ಪಡುಬಿದ್ರಿ: ಕರೊನಾ ಕಾರಣದಿಂದ ಸಂಕಷ್ಟಕ್ಕೊಳಗಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ನಂತೆ ಕಾಪು ಪುರಸಭೆ ವ್ಯಾಪ್ತಿಯಲ್ಲೂ ನೂರಾರು ಮಂದಿ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಬ್ಯಾಂಕ್‌ಗಳಿಗೆ ಹೋದಾಗ ಅವರಿಗೆ ಅಲ್ಲಿ ಸರಿಯಾದ ಸ್ಪಂದನೆ ಸಿಗದ ಕಾರಣ, ಪುರಸಭೆಯಲ್ಲೇ ಸಾಲ ಮೇಳ ಕಾರ್ಯಕ್ರಮ ಆಯೋಜಿಸಿ ಅವರ ನೋವಿಗೆ ಸ್ಪಂದಿಸಲಾಗಿದೆ ಎಂದು ಕಾಪು ಪುರಸಭೆ ಅಧ್ಯಕ್ಷ ಅನಿಲ್‌ಕುಮಾರ್ ಹೇಳಿದರು.
ಪ್ರಧಾನ ಮಂತ್ರಿ ಆತ್ಮ ನಿರ್ಭರ್ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿರುವ ಕಾಪು ಪುರಸಭೆ ವ್ಯಾಪ್ತಿಯ ಬೀದಿ ವ್ಯಾಪಾರಿ ಹಾಗೂ ಸಣ್ಣ ಉದ್ದಿಮೆದಾರರಿಗಾಗಿ ಜಿಲ್ಲಾಡಳಿತ ಸಹಯೋಗದೊಂದಿಗೆ ಲೀಡ್ ಬ್ಯಾಂಕ್‌ನ ನೇತೃತ್ವದಲ್ಲಿ ಪುರಸಭೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಿರು ಸಾಲ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಪು ಪುರಸಭೆ ವ್ಯಾಪ್ತಿಗೆ 219 ಗುರಿಯನ್ನು ನಿಗದಿ ಪಡಿಸಲಾಗಿದ್ದು, ಸಾಲ ಸೌಲಭ್ಯಕ್ಕಾಗಿ ವಿವಿಧ ಬ್ಯಾಂಕ್‌ಗಳಲ್ಲಿ 283 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 192 ಅರ್ಜಿಗಳಿಗೆ ಸ್ಥಳದಲ್ಲೇ ಸಾಲ ಮಂಜೂರಾತಿ ನೀಡಲಾಗಿದ್ದು ಶೇ.90 ರಷ್ಟು ಗುರಿ ಸಾಧಿಸಲಾಯಿತು.
ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂಭವಿ ಎಸ್.ಕುಲಾಲ್, ಲೀಡ್ ಬ್ಯಾಂಕ್ ಮ್ಯಾನೇಜರ್ ರುದ್ರೇಶ್, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವಡ, ಸಮುದಾಯ ಸಂಘಟಕ ಬಾಲೇಶ್, ಉಡುಪಿ ಕೌಶಲಾಭಿವೃದ್ಧಿ ಇಲಾಖೆಯ ಗೀತಾ ಉಪಸ್ಥಿತರಿದ್ದರು.