ಪ್ಲಾಸ್ಟಿಕ್ ಮಿಶ್ರಿತ ಡಾಂಬರ್ ಯೋಜನೆ ಯಶ

blank

ಹೇಮನಾಥ ಪಡುಬಿದ್ರಿ
ಕಾಪು ಪುರಸಭೆಯಲ್ಲಿ ಖಾಸಗಿ ಉದ್ಯಮಿಯೊಬ್ಬರ ನೇತೃತ್ವದಲ್ಲಿ ತಿಂಗಳ ಹಿಂದೆ ಅನುಷ್ಠಾನಿಸಿರುವ ನಿರುಪಯುಕ್ತ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಿ ಡಾಂಬರಿನೊಂದಿಗೆ ರಸ್ತೆ ನಿರ್ಮಾಣದಲ್ಲಿ ಬಳಸುವ ಯೋಜನೆ ಯಶಸ್ಸಿನತ್ತ ಸಾಗುತ್ತಿದೆ.

ನಾಲ್ಕು ವರ್ಷ ಹಿಂದೆ ಪುರಸಭೆಯಾಗಿ ರಚನೆಗೊಂಡ ಕಾಪು ಪಟ್ಟಣಕ್ಕೆ ಸೂಕ್ತ ಸ್ಥಳಾವಕಾಶ ಇಲ್ಲದೆ ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗಿತ್ತು. ಅದಕ್ಕಾಗಿ ಸಂಗ್ರಹವಾಗುವ ಫ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಿ ಡಾಂಬರಿನೊಂದಿಗೆ ಸೇರಿಸಿ ರಸ್ತೆ ನಿರ್ಮಾಣಕ್ಕೆ ಬಳಸುವ ಯೋಜನೆಗೆ ಬೆಂಗಳೂರಿನ ಉದ್ಯಮಿ ರಾಮನಾಥ್ ಲಕ್ಷ್ಮಣ್ ಕಾಪು ಪುರಸಭೆಯೊಂದಿಗೆ ಕೈಜೋಡಿಸಿದ್ದರು. ಅವರು ಈಗಾಗಲೇ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸುಮಾರು 400 ಕಿ.ಮೀ. ಗೂ ಅಧಿಕ ಪ್ಲಾಸ್ಟಿಕ್ ತ್ಯಾಜ್ಯ ಮಿಶ್ರಿತ ಡಾಂಬರ್ ರಸ್ತೆಗಳ ನಿರ್ಮಾಣ ಕೈಗೊಂಡಿದ್ದಾರೆ. ಅದಕ್ಕಾಗಿ ಕಾಪು ಪುರಸಭೆಯ ತ್ಯಾಜ್ಯ ಘಟಕದಲ್ಲಿ ಶ್ರೆಡ್ಡರ್ ಯಂತ್ರ ಅಳವಡಿಸಿದ್ದು, ನಿರುಪಯುಕ್ತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಂಸ್ಕರಿಸಲು ತಿಂಗಳ ಹಿಂದೆ ಚಾಲನೆ ನೀಡಿದ್ದರು. ಪ್ರಸ್ತುತ ದಿನವೊಂದಕ್ಕೆ 500 ಕೆ.ಜಿ. ಪ್ಲಾಸ್ಟಿಕ್ ಸಂಸ್ಕರಿಸಲಾಗುತ್ತಿದ್ದು, ರಾಜ್ಯದಲ್ಲಿ ರಸ್ತೆ ನಿರ್ಮಾಣ ಬೇಡಿಕೆ ಹೆಚ್ಚಿರುವುದರಿಂದ ದಿನವೊಂದಕ್ಕೆ ಒಂದು ಟನ್ ಸಂಸ್ಕರಣೆ ಮಾಡುವತ್ತ ಗುರಿಯಿರಿಸಿದ್ದಾರೆ. ಪರಿಣಾಮ ಪುರಸಭೆ ಪ್ಲಾಸ್ಟಿಕ್ ತ್ಯಾಜ್ಯ ಶೇಖರಣೆ ಪ್ರಮಾಣ ಗಣನೀಯವಾಗಿ ಇಳಿಕೆ ಕಾಣುತ್ತಿದೆ.

ಪುರಸಭೆ ವ್ಯಾಪ್ತಿಯ ಎಲ್ಲ ಮನೆಗಳು ಹಾಗೂ ವಾಣಿಜ್ಯ ಘಟಕಗಳಿಂದ ಪ್ರತಿನಿತ್ಯ ಘನ ತ್ಯಾಜ್ಯವನ್ನು ಒಣ ಹಾಗೂ ಹಸಿಕಸವನ್ನಾಗಿ ಬೇರ್ಪಡಿಸಿ ಸಂಗ್ರಹಿಸಲಾಗುತ್ತಿದೆ. ಅದನ್ನು ಎಸ್‌ಎಲ್‌ಆರ್‌ಎಂ ಘಟಕದಲ್ಲಿ ವಿಂಗಡಿಸಿ ಮರುಬಳಕೆ ಮಾಡಬಹುದಾದ ತ್ಯಾಜ್ಯವನ್ನು ಮಾರಾಟ ಮಾಡಲಾಗುತ್ತಿದ್ದು, ಉಳಿದ ಮರುಬಳಕೆಗೆ ಯೋಗ್ಯವಲ್ಲದ ನಿರುಪಯುಕ್ತವಾಗಿ ನೆಲಭರ್ತಿಗೊಳಿಸಬಹುದಾದ ಮತ್ತು ಉರಿಸಿ ವಿಲೇವಾರಿ ಮಾಡಬಹುದಾದ ತೆಳು ಪ್ಲಾಸ್ಟಿಕ್ ಚೀಲಗಳು, ಮಲ್ಟಿ ಲೇಯರ್ ಪ್ಲಾಸ್ಟಿಕ್ ಉತ್ಪನ್ನಗಳು ಇತ್ಯಾದಿಗಳನ್ನು ಘಟಕದಲ್ಲಿ ಸಂಗ್ರಹಿಸಲಾಗುತ್ತಿತ್ತು. ಅರ ವಿಲೇವಾರಿ ಪುರಸಭೆಗೆ ಆರ್ಥಿಕವಾಗಿ ಹೊರೆಯಾಗಿತ್ತು. ಈಗ ಆರಂಭಿಸಿರುವ ಯೋಜನೆ ಪ್ರಗತಿಯಿಂದ ಮುಂದಿನ ದಿನಗಳಲ್ಲಿ ಪುರಸಭೆ ತ್ಯಾಜ್ಯಕ್ಕೆ ಸಂಪೂರ್ಣ ಮುಕ್ತಿ ದೊರೆಯುವುದರಲ್ಲಿ ಸಂಶಯವಿಲ್ಲ.

ದಿನಂಪ್ರತಿ 2 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಒಂದು ಟನ್ ಹಸಿಕಸದೊಂದಿಗೆ ಸೇರಿ ಶೇಖರಣೆಯಾಗುತ್ತಿದೆ. ಘಟಕ ಅನುಷ್ಠಾನದ ಬಳಿಕ 30 ಟನ್ ಕಸ ಶೇಖರಣೆಗೆ ಕಡಿವಾಣವಾಗಿದೆ. ಘಟಕ ಅನುಷ್ಠಾನದಿಂದ ಪುರಸಭೆಗೆ ಯಾವುದೇ ಆದಾಯವಿಲ್ಲದಿದ್ದರೂ, ಕಸ ವಿಲೇವಾರಿ ಆಗುವುದರೊಂದಿಗೆ ಸ್ಥಳಾವಕಾಶ ಉಳಿಯುತ್ತಿದೆ. ಎಲ್ಲೂರಿನ ಘಟಕಕ್ಕೆ ಕಸ ಸಾಗಾಟವನ್ನು ಸುಲಭ ಮಾಡಬೇಕಿದೆ. ಅಲ್ಲಿನ ಜನರ ಗೊಂದಲ ದೂರ ಮಾಡುವ ಪ್ರಯತ್ನವನ್ನೂ ಮಾಡಲಾಗುತ್ತಿದೆ.
ವೆಂಕಟೇಶ ನಾವಡ, ಕಾಪು ಪುರಸಭೆ ಮುಖ್ಯಾಧಿಕಾರಿ.

ಶ್ರೆಡ್ಡರ್ ಯಂತ್ರ ಅಳವಡಿಕೆಗೆ ರಾಜ್ಯದ ಹಲವಾರು ನಗರಸಭೆ, ಪುರಸಭೆಗಳೊಂದಿಗೆ ಮಾತುಕತೆ ನಡೆಸಿದರೂ ಯಾರೂ ಉತ್ಸುಕರಾಗಿರಲಿಲ್ಲ. ಆದರೆ ಕಾಪು ಪುರಸಭೆ ಮುಖ್ಯಾಧಿಕಾರಿ ಸಹಕಾರದಿಂದ ಘಟಕ ಯಶಸ್ವಿಯಾಗಿ ಅನುಷ್ಠಾನವಾಗುವಂತಾಗಿದೆ. ಶ್ರೆಡ್ಡಿಂಗ್ ಮಾಡಿದ ಪ್ಲಾಸ್ಟಿಕನ್ನು ಕಾಪುವಿನಿಂದಲೇ ರಾಜ್ಯಾದ್ಯಂತ ಸಾಗಾಟ ಮಾಡಲಾಗುತ್ತಿದೆ. ಸಂಸ್ಕರಣೆಗೆ ಕೆಜಿಗೆ ಸುಮಾರು 23 ರೂಪಾಯಿ ವೆಚ್ಚವಾಗುತ್ತಿದ್ದು, ಸಾಗಾಟ ವೆಚ್ಚವೇ ಅಧಿಕವಾಗುತ್ತಿದೆ. ನಾವೇ ರಸ್ತೆ ಕಾಮಗಾರಿ ಗುತ್ತಿಗೆ ನಿರ್ವಹಿಸುತ್ತಿದ್ದು, ರಾಜ್ಯಾದ್ಯಂತ ರಸ್ತೆ ನಿರ್ಮಾಣ ಬೇಡಿಕೆಯೂ ಹೆಚ್ಚಳವಾಗುತ್ತಿದೆ. ಪ್ರಸ್ತುತ 2 ಕಾರ್ಮಿಕರು ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ತ್ಯಾಜ್ಯ ಪ್ರತ್ಯೇಕಿಸುವ ಕೆಲಸ ಸೇರಿ ಸುಮಾರು 6 ಕಾರ್ಮಿಕರ ಅಗತ್ಯ ಇದೆ.
– ರಾಮನಾಥ್ ಲಕ್ಷ್ಮಣ್, ಬೆಂಗಳೂರಿನ ಉದ್ಯಮಿ

ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿಯೇ ಹಲವು ವರ್ಷಗಳಿಂದ ಸಂಗ್ರಹವಾಗಿರಿಸಿರುವ ತ್ಯಾಜ್ಯದಿಂದ ಜನಸಾಮಾನ್ಯರು ತೊಂದರೆ ಅನುಭವಿಸಿದ್ದರು. ಮನೆಗಳಲ್ಲಿ ಘನ ಮತ್ತು ಹಸಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ನೀಡಿದಲ್ಲಿ ಸಂಸ್ಕರಣೆಗೂ ಅನುಕೂಲವಾಗಲಿದೆ. ಜನರು ತ್ಯಾಜ್ಯ ವಿಲೇವಾರಿಗಾಗಿ ಪುರಸಭೆಯೊಂದಿಗೆ ಕೈಜೋಡಿಸಬೇಕು.
– ಅನಿಲ್‌ಕುಮಾರ್, ಕಾಪು ಪುರಸಭೆ ಅಧ್ಯಕ್ಷ

Share This Article

ಉಪ್ಪಿನಕಾಯಿ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಈ ವರ್ಷ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಿದ ಪಾಕವಿಧಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದರಲ್ಲಿ ಉಪ್ಪಿನಕಾಯಿ ಭಾರತದಲ್ಲಿ…

ಟಾಯ್ಲೆಟ್​​ನ ಕೊಳಕು ವಾಸನೆ, ಹಳದಿ ಕಲೆ ತೆಗೆದುಹಾಕುವುದೇಗೆ?; ಇಲ್ಲಿದೆ ಸಿಂಪಲ್​ ವಿಧಾನ | Tips

ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಅಲಂಕರಿಸಲು ಜನರು ಶ್ರಮಿಸುತ್ತಾರೆ. ಹೊರಗಿನಿಂದ ಅವರ ಮನೆಯು ಸಾಕಷ್ಟು ಐಷಾರಾಮಿಯಾಗಿ ಕಾಣುತ್ತದೆ.…

ಚಳಿಗಾಲದಲ್ಲಿ ಬಿಸಿ ಚಹಾ ಮತ್ತು ಕಾಫಿ ಸೇವಿಸುತ್ತಿದ್ದೀರಾ; ಅಪಾಯ ತಪ್ಪಿದಲ್ಲ.. ಎಚ್ಚರದಿಂದಿರಿ | Health Tips

ಚಳಿಗಾಲ ಬಂದ ಕೂಡಲೆ ಟೀ, ಕಾಫಿ ಸೇವನೆ ಹೆಚ್ಚುತ್ತದೆ. ಈ ಬಿಸಿ ಪಾನೀಯವು ದೇಹಕ್ಕೆ ಶಾಖವನ್ನು…