More

    ಕರೊನಾ ಸಮರಕ್ಕೆ ಸ್ಥಳೀಯ ಸಂಸ್ಥೆ ಸಹಯೋಗ

    ವೇಣುವನೋದ್ ಕೆ.ಎಸ್.ಮಂಗಳೂರು
    ಜಿಲ್ಲೆಯಲ್ಲಿ ಕರೊನಾ ವಿರುದ್ಧ ಸಮರಕ್ಕೆ ಜಿಲ್ಲೆಯ ಹಲವು ಉದ್ದಿಮೆಗಳು ಕೈ ಜೋಡಿಸಲು ಅವಕಾಶ ನೀಡಲಾಗಿದೆ.
    ಕರೊನಾ ನಿಯಂತ್ರಣ, ಚಿಕಿತ್ಸೆಯಲ್ಲಿ ಅಗತ್ಯವಿರುವ ಮಾಸ್ಕ್, ಸ್ಯಾನಿಟೈಸರ್, ಬೆಡ್, ಮಂಚ ಇತ್ಯಾದಿಗಳಿಗೆ ಕೇಂದ್ರ ಅಥವಾ ರಾಜ್ಯದ ಮೇಲೆ ಹೆಚ್ಚು ಅವಲಂಬನೆ ಆಗುವುದಕ್ಕಿಂತ ಸ್ಥಳೀಯವಾಗಿಯೇ ಖರೀದಿಸುವುದು ಉತ್ತಮ ಎಂಬ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳು ಅಂತಹ ಕ್ರಮಕ್ಕೆ ಮುಂದಾಗಿದ್ದಾರೆ.
    ಬೈಕಂಪಾಡಿಯ ಪ್ರೈಮಸಿ ಹಾಗೂ ಇತರ ಕೆಲವು ಫಾರ್ಮಸ್ಯೂಟಿಕಲ್ ಕಂಪನಿಗಳು ಜಿಲ್ಲಾಡಳಿತದ ಬೇಡಿಕೆಗೆ ಅನುಗುಣವಾಗಿ ಸ್ಯಾನಿಟೈಸರ್‌ಗಳನ್ನು ಉತ್ಪಾದಿಸಿ ನೀಡಲು ಮುಂದಾಗಿವೆ.

    ಜಿಲ್ಲಾಡಳಿತ ಈಗಾಗಲೇ ಯೆಯ್ಯಡಿ ಹಾಗೂ ಬೈಕಂಪಾಡಿಯಲ್ಲಿರುವ ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ನಡೆಸಿದ್ದು, ಅಗತ್ಯವಿದ್ದರೆ 10 ಸಾವಿರವರೆಗೆ ಹಾಸಿಗೆ ಹಾಗೂ ಮಂಚಗಳನ್ನು ಪೂರೈಕೆ ಮಾಡುವ ಸಾಧ್ಯತೆ ಬಗ್ಗೆ ಪ್ರಸ್ತಾಪಿಸಿದೆ. 500ರಷ್ಟು ಹಾಸಿಗೆ ಹಾಗೂ ಮಂಚ ಲಭ್ಯವಿದೆ. ಯಾವಾಗ ಜಿಲ್ಲಾಡಳಿತ ಕೇಳುತ್ತದೆಯೋ, ಆಗ ಪೂರೈಕೆ ಮಾಡಲು ಉದ್ಯಮಿಗಳು ಸಿದ್ಧವಿದ್ದಾರೆ. ಆದರೆ ಅಷ್ಟರಮಟ್ಟಿಗೆ ಅಗತ್ಯ ಬರುವಂತೆ ಸದ್ಯ ಕಾಣುತ್ತಿಲ್ಲ, ಅಗತ್ಯವಿದ್ದರೆ ಪೂರೈಕೆ ಮಾಡಬಹುದು ಎಂದು ಕೆಎಸ್‌ಐಎ ಮಾಜಿ ಅಧ್ಯಕ್ಷ ಗೌರವ್ ಹೆಗ್ಡೆ ತಿಳಿಸಿದ್ದಾರೆ.
    ಬೈಕಂಪಾಡಿಯ ಕೆಲವು ಉದ್ಯಮಿಗಳು ಮಾಸ್ಕ್ ಪೂರೈಕೆ ಮಾಡಲು ಒಪ್ಪಿದ್ದಾರೆ. ಜಿಲ್ಲಾ ಕರೊನಾ ಆಸ್ಪತ್ರೆಗೆ ಅತ್ಯಗತ್ಯವಾಗಿ ಬೇಕಾದ ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿ ಪ್ರಮುಖ ಅವಶ್ಯಕತೆಗಳನ್ನು ಈಗಾಗಲೇ ಒಮ್ಮೆ ಇನ್ಫೋಸಿಸ್ ಪ್ರತಿಷ್ಠಾನ ಪೂರೈಸಿದೆ. ಎನ್95, ಸರ್ಜಿಕಲ್ ಇತ್ಯಾದಿ ಮಾಸ್ಕ್, ಸ್ಯಾನಿಟೈಸರ್ ಪೂರೈಕೆಯಾಗಿದೆ.

    ಸಂಪರ್ಕಿಸು-ಸವಾಲು ಸ್ವೀಕರಿಸು, ರಾಮಕೃಷ್ಣ ಮಿಷನ್ ನೂತನ ಅಭಿಯಾನ
    ಕರೊನಾ ಕುರಿತು ತಮ್ಮ ಆತ್ಮೀಯರಿಗೆ ಕರೆಮಾಡಿ ನಾಲ್ಕು ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಲು ಮಂಗಳೂರಿನ ರಾಮಕೃಷ್ಣ ಮಿಷನ್‌ನಿಂದ ‘ಸಂಪರ್ಕಿಸು, ಸವಾಲು ಸ್ವೀಕರಿಸು’ ಎಂಬ ವಿಶೇಷ ಅಭಿಯಾನ ಆರಂಭಿಸಿದೆ.
    ಮನೆಯಲ್ಲಿಯೇ ಫೋನ್ ಮೂಲಕ ಕರೊನಾ ವ್ಯಾಪಕವಾಗಿ ಹರಡದಂತೆ ತಡೆಯುವುದು ಅಭಿಯಾನದ ಉದ್ದೇಶವಾಗಿದೆ. ಪ್ರತಿದಿನ ತಮಗೆ ಪರಿಚಯವಿರುವ 10 ಜನರನ್ನು ಕರೆ ಮಾಡಿ ಸಂಪರ್ಕಿಸಿ, ಕರೊನಾ ತಡೆಗಟ್ಟಲು ಪ್ರಮುಖವಾಗಿ ನಾಲ್ಕು ಅಂಶಗಳನ್ನು ಮನಮುಟ್ಟುವಂತೆ ತಿಳಿಸಬೇಕು.
    ಕಡ್ಡಾಯವಾಗಿ ತಮ್ಮ ಮನೆಯಲ್ಲಿಯೇ ಇರುವುದು, ಆತ್ಮಿಯನ್ನೂ ಮನೆಗೆ ಸೇರಿಸಬಾರದು ಎಂದು ಮನವರಿಕೆ ಮಾಡುವುದು, ಅಗತ್ಯ ವಸ್ತುಗಳಾದ ದಿನಸಿ, ತರಕಾರಿ, ಹಣ್ಣು, ಔಷಧ ಮೊದಲಾದವುಗಳನ್ನು ಹತ್ತು ದಿನಕ್ಕೊಮ್ಮೆ ತರುವುದು, ಹೊರಹೋಗಿ ತಂದ ಸಾಮಗ್ರಿಗಳನ್ನು ಅಗತ್ಯಾನುಸಾರ ಶುಚಿ ಮಾಡುವುದು ಮತ್ತು ಹೊರಹೋಗಿ ಬಂದ ತಕ್ಷಣ ಮನೆಯಲ್ಲಿ ಯಾವುದೇ ವಸ್ತು ಅಥವಾ ವ್ಯಕ್ತಿಯನ್ನು ಸ್ಪರ್ಶಿಸದೆ ನೇರವಾಗಿ ಸ್ನಾನದ ಕೋಣೆಗೆ ತೆರಳಿ ಸ್ನಾನ ಮಾಡುವಂತೆ ತಿಳಿಸುವುದು. ಇದು ಫೋನ್ ಕರೆ ಮಾಡಿ ತಿಳಿಸಬೇಕಾದ ವಿಚಾರಗಳು. ರಾಮಕೃಷ್ಣ ಮಠದ ಈ ಪಂಥಾಹ್ವಾನ ಸ್ವೀಕರಿಸುವವರು 9353029103 ವಾಟ್ಸಾಪ್ ಸಂಖ್ಯೆಗೆ ತಾವು ಸಂಪರ್ಕಿಸಿದ 10 ಜನರ ಹೆಸರು ಕಳುಹಿಸಿದರೆ ರಾಮಕೃಷ್ಣ ಮಠಕ್ಕೆ ‘ಕರೆ ದೇಣಿಗೆ’ ಕೊಟ್ಟಂತಾಗುತ್ತದೆ. ಜತೆಗೆ ಅಂತಹವರ ಹೆಸರು ಮಠದ ವಾಟ್ಸಾಪ್‌ನಲ್ಲಿ ನಮೂದಾಗುತ್ತದೆ ಎಂದು ಮಠದ ಕಾರ್ಯದರ್ಶಿ ಸ್ವಾಮಿ ಏಕಗಮ್ಯಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಭಟ್ಕಳ ಹಾಗೂ ಬೈಂದೂರಿನಲ್ಲಿರುವ ಸರ್ಜಿಕಲ್ ಕಂಪನಿಗಳಲ್ಲಿ ಪಿಪಿಇ(ಸುರಕ್ಷತಾ ಕವಚ) ಉತ್ಪಾದನೆಯಾಗಿ ಪೂರೈಕೆಯಾಗುತ್ತಿದೆ. ಪಿಪಿಇಯನ್ನು ನೇರವಾಗಿ ನಾವು ಖರೀದಿಸುವಂತಿಲ್ಲ. ಸರ್ಕಾರದ ಗುಣಮಟ್ಟದ ಖಾತ್ರಿ ಪಡೆದೇ ಪಡೆಯಲಾಗುತ್ತದೆ. ಲೇಸರ್ ಸ್ಟಿಚ್ ಆಗಿದ್ದು, ಒಳಗಡೆಗೆ ಯಾವುದೇ ಸೋಂಕು ತಗುಲದ ರೀತಿ ಈ ಕವಚಗಳು ಸುರಕ್ಷತೆ ನೀಡಬೇಕಿದೆ.
    ಡಾ.ಭರತ್ ಶೆಟ್ಟಿ, ಶಾಸಕ, ವೈದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts