More

    ಸಂಪುಟ ಸಂಕ್ರಾಂತಿ: ಬೆಳೆಯುತ್ತಲೇ ಇದೆ ಸಚಿವಾಕಾಂಕ್ಷಿಗಳ ಪಟ್ಟಿ

    ಬೆಂಗಳೂರು: ಬಿಜೆಪಿ ವರಿಷ್ಠರು ಅಳೆದೂ ಸುರಿದು ಸಂಪುಟ ವಿಸ್ತರಣೆಗೆ ಅಸ್ತು ಎಂದ ಬೆನ್ನಲ್ಲೇ ರಾಜ್ಯದಲ್ಲೀಗ ಪ್ರಭಾವಿ ಸಚಿವಾಕಾಂಕ್ಷಿಗಳನ್ನು ಓಲೈಸುವ ತೆರೆಮರೆ ಕಸರತ್ತುಗಳು ವೇಗ ಪಡೆದುಕೊಂಡಿದೆ. ಸಂಕ್ರಾಂತಿಗೆ ಮೊದಲೇ ನಡೆಯುತ್ತಿರುವ ಈ ಮೌನ ಕ್ರಾಂತಿ ನಡುವೆ ಪ್ರಮುಖ ಸಚಿವರ ಖಾತೆ ಬದಲಾಗಲಿದೆ ಎಂಬ ಚರ್ಚೆಗಳೂ ಹುಟ್ಟಿಕೊಂಡಿವೆ. ಬುಧವಾರ ಅಮಾವಾಸ್ಯೆ ಕಳೆದ ನಂತರ ಮಧ್ಯಾಹ್ನವೇ ನೂತನ ಸಚಿವರ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿಯಾಗಿದ್ದು, ಆಕಾಂಕ್ಷಿ ಗಳ ಒತ್ತಡ ತೀವ್ರಗೊಂಡಿದೆ. ಇನ್ನೂ ಕೆಲವು ಸಚಿವರು ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟು ಲಾಬಿ ಆರಂಭಿಸಿದ್ದಾರೆ. ಒಂದಿಬ್ಬರು ಸಚಿವರನ್ನು ಕೈಬಿಡಲು ಕೇಂದ್ರ ನಾಯಕರು ಸೂಚಿಸಿದ್ದಾರೆನ್ನುವ ಸುಳಿವು ಕೆಲವರ ಚಡಪಡಿಕೆಗೆ ಕಾರಣವಾಗಿದೆ.

    ಹೆಚ್ಚಿದ ಆಕಾಂಕ್ಷಿಗಳು: ಹಿರಿತನ, ಪಕ್ಷ ನಿಷ್ಠೆ, ಪ್ರದೇಶ, ಜಿಲ್ಲೆ, ಸಮುದಾಯದ ಹೆಸರಿನಲ್ಲಿ ತಮ್ಮದೇ ಆದ ವಾದ ಮಂಡಿಸುವ ಮೂಲಕ ಆಕಾಂಕ್ಷಿಗಳೆಲ್ಲ ತಮ್ಮ ಅರ್ಹತೆ ಮಂಡಿಸುತ್ತಿದ್ದಾರೆ. ಸೋತವರಿಗೆ ಸಚಿವಗಾದಿ ಕೊಡಬೇಡಿ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಇದರಿಂದಾಗಿ ಯಾರಿಗೆ ಸಿಹಿ, ಮತ್ಯಾರಿಗೆ ಕಹಿ ಎಂದು ದೃಢಪಟ್ಟ ಬಳಿಕ ಅಸಮಾಧಾನದ ಸ್ಪಷ್ಟ ರೂಪ ಪಡೆಯುವ ಲಕ್ಷಣಗಳಿವೆ.

    ಪ್ರಾತಿನಿಧ್ಯಕ್ಕಿಲ್ಲ ಅವಕಾಶ: ಪೂರ್ಣ ಬಹುಮತ ಇಲ್ಲದೇ ಇದ್ದರೂ ಸಾಹಸ ಮಾಡಿ ಸರ್ಕಾರ ರಚಿಸಿಕೊಂಡ ಬಿ.ಎಸ್.ಯಡಿಯೂರಪ್ಪನವರಿಗೆ ಸಚಿವ ಸ್ಥಾನವನ್ನು ಪ್ರದೇಶವಾರು ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಮುಂದೆ ನಡೆಯುವ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆ ವೇಳೆಯೂ ಸಹ ಜಿಲ್ಲೆಗೊಬ್ಬರಿಗೆ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಬೆಂಗಳೂರು ಮತ್ತು ಬೆಳಗಾವಿಗೆ ಹೆಚ್ಚಿನ ಸಚಿವ ಸ್ಥಾನ ಲಭ್ಯವಾಗಲಿದೆ. ವಲಸೆ ಬಂದ ಶಾಸಕರಿಗೆ ಸಚಿವ ಸ್ಥಾನ ಕೊಡಲೇಬೇಕಾದ ಪರಿಣಾಮ ಈ ವಾತಾವರಣವಿದೆ. ಜಾತಿವಾರು ಸಚಿವ ಸ್ಥಾನ ನೀಡಿ ಸಾಮಾಜಿಕ ನ್ಯಾಯ ಪರಿಪಾಲನೆಯೂ ಕಷ್ಟವಾಗಲಿದೆ, ಪಕ್ಷದಲ್ಲಿನ ಹಿರಿತನ, ಶಾಸಕ ಸ್ಥಾನದಲ್ಲಿನದ ಹಿರಿತನಕ್ಕೂ ಮಣೆ ಹಾಕಲಾಗುತ್ತಿಲ್ಲ.

    ಹಳೇ ಸ್ನೇಹಿತರಿಂದ ಸಂಕಟ: ಸಿಎಂ ಬದಲಾವಣೆ ಇಲ್ಲ ಎಂದು ಪಕ್ಷದ ವರಿಷ್ಠರು ಪದೇಪದೆ ಸ್ಪಷ್ಟಪಡಿಸಿದರೂ ಮತ್ತೆ ವಿಷಯ ಪ್ರಸ್ತಾಪವಾಗುತ್ತಿರುವುದರ ಹಿಂದೆ ಸಿಎಂ ಬಳಗದಲ್ಲಿ ಈ ಹಿಂದೆ ಇದ್ದ ಕೆಲವರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಸರ್ಕಾರದ ಆಗುಹೋಗುಗಳಲ್ಲಿ ಪ್ರಮುಖಪಾತ್ರ ವಹಿಸಿ, ಬಳಿಕ ಆಂತರಿಕ ವೈಮನಸ್ಯದಿಂದ ಹೊರಹಾಕಲ್ಪಟ್ಟವರು ಈಗ ಸಂಪುಟ ವಿಸ್ತರಣೆ, ನಾಯಕತ್ವ ಬದಲಾವಣೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ ಎಂಬುದು ಆಡಳಿತ ಪಕ್ಷದ ಪ್ರಮುಖರ ಗಮನಕ್ಕೆ ಬಂದಿದೆ. ಈ ಬೆಳವಣಿಗೆಯಿಂದ ಪಕ್ಷ ಹಾಗೂ ಸರ್ಕಾರದ ಇಮೇಜ್​ಗೂ ಧಕ್ಕೆ ಯಾಗುತ್ತಿರುವುದನ್ನು ಗಮನಿಸಿದ್ದು, ಈ ಬೆಳವಣಿಗೆಗೆ ವಿರಾಮ ಹಾಕುವ ಪ್ರಯತ್ನವೂ ನಡೆದಿದೆ ಎನ್ನಲಾಗಿದೆ.

    ಅತೃಪ್ತಿ ತಪ್ಪಿದ್ದಲ್ಲ: ಸಂಪುಟಕ್ಕೆ ಸೇರುವವರ ಪಟ್ಟಿ ಅಂತಿಮವಾದರೂ ಬಳಿಕ ಆಕಾಂಕ್ಷಿಗಳ ಸಿಟ್ಟು-ಸೆಡವು ಭುಗಿಲೆದ್ದು ಮತ್ತೊಂದು ಸುತ್ತಿನ ‘ಸಂ’ಕ್ರಾಂತಿ ಶುರುವಾಗುವ ಸಾಧ್ಯತೆ ನಿಚ್ಚಳವಾಗಿದೆ. ಸಂಪುಟ ವಿಸ್ತರಣೆಗೆ ಪಟ್ಟು ಹಿಡಿದವರ ಪೈಕಿ ಬಹುತೇಕರ ಅಪೇಕ್ಷೆ ಈಡೇರಿಸುವುದು ಬಿಎಸ್​ವೈಗೂ ಅಸಾಧ್ಯ. ಖಾಲಿ ಇರುವ 7 ಸ್ಥಾನಗಳಿಗೆ 2 ಡಜನ್​ಗೂ ಮಿಕ್ಕಿ ಆಕಾಂಕ್ಷಿಗಳಿದ್ದಾರೆ. ತಡವಾಗಿಯಾದರೂ ‘ಸಂಪುಟ ಸಂಕಟ’ಕ್ಕೆ ತೆರೆ ಬಿದ್ದರೂ ಅತೃಪ್ತಿ ಮತ್ತೊಂದು ಸ್ವರೂಪ ಪಡೆಯುವ ಸಾಧ್ಯತೆಯನ್ನು ಬಿಎಸ್​ವೈ ಗ್ರಹಿಸಿದ್ದಾರೆ. ಹಾಗೆಯೇ ಎಲ್ಲರಿಗೂ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಸರಿಪಡಿಸುವ ವಿಶ್ವಾಸ ಹೊಂದಿದ್ದಾರೆ.

    ಕೈ ಹಿಡಿದವರಿಗೆ ಖಾತ್ರಿ

    ಸರ್ಕಾರ ರಚನೆಗೆ ಕೈ ಹಿಡಿದವರಿಗೆ ಸಂಪುಟ ಸ್ಥಾನ ಖಾತ್ರಿಯಾಗಿದೆ. ಎಂಟಿಬಿ ನಾಗರಾಜ್, ಆರ್. ಶಂಕರ್, ಮುನಿರತ್ನ ತಮ್ಮ ಶಾಸಕ ಸ್ಥಾನ ತ್ಯಾಗ ಮಾಡಿ ಬಿಜೆಪಿಗೆ ಬಂದವರು, ಅವರಿಗೆ ಸಚಿವ ಸ್ಥಾನ ನೀಡದೇ ತಡಮಾಡುವುದು ಸರಿಯಲ್ಲ ಎಂದು ಸಿಎಂ ಬಿಎಸ್​ವೈ ಪಕ್ಷದ ವರಿಷ್ಠರ ಮನವೊಲಿಸಿದ್ದಾರೆ. ಜತೆಗೆ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಲು ಭೂಮಿಕೆ ಸಜ್ಜುಮಾಡಿದ ಸಿ.ಪಿ. ಯೋಗೇಶ್ವರ್​ಗೂ ಬಹುತೇಕ ಅವಕಾಶ ಖಾತ್ರಿಯಾಗಿದೆ. ಸರ್ಕಾರ ರಚನೆಯಾದಾಗಲೇ ಮಂತ್ರಿಯಾಗಬೇಕಿದ್ದ ಹಿರಿಯ ಶಾಸಕ ಉಮೇಶ್ ಕತ್ತಿಗೆ ಈಗ ಅವಕಾಶ ನಿರಾಕರಿಸುವುದು ಸರಿಯಲ್ಲ ಎಂಬ ಭಾವನೆ ಇದೆ. ಹೀಗಾಗಿ ಅವರೂ ಸಂಪುಟ ಸೇರುವುದಕ್ಕೆ ವರಿಷ್ಠರು ಆಕ್ಷೇಪಿಸಿಲ್ಲ. ಉಳಿದ ಎರಡು ಸ್ಥಾನಕ್ಕೆ ಯಾರನ್ನು ತೆಗೆದುಕೊಳ್ಳಬೇಕೆಂಬ ಬಗ್ಗೆ ಚರ್ಚೆಗಳು ನಡೆದಿವೆ. ಈ ನಡುವೆ ಸಿಎಂ ಪ್ರಸ್ತಾಪಿಸಿದ ಪಟ್ಟಿ ಹೊರತಾದ ಬೇರೆ 2 ಹೆಸರನ್ನು ವರಿಷ್ಠರು ಆಯ್ಕೆ ಮಾಡಲು ನಿರ್ಧರಿಸಿದ್ದಾರೆ. ಇದು ಒಂದಷ್ಟು ಜಗ್ಗಾಟಕ್ಕೂ ಕಾರಣವಾಗಿದೆ. ಸುರಪುರ ಶಾಸಕ ರಾಜೂಗೌಡ, ಯಲಬುರ್ಗ ಶಾಸಕ ಹಾಲಪ್ಪ ಆಚಾರ್ ಸಿಎಂ ಆಯ್ಕೆಗಳಾಗಿದ್ದವು. ಜತೆಗೆ ಅರವಿಂದ ಲಿಂಬಾವಳಿ, ಸುನೀಲ್ ಕುಮಾರ್, ಅರವಿಂದ ಬೆಲ್ಲದ ಅವರಿಗೆ ಅವಕಾಶ ನೀಡುವ ಬಗ್ಗೆಯೂ ಹೆಸರುಗಳು ಪ್ರಸ್ತಾಪವಾಗಿದ್ದವು ಎನ್ನಲಾಗಿದೆ. ಆದರೆ, ಪಕ್ಷದ ಭವಿಷ್ಯದ ದೃಷ್ಟಿಯಿಂದ ಸೂಕ್ತ ನಿರ್ಧಾರವಾಗಬೇಕೆಂಬ ಕಾರಣಕ್ಕೆ ಆಯ್ಕೆಗಳು ತಮ್ಮ ಕಡೆಯಿಂದಲೇ ಆಗಬೇಕೆಂದು ವರಿಷ್ಠರು ಬಯಸಿದ್ದಾರೆ.

    ತಲ್ಲಣ ಮೂಡಿಸಿದ ಮೊಬೈಲ್ ಕರೆ

    ಕಲಬುರಗಿ: ನಗರದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಬಿಜೆಪಿ ಜನ ಸೇವಕ ಸಮಾವೇಶದ ಮಧ್ಯೆಯೇ ಬೀದರ್ ಜಿಲ್ಲಾ ಉಸ್ತುವಾರಿ ಹಾಗೂ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಎದ್ದು ಹೋಗಿದ್ದು ನಾನಾ ರೀತಿಯ ಚರ್ಚೆಗೆ ಎಡೆಮಾಡಿಕೊಟ್ಟಿತು. ಸಮಾವೇಶದ ಸ್ಥಳಕ್ಕೆ ಚವ್ಹಾಣ್ ಬರುತ್ತಲೇ ಮೊಬೈಲ್ ಕರೆ ಬಂದಿದೆ. ತಕ್ಷಣ ವೇದಿಕೆಯಿಂದ ಎದ್ದ ಸಚಿವರು ಮೊಬೈಲ್​ನಲ್ಲಿ ಮಾತನಾಡುತ್ತಲೇ ಹೊರನಡೆದರು. ಇವರು ಎದ್ದು ಹೋಗಿದ್ದನ್ನು ಗಮನಿಸಿದ ಅನೇಕರು ರೆಕ್ಕೆ-ಪುಕ್ಕ ಹಚ್ಚಿ ತಮ್ಮದೇ ಧಾಟಿಯಲ್ಲಿ ಚರ್ಚೆ ಆರಂಭಿಸಿದರು. ಸಂಪುಟ ವಿಸ್ತರಣೆಗೆ ಈಗ ಸಮಯ ಕೂಡಿ ಬಂದಿದ್ದರಿಂದ ಎಲ್ಲಿ ಚವ್ಹಾಣ್ ಅವರನ್ನು ತೆಗೆದು ಹಾಕುತ್ತಾರೋ? ಬಹುಶಃ ಪಕ್ಷದ ವರಿಷ್ಠರು ಇವರಿಗೆ ಮೊಬೈಲ್ ಕರೆ ಮಾಡಿದ್ದರಿಂದಲೇ ಎದ್ದು ಹೋಗಿದ್ದಾರೆ ಎಂದೆಲ್ಲ ಚರ್ಚೆಯಲ್ಲಿ ತೊಡಗಿರುವುದು ಕಂಡಿತು.

    ಸಿಎಂ ಬದಲಾಗುತ್ತಾರೆ

    ಸಂಪುಟ ಸಂಕ್ರಾಂತಿ: ಬೆಳೆಯುತ್ತಲೇ ಇದೆ ಸಚಿವಾಕಾಂಕ್ಷಿಗಳ ಪಟ್ಟಿಹುಬ್ಬಳ್ಳಿ: ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸುತ್ತೇವೆಂದು ಆರ್​ಎಸ್​ಎಸ್​ನವರೇ ನನಗೆ ಹೇಳಿದ್ದಾರೆ. ಆರ್​ಎಸ್​ಎಸ್ ಹಾಗೂ ಉಳಿದ ಪಕ್ಷದಲ್ಲೂ ನನಗೆ ಸ್ನೇಹಿತರಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ದುಡ್ಡು ಖರ್ಚು ಮಾಡಿ ಸರ್ಕಾರ ರಚಿಸಲಾಗಿದೆಯೇ ಹೊರತು ಜನಮತದಿಂದ ರಚನೆಯಾಗಿಲ್ಲ. ಸರ್ಕಾರ ಬೀಳುವುದಿಲ್ಲ. ಆದರೆ ಮುಖ್ಯಮಂತ್ರಿ ಬದಲಾಗಬಹುದು ಎಂದು ಭವಿಷ್ಯ ನುಡಿದರು. ಮಂತ್ರಿಮಂಡಲ ವಿಸ್ತರಣೆಯಲ್ಲಿ ಈಗಲೂ ಸ್ಪಷ್ಟತೆ ಇಲ್ಲ. ಯಡಿಯೂರಪ್ಪ ದೆಹಲಿಯಲ್ಲಿ ಸಿಹಿ ಸುದ್ದಿ ಕೊಡುತ್ತೇವೆ ಎಂದಿದ್ದಾರೆ. ಈ ಬಗ್ಗೆ ಹೈಕಮಾಂಡ್ ಏನಾದರೂ ಹೇಳಿದೆಯಾ ಎಂದು ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts