More

    ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಬರ

    ಬೆಳಗಾವಿ: ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರವು ಪ್ರತಿವರ್ಷ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ, ಸಕಾಲಕ್ಕೆ ಯೋಜನೆಗಳನ್ನು ಪೂರ್ಣಗೊಳಿಸಲು ಇಲಾಖೆಗಳಿಗೆ ಸಿಬ್ಬಂದಿ
    ಕೊರತೆ ಕಾಡುತ್ತಿದೆ.

    ಜಿಲ್ಲೆಯಲ್ಲಿ ನಗರಸಭೆ-2, ಪುರಸಭೆ-15 ಹಾಗೂ ಪಟ್ಟಣ ಪಂಚಾಯತಿ-15 ಸೇರಿ ಒಟ್ಟು 33 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗ್ರುಪ್‌ಎ, ಬಿ, ಸಿ, ಡಿ ತಾಂತ್ರಿಕ ಸಿಬ್ಬಂದಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ, ಕಿರಿಯ, ಹಿರಿಯ ಆರೋಗ್ಯ ನಿರೀಕ್ಷಕ ಹಾಗೂ ಲೆಕ್ಕಾಧಿಕಾರಿಗಳು ಸೇರಿ ಒಟ್ಟು 4,309 ಹುದ್ದೆಗಳು ಮಂಜೂರಾಗಿವೆ. ಆದರೆ, ದಶಕಗಳು ಕಳೆದರೂ 2,286 ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. ಪರಿಣಾಮ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿಲ್ಲ. ಜತೆಗೆ ಆದಾಯ ಸೋರಿಕೆ ತಡೆಯಲು ಸಾಧ್ಯವಾಗದೆ ಸ್ಥಳೀಯ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಸರ್ಕಾರದ ಪ್ರತಿ ಕಾರ್ಯಗಳಿಗೂ ಗುತ್ತಿಗೆ ನೌಕರರನ್ನು ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

    ಸರ್ಕಾರದ ನಿರ್ಲಕ್ಷೃಕ್ಕೆ ಸಾಕ್ಷಿ: ಸ್ಥಳೀಯ ಸಂಸ್ಥೆಗಳು ನೀರಿನ ಸಂಗ್ರಹ, ವಾಣಿಜ್ಯ ತೆರಿಗೆ ಸೇರಿ ಮತ್ತಿತರ ಆದಾಯದ ಮೂಲಗಳಿಂದ ವಾರ್ಷಿಕ ಕೋಟ್ಯಂತರ ರೂ. ಆದಾಯ ಸಂಗ್ರಹ ಗುರಿ ಹಾಕಿಕೊಂಡಿರುತ್ತವೆ. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ಈ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಕೆಲ ಇಲಾಖೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿರುವುದು ನೇಮಕಾತಿ ವಿಚಾರದಲ್ಲಿ ಸರ್ಕಾರ ತೋರುತ್ತಿರುವ ನಿರ್ಲಕ್ಷೃಕ್ಕೆ ಸಾಕ್ಷಿಯಾಗಿದೆ.
    ಜಿಲ್ಲೆಯಲ್ಲಿ 15 ಪಪಂ, 15 ಪುರಸಭೆಗಳು ಅನುದಾನಕ್ಕಿಂತ ಸಿಬ್ಬಂದಿ ಕೊರತೆಯಿಂದ ತತ್ತರಿಸಿವೆ. ಪರಿಣಾಮ ಗ್ರಾಮೀಣ ಮಟ್ಟದಲ್ಲಿ ಸರ್ಕಾರದ ಯೋಜನೆಗಳು ಸಕಾಲಕ್ಕೆ ಪೂರ್ಣಪ್ರಮಾಣದಲ್ಲಿ ಹಾಗೂ ಸಕಾರಾತ್ಮಕವಾಗಿ ಅನುಷ್ಠಾನವಾಗುತ್ತಿಲ್ಲ. ಇದಕ್ಕೆ ಸಿಬ್ಬಂದಿ ಕೊರತೆ ಮೂಲ ಕಾರಣವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

    ನೆರವಿಗಿಂತ ಅಪಾಯವೇ ಹೆಚ್ಚು: ಸ್ಥಳೀಯ ಸಂಸ್ಥೆಗಳಲ್ಲಿ ಸರ್ಕಾರಿ ನೌಕರರಿಗಿಂತ ಗುತ್ತಿಗೆ ಆಧಾರದ ಮೇಲೆ ನೌಕರರು ಅಧಿಕ ಪ್ರಮಾಣದಲ್ಲಿರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಸೋರಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಗುತ್ತಿಗೆ ಸಿಬ್ಬಂದಿ ನಂಬಿ ಕೆಲಸಗಳನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಆಗುತ್ತಿಲ್ಲ. ಸರ್ಕಾರದ ದಾಖಲೆಗಳನ್ನು ಗುತ್ತಿಗೆ ಸಿಬ್ಬಂದಿಗೆ ನೀಡುವುದು ಅಪಾಯಕಾರಿ ಎಂಬುದು ಅಧಿಕಾರಿಗಳ ವಾದ.

    ಅನುಷ್ಠಾನಗೊಳ್ಳದ ಯೋಜನೆಗಳು

    ಕೇಂದ್ರ ಮತ್ತು ರಾಜ್ಯ ಸರ್ಕಾರವು ರಾಜೀವ್ ಆವಾಸ್ ಯೋಜನೆ, ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಮೂಲಸೌಲಭ್ಯ ಅಭಿವೃದ್ಧಿ ಯೋಜನೆ, ಒಳಚರಂಡಿ, ಕುಡಿಯುವ ನೀರು ಸರಬರಾಜು, ಮುಖ್ಯಮಂತ್ರಿ ನಗರೋಥಾನ್, ಅಮೃತ್ ನಗರ ಯೋಜನೆಗಳಿಗೆ ಸುಮಾರು 250 ಕೋಟಿ ರೂ. ಹಾಗೂ ಎಸ್‌ಎಫ್‌ಸಿ ಮುಕ್ತ ನಿಧಿ ಮೂಲಕ ಸರ್ಕಾರಗಳು ವಾರ್ಷಿಕ ಕೋಟ್ಯಂತರ ರೂ. ಅನುದಾನ ನೀಡುತ್ತಿದೆ. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ವರ್ಷಗಳಿಂದ ಯೋಜನೆಗಳು ಪೂರ್ಣವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

    ಸ್ಥಳೀಯ ಸಂಸ್ಥೆಗಳ ನೇಮಕಾತಿ ಸಂಬಂಧ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿಇರುವ ಇಂಜಿನಿಯರ್‌ಗಳ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿದೆ.
    | ಡಾ.ಎಸ್.ಬಿ.ಬೊಮ್ಮನಹಳ್ಳಿ ಡಿಸಿ

    ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಹಂತದಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿಗೆ ಈ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆ ಕುರಿತು ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು. ಅಭಿವೃದ್ಧಿ ಕೆಲಸಗಳಿಗೆ ಸಮಸ್ಯೆ ಉಂಟಾಗದಂತೆ ಕಾರ್ಯನಿರ್ವಹಿಸಲಾಗುತ್ತಿದೆ.
    | ಡಾ.ವಿಜಯಕುಮಾರ ಹೊನಕೇರಿ
    ಜಿಲ್ಲಾ ನಗರಾಭಿವೃದ್ಧಿ ಕೋಶ ನಿರ್ದೇಶಕರು

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts