More

    ಬದುಕು, ಸ್ವಾತ್ರಂತ್ರೃಕ್ಕಾಗಿ ಸಾಹಿತ್ಯ

    ಎನ್.ಆರ್.ಪುರ: ಸಾಹಿತ್ಯ ಬದುಕಿಗಾಗಿ ಇರುವುದೇ ಹೊರತು ಕಲೆಗಾಗಿ ಅಲ್ಲ. ಸ್ವಾತಂತ್ರ್ಯದ ತುಡಿತಕ್ಕಾಗಿ ಎಂದು ಲೇಖಕಿ ದೀಪಾ ಹಿರೇಗುತ್ತಿ ಹೇಳಿದರು.

    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಕೊಟ್ಟಿಗೆಹಾರ, ಅನುದಿನ ಸಾಹಿತ್ಯ ವೇದಿಕೆ, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಆಯೋಜಿಸಿದ್ದ ತೇಜಸ್ವಿ ಸಾಹಿತ್ಯ ಯಾನ ಯುವ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಮಹಾಪಲಾಯನ ಎಂಬ ಕೃತಿ 1956ರಲ್ಲಿ ಮೊದಲು ಇಂಗ್ಲಿಷ್‌ನಲ್ಲಿ ಬಿಡುಗಡೆಯಾಯಿತು. ತೇಜಸ್ವಿ ಅವರು ಇದೇ ಕೃತಿಯನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ 1999ರಲ್ಲಿ ತರ್ಜುಮೆ ಮಾಡಿದರು. ಇಂಗ್ಲಿಷ್‌ನ ಕೃತಿಗಳು ಕನ್ನಡದಲ್ಲಿ ದೊರಕಬೇಕೆಂಬ ಉದ್ದೇಶದಿಂದ ಅನೇಕ ಕೃತಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದರು. ಮಹಾಪಲಾಯನ ಮಕ್ಕಳು ಓದಲೇ ಬೇಕಾದಂತಹ ಕೃತಿ. ಇದರಲ್ಲಿ ಸ್ವಾತಂತ್ರ್ಯದ ತುಡಿತದ ಹೋರಾಟವಿದೆ ಎಂದರು.
    ತೇಜಸ್ವಿ ಮೂಡಿಗೆರೆಯ ಒಂದು ಹಳ್ಳಿಯನ್ನು ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ತೇಜಸ್ವಿ ಬರೆಯದ ಕೃತಿಗಳಿಲ್ಲ. ನಿರಂತರ ಪ್ರಯೋಗ ಮಾಡುತ್ತಿದ್ದರು. ತೇಜಸ್ವಿ ಅವರ ಬರಹಗಳನ್ನು ಓದದಿದ್ದರೆ ಜೀವನವೇ ನಿಷ್ಪ್ರಯೋಜನವಾಗುತ್ತದೆ. ಶಿಲಾಯುಗದಲ್ಲೂ ಮನುಷ್ಯ ಮಾಡಿರದಂಥ ಹೇಯ ಕೃತ್ಯಗಳನ್ನು ಎಸಗಿರುವ ಆಧುನಿಕ ಮಾನವನ ಸ್ವಭಾವದ ಬಗ್ಗೆ ತೇಜಸ್ವಿ ಬರಹದ ಮೂಲಕ ತಿಳಿಸಿದ್ದಾರೆ ಎಂದು ಹೇಳಿದರು.
    ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ನಂದೀಶ್ ಬಂಕೇನಹಳ್ಳಿ ಮಾತನಾಡಿ, ಮಹಾಪಲಾಯನ ಕೃತಿ 23 ಬಾರಿ ಮರು ಮುದ್ರಣಗೊಂಡಿದೆ ಎಂದರು.
    ಕನ್ನಡ ಪ್ರಾಧ್ಯಾಪಕ ಡಾ. ಅಣ್ಣಪ್ಪ ಎನ್.ಮಳೀಮಠ್ ಮಾತನಾಡಿ, ತೇಜಸ್ವಿ ಈ ನೆಲದ ಮಹಾ ಚಿಂತಕ. ನೆಲದ ನಿಗೂಢಗಳನ್ನು, ಅದರೊಳಗಿನ ಜೀವಂತಿಕೆಯನ್ನು ಅನುಭವದ ಮೂಲಕ ಹೊರತಂದವರು. ಅವರೊಬ್ಬ ಸಾಹಿತಿ ಮಾತ್ರವಲ್ಲ, ಜೀವ ವಿಜ್ಞಾನಿ. ನೆಲದ ಚಿಂತಕರಾಗಿದ್ದಾರೆ. ತೇಜಸ್ವಿ ಕುರಿತಾದ ಓದು ವಿದ್ಯಾರ್ಥಿಗಳಿಗೆ ಸಾಧ್ಯವಾಗದೆ ಇದ್ದರೆ ಅದು ಬಹಳ ನಷ್ಟ. ಚಲನಶೀಲ ಬದುಕಿಗೆ ಬೇಕಾದ ದಿವ್ಯೌಷಧ ತೇಜಸ್ವಿ ಅವರ ಸಾಹಿತ್ಯದಲ್ಲಿ ಅಡಗಿದೆ ಎಂದು ವಿಶ್ಲೇಷಿಸಿದರು.
    ಪ್ರಾಧ್ಯಾಪಕ ಡಾ. ಧನಂಜ ಮಾತನಾಡಿ, ಸಾಹಿತ್ಯದ ಓದು ವಿದ್ಯಾರ್ಥಿಗಳ ಮನಸ್ಸನ್ನು ಪ್ರಪುಲ್ಲಗೊಳಿಸುತ್ತದೆ. ಮನಸ್ಸನ್ನು ಆರೋಗ್ಯದಲ್ಲಿಡುವ, ಸಮಾಜದ ಆರೋಗ್ಯ ಕಾಪಾಡಬಲ್ಲ ಶಕ್ತಿ ಸಾಹಿತ್ಯದಲ್ಲಿದೆ ಎಂದರು.
    ಪ್ರೊ. ನಾಗೇಶ್ ಗೌಡ ಮಾತನಾಡಿ, ಪರಿಸರ ಕಾಪಾಡುವ ಹೊಣೆಗಾರಿಕೆ ಯುವಜನರ ಮೇಲಿದೆ. ಯುವ ಜನತೆಯಲ್ಲಿ ಜವಾಬ್ದಾರಿ ಹೊರುವ ಮನಸ್ಸು ಇದ್ದರೆ ತೇಜಸ್ವಿ ಸಾಹಿತ್ಯ ಓದಬೇಕು. ತೇಜಸ್ವಿ ಬರಹಗಳಲ್ಲಿ ಕಾಣುವ ಪಾತ್ರಗಳು, ಸನ್ನಿವೇಶಗಳು ಬೇರೆಯಾಗಿ ಕಾಣದೆ ನಮ್ಮ ಸುತ್ತಮುತ್ತಲಿನ ಸಂಗತಿಗಳಾಗಿವೆ ಎಂದು ತಿಳಿಸಿದರು.
    ಕನ್ನಡ ಉಪನ್ಯಾಸಕ ಜಗದೀಶ್, ಪ್ರಾಧ್ಯಾಪಕರಾದ ಜಿ.ಪಿ.ಚಂದ್ರಶೇಖರ್, ಡಾ. ಲಕ್ಷ್ಮಣನಾಯ್ಕ, ಅರವಿಂದ, ರಾಜೀವ್, ಸತೀಶ್, ರಾಘವೇಂದ್ರ, ಕೃಪಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts