More

    ಗಾಂಧೀಜಿ ತತ್ವ, ಸಿದ್ಧಾಂತ ಸಮಾಧಿ

    ಚಿಕ್ಕಮಗಳೂರು: ಬಹುಶಃ ವಿಶ್ವದ ಎಲ್ಲ ಭಾಷೆಗಳಲ್ಲಿ ಯಾವುದಾದರೂ ಮಹಾ ಪುರುಷನ ಬಗ್ಗೆ ಲಕ್ಷಾಂತರ ಪುಟದ ಬರಹ, ಗ್ರಂಥ, ಪ್ರಕಟಣೆಗಳು ಮೂಡಿ ಬಂದಿದ್ದರೆ ಗಾಂಧೀಜಿ ಅವರ ಬಗ್ಗೆ ಮಾತ್ರ ಎಂದು ಮಾಜಿ ಶಾಸಕ ವೈಎಸ್​ವಿ ದತ್ತ ವಿಶ್ಲೇಷಿಸಿದರು.

    ನಗರ ಹೊರವಲಯದ ದೊಡ್ಡಕುರುಬರಹಳ್ಳಿಯ ವಿರಕ್ತಮಠ ಬಸವ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಆಯೋಜಿಸಿದ್ದ ಡಿ.ಎಸ್.ಕೃಷ್ಣಪ್ಪ ಗೌಡ ಹಾಗೂ ಎ.ಎಂ.ಬಸವೇಗೌಡ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಗಾಂಧೀಜಿ ಕುರಿತು ಮಾತನಾಡಿದರು.

    ಜಗತ್ತಿನಲ್ಲಿ ವ್ಯಾಪಕ, ವಿಸ್ತಾರವಾಗಿ, ಆಳ-ಅಗಲಗಳಲ್ಲಿ ವಿಚಾರ ಸಂಕಿರಣ, ಚರ್ಚೆಗಳು ನಡೆದಿದ್ದರೆ ಅದು ಸಹ ಗಾಂಧೀಜಿ ಬಗ್ಗೆ ಮಾತ್ರ. ಹೀಗಾಗಿ ಇಡೀ ಜಗತ್ತು 20ನೇ ಶತಮಾನವನ್ನು ಗಾಂಧಿ ಯುಗ ಎಂದೇ ಕರೆದಿದೆ ಎಂದು ಹೇಳಿದರು.

    ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವಿಗಳು, ಸಾಹಿತಿಗಳು ತಮ್ಮ ಕಾದಂಬರಿ, ಕವನ, ಕಾವ್ಯ, ನಾಟಕಗಳು ಹಾಗೂ ಬರಹಗಳ ಮೂಲಕ ಗಾಂಧೀಜಿ ಬಗ್ಗೆ ಚಿತ್ರಿಸಿ ಪ್ರೇರಣೆಯಾಗುವಂತೆ ಜನರಿಗೆ ತಲುಪಿಸಿದ್ದಾರೆ. ಕುವೆಂಪು, ಬೇಂದ್ರೆ, ಪುತಿನ, ವೀ.ಸೀ, ಚನ್ನವೀರ ಕಣವಿ, ಜಿಎಸ್​ಎಸ್ ತಮ್ಮ ಬರಹಗಳಲ್ಲಿ ಗಾಂಧೀಜಿಯನ್ನು ಕೊಂಡಾಡಿದ್ದಾರೆ. ಆದರೆ ನಾವು ಅವರ ತತ್ವ, ಸಿದ್ಧಾಂತಗಳನ್ನು ಸಮಾಧಿ ಮಾಡಿದ್ದೇವೆ. ಎಲ್ಲ ರಸ್ತೆಗಳಿಗೂ ಅವರದೇ ಹೆಸರಿಟ್ಟಿದ್ದೇವೆ. ಆದರೆ ಅವರಂತೆ ಬದುಕುತ್ತಿಲ್ಲ ಎಂದು ವಿಷಾದಿಸಿದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಮಾಜಿ ಸಚಿವೆ ಡಿ.ಕೆ.ತಾರಾದೇವಿ, 12ನೇ ಶತಮಾನದಲ್ಲಿ ಬಸವಣ್ಣನ ವಚನ, ವಿಚಾರಧಾರೆಗಳು ಸಾಮಾಜಿಕ ಬದಲಾವಣೆ ತಂದಿವೆ. ಸತ್ಯ, ಅಹಿಂಸೆ ಮತ್ತು ಅಸಹಕಾರ ಚಳವಳಿ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಹಾಗೂ ಭಕ್ತಿ ಭಂಡಾರಿ ಬಸವಣ್ಣನ ತತ್ವ, ಸಿದ್ಧಾಂತ, ವಿಚಾರಧಾರೆಗಳು ಒಂದೇ ಎಂದು ಹೇಳಿದರು.

    ಸಮ ಸಮಾಜ: ಶರಣರ ಆರ್ಥಿಕ ಚಿಂತನೆಗಳು ಕುರಿತು ಸಾನ್ನಿಧ್ಯ ವಹಿಸಿದ್ದ ಬಸವ ಮಂದಿರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ದತ್ತಿ ಉಪನ್ಯಾಸ ನೀಡಿದರು. ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಿ.ಕೆ.ಉದಯಶಂಕರ್, ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್, ಕೋಶಾಧಿಕಾರಿ ಪ್ರೊ. ಕೆ.ಎನ್.ಲಕ್ಷ್ಮೀಕಾಂತ್, ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ, ಸಂಘಟನಾ ಕಾರ್ಯದರ್ಶಿ ಚಂದ್ರಯ್ಯ ಇತರರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts