಳ ಒಳಗಾಗಿ ಒಂದೋ ವಿಧಾನಸಭೆ ಅಥವಾ ವಿಧಾನ ಪರಿಷತ್​ನ ಸದಸ್ಯರಾಗಬೇಕು. ಈ ಪ್ರಕರಣದಲ್ಲಿ ಉದ್ಧವ್ ಠಾಕ್ರೆ 2019ರ ನವೆಂಬರ್ 28ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮೇ 27ರ ಒಳಗಾಗಿ ಠಾಕ್ರೆ ವಿಧಾನಸಭೆ ಅಥವಾ ವಿಧಾನ ಪರಿಷತ್​ನ ಸದಸ್ಯರಾಗಬೇಕು.

    ಮುಂಬರುವ ದಿನಗಳು ಬಹಳ ಮುಖ್ಯವಾಗಿದ್ದು ಮಹಾರಾಷ್ಟ್ರ ರಾಜಕೀಯ ರಂಗ ಮತ್ತೆ ಭಾರಿ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಬಹುದೆಂಬ ನಿರೀಕ್ಷೆಯಲ್ಲಿದೆ ರಾಜಕೀಯ ಚಿಂತಕರ ಚಾವಡಿ. ಕರೊನಾ ಲಾಕ್​ಡೌನ್ ಕಾರಣಕ್ಕೆ ಯಾವುದೇ ಚುನಾವಣೆಗಳು ನಡೆಯುತ್ತಿಲ್ಲ. ಹೀಗಿರುವ ಸನ್ನಿವೇಶದಲ್ಲಿ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ನಡೆಯ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

    ನಾಮನಿರ್ದೇಶಿತ ಸದಸ್ಯತ್ವ?: ಗುರುವಾರ ನಡೆದ ಸಚಿವರ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿತ್ತು. ನಾಮನಿರ್ದೇಶಿತ ಸದಸ್ಯತ್ವ ಎಂದರೆ ರಾಜ್ಯಪಾಲರ ಪ್ರತಿನಿಧಿಯಾಗಿ ವಿಧಾನಪರಿಷತ್​ಗೆ ಠಾಕ್ರೆ ಅವರನ್ನು ನಾಮನಿರ್ದೇಶನ ಮಾಡಿದರೆ ಮುಖ್ಯಮಂತ್ರಿಯಾಗಿ ಮುಂದುವರಿಯಬಹುದು. ಇದಕ್ಕಾಗಿ ಸಚಿವ ಸಂಪುಟ ರಾಜ್ಯಪಾಲರಿಗೆ ಶಿಫಾರಸು ಮಾಡಬೇಕಾಗುತ್ತದೆ. ಈ ಶಿಫಾರಸನ್ನು ಸಚಿವ ಸಂಪುಟ ಸಿದ್ಧಪಡಿಸಿದ್ದು, ಡಿಸಿಎಂ ಅಜಿತ್ ಪವಾರ್ ಸಹಿ ಹಾಕಿದ್ದಾರೆ.
    ಸದನದ ನಿಯಮಾವಳಿ ಪ್ರಕಾರ, ವಿಧಾನ ಪರಿಷತ್​ನ 78 ಸದಸ್ಯ ಸ್ಥಾನಗಳ ಪೈಕಿ 12 ಸ್ಥಾನಗಳನ್ನು ರಾಜ್ಯಪಾಲರು ನಾಮನಿರ್ದೇಶನ ಮಾಡಬಹುದಾಗಿದೆ. ಈ ಸದಸ್ಯರ ಅವಧಿ ಆರು ವರ್ಷಗಳಾಗಿದ್ದು, 12 ಸದಸ್ಯರ ಅವಧಿ ಜೂನ್ 6ಕ್ಕಷ್ಟೇ ಮುಗಿಯಲಿದೆ. ಇನ್ನು ಎರಡು ಸ್ಥಾನಗಳು ಖಾಲಿ ಇವೆ. ಇದರಲ್ಲೊಂದು ಎನ್​ಸಿಪಿ ನಾಯಕ ರಾಮರಾವ್ ವಡ್​ಕುಟೆ ಮತ್ತು ಇನ್ನೊಂದು ಬಿಜೆಪಿ ಉಚ್ಚಾಟಿತ ನಾಯಕ ರಾಹುಲ್ ನರ್ವೇಕರ್ ಅವರಿಂದ ತೆರವಾದ ಸ್ಥಾನಗಳು. ಈ ಸ್ಥಾನಕ್ಕೆ ಠಾಕ್ರೆ ನಾಮ ನಿರ್ದೇಶಿತರಾದರೆ ಅವರ ಅವಧಿ ಜೂನ್ 6ಕ್ಕೆ ಮುಗಿಯಲಿದೆ. ಆಗ ಮತ್ತೆ ಪುನಃ ರಾಜ್ಯಪಾಲ ಕೋಶಿಯಾರಿ ಅವರ ಮೂಲಕ ಹೊಸ ನಾಮನಿರ್ದೇಶನ ಮಾಡಿಸಬೇಕಾಗುತ್ತದೆ. ಒಂದೊಮ್ಮೆ ಆಗ ಕೋಶಿಯಾರಿ ಮರು ನಾಮನಿರ್ದೇಶನ ಮಾಡದೇ ಇದ್ದರೆ ಠಾಕ್ರೆ ಸದನದ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ. ಅಲ್ಲದೆ, ಮತ್ತೆ ಆರು ತಿಂಗಳ ಕಾಲಾವಕಾಶ ಸಿಗಲಿದೆ.

    ಕಳೆದ ಡಿಸೆಂಬರ್ ತಿಂಗಳಲ್ಲೇ ಎನ್​ಸಿಪಿ ತನ್ನ ಪಕ್ಷದ ಶಿವಾಜಿ ರಾವ್ ಗರ್ಜೆ ಮತ್ತು ಅದಿತಿ ನಲವಡೆ ಅವರನ್ನು ಕೌನ್ಸಿಲ್ ಸ್ಥಾನಕ್ಕೆ ನಾಮನಿರ್ದೇಶನ ಮಾಡುವಂತೆ ರಾಜ್ಯಪಾಲರನ್ನು ಕೇಳಿಕೊಂಡಿತ್ತು. ಆಗ ರಾಜ್ಯಪಾಲರು ಅದನ್ನು ತಿರಸ್ಕರಿಸಿ, ಇನ್ನು ಆರು ತಿಂಗಳಷ್ಟೇ ಇರುವುದು ಈಗ ಬೇಡ ಎಂದು ಹೇಳಿದ್ದರು. ಈಗ ಸಿಎಂ ಆ ಸ್ಥಾನಕ್ಕೆ ನಾಮನಿರ್ದೇಶಿತರಾದರೂ ಅವರಿಗೆ ಸಿಗುವುದು ಎರಡು ತಿಂಗಳ ಅವಧಿ. ಈಗಾಗಲೇ ರಾಜ್ಯಪಾಲರು ಆರು ತಿಂಗಳಿಗೆ ಹೊಸ ನಾಮನಿರ್ದೇಶನ ಬೇಡ ಎಂದ ಕಾರಣ ಎರಡು ತಿಂಗಳಿಗೆ ನಾಮನಿರ್ದೇಶನ ಮಾಡುತ್ತಾರೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿದೆ.

    ಕ್ಯಾಬಿನೆಟ್ ಶಿಫಾರಸನ್ನು ರಾಜ್ಯಪಾಲರು ಅಂಗೀಕರಿಸಲೇ ಬೇಕು ಎಂಬ ನಿಯಮವೇನೂ ಇಲ್ಲ. ಸಂವಿಧಾನದ ಅನುಚ್ಚೇಧ 163(2)ರ ಪ್ರಕಾರ ಕ್ಯಾಬಿನೆಟ್ ಶಿಫಾರಸನ್ನು ಅಂಗೀಕರಿಸುವ ಅಥವಾ ಅಂಗೀಕರಿಸದೇ ಇರುವ ವಿವೇಚನಾಧಿಕಾರ ರಾಜ್ಯಪಾಲರಿಗೇ ಸೇರಿದ್ದು. ಹೀಗಾಗಿ ಎಲ್ಲರ ಕಂಗಳೂ ಈಗ ರಾಜ್ಯಪಾಲರ ನಡೆಯ ಮೇಲೆಯೇ ಇದೆ.
    ಪರ್ಯಾಯ ದಾರಿ ಏನಿದೆ?: ನಾಮನಿರ್ದೇನಕ್ಕೆ ಒಳಪಡದ ಒಂಭತ್ತು ಸ್ಥಾನಗಳ ಅವಧಿ ಈಗಾಗಲೇ ಮುಗಿದಿದ್ದು, ಅವುಗಳ ಪೈಕಿ ಒಂದರ ಮೂಲಕ ಸದನ ಪ್ರವೇಶಿಸುವ ಕಡೆಗೆ ಠಾಕ್ರೆ ಗಮನಹರಿಸಬಹುದು. ಈ ಸ್ಥಾನಗಳು 66 ಸ್ಥಾನಗಳ ಪೈಕಿ ಸೇರಿದ್ದಾಗಿದ್ದು, ಅವುಗಳನ್ನು ಶಾಸಕರು ಆಯ್ಕೆ ಮಾಡಿ ಭರ್ತಿ ಮಾಡುವಂಥದ್ದಾಗಿದೆ. ಏಪ್ರಿಲ್ 24ರಂದು ಈ ಸ್ಥಾನಗಳಿಗೆ ಚುನಾವಣೆಯನ್ನು ಆಯೋಗ ನಡೆಸಬೇಕಾಗಿತ್ತು. ಆದಾಗ್ಯೂ ಕರೊನಾ ಕಾರಣಕ್ಕಾಗಿ ಈ ಚುನಾವಣೆ ಮುಂದೂಡಲ್ಪಟ್ಟಿದೆ. ಹೀಗಾಗಿ ಈ ರಾಜಕೀಯ ಎಲ್ಲರ ಗಮನಸೆಳೆದಿದೆ.

    ಇದು 1995ರ ಸೆಪ್ಟೆಂಬರ್​ನಲ್ಲಿ ನಡೆದ ರಾಜಕೀಯ ವಿದ್ಯಮಾನವನ್ನು ನೆನಪಿಗೆ ತಂದಿದೆ. ಪಂಜಾಬಿನ ಅಂದಿನ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆ ನಡೆದ ಬಳಿಕ ಅವರ ಪುತ್ರ ತೇಜ್ ಪ್ರಕಾಶ್ ಸಿಂಗ್ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡರು. ಆಗ ಅವರು ಶಾಸಕರಾಗಿರಲಿಲ್ಲ. ಪಂಜಾಬಿನಲ್ಲಿ ವಿಧಾನಸಭೆ ಮಾತ್ರವೇ ಇದ್ದು, ಆರು ತಿಂಗಳ ಒಳಗೆ ವಿಧಾನಸಭೆ ಸದಸ್ಯರಾಗುವಲ್ಲಿ ಪ್ರಕಾಶ್ ಸಿಂಗ್ ವಿಫಲರಾಗಿದ್ದರು. ಆಗ ಅವರು ರಾಜೀನಾಮೆ ಸಲ್ಲಿಸಿದ್ದು, ಮತ್ತೆ ಆರು ತಿಂಗಳ ಬಳಿಕ 1996ರ ನವೆಂಬರ್​ನಲ್ಲಿ ಸಚಿವರಾದರು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತಾದರೂ, ತೇಜ್ ಪ್ರಕಾಶ್ ಸಿಂಗ್ ನೇಮಕಾತಿ ಸಿಂಧುವಾಗಿ ಪರಿಗಣಿಸಲ್ಪಟ್ಟಿತು.

    ಸದ್ಯ ಕೋವಿಡ್ 19 ಲಾಕ್​ಡೌನ್ ಚಾಲ್ತಿಯಲ್ಲಿದ್ದು, ಮಹಾರಾಷ್ಟ್ರವೂ ಅತ್ಯಂತ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯವಾಗಿರುವ ಕಾರಣ ಈ ರಾಜಕೀಯ ಸನ್ನಿವೇಶ ಎಲ್ಲರ ಗಮನಸೆಳೆದಿದೆ. ರಾಜ್ಯಪಾಲರ ನಡೆ ಏನಿರಬಹುದೆಂಬ ಕುತೂಹಲ ಎಲ್ಲರನ್ನೂ ಕಾಡತೊಡಗಿದೆ. (ಏಜೆನ್ಸೀಸ್)

    ಅಸಹ್ಯ! ಲಾಕ್​ಡೌನ್ ನಿಯಮ ಗಾಳಿಗೆ ತೂರಿ ಬಯಲಿಗೆ ಬಂತು ಜೋಡಿ- ಅವರ ಕಾಮದಾಟ ನೋಡಿ ಸುತ್ತಮುತ್ತಲಿನವರು ಶಾಕ್​!

    2.2 ಶತಕೋಟಿ ಡಾಲರ್ ನೆರವಿನ ಭರವಸೆ ನೀಡಿತು ಏಷ್ಯನ್ ಡೆವಲಪ್​​ಮೆಂಟ್ ಬ್ಯಾಂಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts