More

    ಹಳ್ಳಿಗಳಲ್ಲಿ ಕಳ್ಳಭಟ್ಟಿ ಸರಾಗ

    ಶ್ರವಣ್ ಕುಮಾರ್ ನಾಳ ಪುತ್ತೂರು
    ಕರೊನಾ ಮುಂಜಾಗೃತಾ ಕ್ರಮವಾಗಿ ರಾಜ್ಯಾದ್ಯಂತ ಬಾರ್, ಮದ್ಯದಂಗಡಿ ಮುಚ್ಚಿದ್ದು , ಗ್ರಾಮೀಣ ಭಾಗಗಳಲ್ಲಿ ಕಳ್ಳಭಟ್ಟಿ ತಯಾರಿಕೆಗೆ ದಾರಿ ಮಾಡಿಕೊಟ್ಟಿದೆ.
    ಪ್ರಸ್ತುತ ಸ್ಥಳೀಯವಾಗಿ ಹಣ್ಣುಗಳನ್ನು ಬಳಸಿಕೊಂಡು ಕಳ್ಳಭಟ್ಟಿ ತಯಾರಿ ನಡೆಸಲಾಗುತ್ತಿದೆ. ಕಳ್ಳಭಟ್ಟಿ ತಯಾರಿಕೆಗಾಗಿ ಗ್ರಾಮಾಂತರದ ಹಲವು ಮನೆಗಳಲ್ಲಿ ಈಗಾಗಲೇ ಬೆಲ್ಲ ದಾಸ್ತಾನು ಇರಿಸಲಾಗಿದ್ದು, ಮಾರುಕಟ್ಟೆಯಲ್ಲಿ ಬೆಲ್ಲ ಖರಿದಿ ಜೋರಾಗಿದೆ.
    ಗೇರುಹಣ್ಣು, ಪಪ್ಪಾಯಿ, ಹಲಸು, ದ್ರಾಕ್ಷಿಯನ್ನು ಕೊಳೆಸಿ ನಂತರ ಬೆಲ್ಲ ಮಿಶ್ರಣದೊಂದಿಗೆ ಕಾಯಿಸಿ ಭಟ್ಟಿಯಿಳಿಸುವ ತಂತ್ರಜ್ಞಾನದ ಮೂಲಕ ಕಳ್ಳಭಟ್ಟಿ ತಯಾರಿಸಬಹುದು. ಪ್ರಸ್ತುತ ಗೇರುಹಣ್ಣು ಸೀಝನ್ ಆಗಿರುವುದರಿಂದ ಗೇರಿನಿಂದಲೇ ಸುಲಭವಾಗಿ ಕಳ್ಳಭಟ್ಟಿ ತಯಾರಿಸಲಾಗುತ್ತಿದೆ. ಗ್ರಾಮಾಂತರ ಪ್ರದೇಶದ ಮನೆಗಳಲ್ಲಿ ಕಳ್ಳಭಟ್ಟಿ ತಯಾರಿಸಿ ಸ್ಥಳೀಯವಾಗಿ ಮಾರಾಟ ಮಾಡುವ ಜಾಲ ಹೆಚ್ಚಾಗಿದೆ.

    ಗೇರು ಬೀಜ ಬೆಂಕಿಗೆ: ಕಳ್ಳಭಟ್ಟಿ ತಯಾರಿಕೆ ಸಂದರ್ಭ ಹೊರಸೂಸುವ ಹಬೆ ಸುಮಾರು 500 ಮೀ. ವ್ಯಾಪ್ತಿವರೆಗೆ ವಾಸನೆ ಪಸರಿಸುತ್ತದೆ. ಈ ಕಾರಣಕ್ಕಾಗಿ ತಾವು ಕಳ್ಳಭಟ್ಟಿ ತಯಾರಿಸುತ್ತಿದ್ದೇವೆ ಎಂಬ ಅನುಮಾನ ಸ್ಥಳಿಯರಿಗೆ ಬರದಂತೆ ತಡೆಯಲು ಗೇರುಬೀಜ ಬೆಂಕಿಗೆ ಹಾಕಿ ಹೊಗೆಯೆಬ್ಬಿಸಲಾಗುತ್ತದೆ.

    ಸಲ್ಫೇಟ್ ಬಳಸಿದರೆ ಕಿಕ್ ಜಾಸ್ತಿ: ಸಲ್ಫೇಟ್ ರಹಿತ ಕಳ್ಳಭಟ್ಟಿ ಆರೋಗ್ಯಕ್ಕೆ ಉತ್ತಮ. ಇದರಿಂದ ದೇಹದ ಉಷ್ಣತೆ ಸಮತೋಲನದಲ್ಲಿಡಬಹುದು ಎಂಬುದು ಹಳ್ಳಿಗರ ನಂಬಿಕೆ. ಆದರೆ ಬಹುತೇಕ ಪಾರಂಪರಿಕ ಕುಡುಕರಿಗೆ ಕಿಕ್ ಜಾಸ್ತಿ ಬೇಕಾಗಿರುವುದರಿಂದ ಸಲ್ಫೇಟ್ ಎಂಬ ರಾಸಾಯನಿಕ ಮಿಶ್ರಣಗೊಳಿಸಲಾಗುತ್ತದೆ. ಇದರಿಂದ ಲಿವರ್, ಕರುಳಿಗೆ ಹೆಚ್ಚಿನ ಹಾನಿ, ತಕ್ಷಣದ ಸಾವು ಸಂಭವಿಸಬಹುದು.

    ಮಾದರಿ ಚಿತ್ರ ವೈರಲ್: ಬಾರ್, ಮದ್ಯದಂಗಡಿ ಮುಚ್ಚಿರುವುದರಿಂದ ಮದ್ಯಪ್ರೀಯರ ದಾಹ ಹೆಚ್ಚಾಗಿದೆ. ಸುಲಭವಾಗಿ ಮದ್ಯ ತಯಾರಿಸುವ ಕಳ್ಳಭಟ್ಟಿ ತಯಾರಿಕಾ ಮಾದರಿ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಬಹುತೇಕ ಜನ ತಮ್ಮ ಮನೆಯಲ್ಲೇ ಕಳ್ಳಭಟ್ಟಿ ತಯಾರಿಸುವ ಪ್ರಾತ್ಯಕ್ಷಿಕೆ ನಡೆಸುತ್ತಿದ್ದ ಮಾಹಿತಿ ವಿಜಯವಾಣಿಗೆ ಲಭ್ಯವಾಗಿದೆ.

    ಅಬಕಾರಿ ಇಲಾಖೆಯಿಂದ 12 ತಂಡ ರಚನೆ: ಅಬಕಾರಿ ಇಲಾಖೆಯ ಕಣ್ಗಾವಳಿನ ಹೊರತಾಗಿಯೂ ಗ್ರಾಮಾಂತರ ಭಾಗದ ಕಳ್ಳಭಟ್ಟಿ ತಯಾರಿಕೆ, ಅಕ್ರಮ ಮದ್ಯ ಮಾರಾಟ ಪತ್ತೆಗಾಗಿ ಜಿಲ್ಲಾ ಅಬಕಾರಿ ಇಲಾಖೆಯಿಂದ 12 ತಂಡ ರಚಿಸಲಾಗಿದೆ. ಕಳೆದ ಬಾರಿ ಬೆಳ್ತಂಗಡಿ ಹಾಗೂ ಪುತ್ತೂರಿನಲ್ಲಿ ಅಕ್ರಮ ಮದ್ಯ ತಯಾರಿಕೆ ಹಾಗೂ ಮಾರಾಟ ಪ್ರಕರಣ ಪತ್ತೆಯಾಗಿದ್ದರಿಂದ ಈ ಭಾಗದ ಗ್ರಾಮಗ್ರಾಮಗಳಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.

    ಕರೊನಾ ಹಿನ್ನೆಲೆಯಲ್ಲಿ ಆಡಳಿತ ವರ್ಗ, ಪೊಲೀಸರು ತುರ್ತು ನಿಯಂತ್ರಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇಡೀ ಆಡಳಿತ ವ್ಯವಸ್ಥೆಗೆ ಗ್ರಾಮಾಂತರ, ಹಳ್ಳಿಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಗಮನಹರಿಸುವಂತೆ ಸೂಚಿಸಲಾಗಿದೆ. ಅಕ್ರಮ ಚಟುವಟಿಕೆ ಪ್ರಕರಣಗಳು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
    ಶೈಲಜಾ ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts