More

    ಬಿಜೆಪಿ ಅಭ್ಯರ್ಥಿಗಳ ಪಟ್ಟಿ ನಾಳೆ ಪ್ರಕಟ

    ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಆ. 19ರಂದು ಪ್ರಕಟಗೊಳ್ಳಲಿದೆ. 23ರಂದು ಪ್ರಣಾಳಿಕೆ ಬಿಡುಗಡೆಗೊಳ್ಳಲಿದೆ.
    ನಗರದ ಖಾಸಗಿ ಹೋಟೆಲ್​ನಲ್ಲಿ ಮಹಾನಗರ ಜಿಲ್ಲಾ ಬಿಜೆಪಿಯಿಂದ ಮಂಗಳವಾರ ಆಯೋಜಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಪೂರ್ವ ಸಿದ್ಧತೆ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಈ ವಿಷಯ ಪ್ರಕಟಿಸಿದರು.
    ವಾರ್ಡ್ ಅಧ್ಯಕ್ಷರ ಮೂಲಕ ಬಾರದ ಯಾವುದೇ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ವಾರ್ಡ್ ಅಧ್ಯಕ್ಷರು ಅರ್ಜಿಗಳನ್ನು ಪರಿಶೀಲಿಸಿ, ಮಂಡಲ ಅಧ್ಯಕ್ಷರಿಗೆ ರವಾನಿಸಬೇಕು. ಬುಧವಾರ ಮಧ್ಯಾಹ್ನ ಎಲ್ಲ ಅರ್ಜಿಗಳನ್ನು ಮಂಡಲ ಅಧ್ಯಕ್ಷರು ಪರಿಶೀಲನೆಗೆ ಒಳಪಡಿಸುವರು. ನಂತರ ಪ್ರತಿ ವಾರ್ಡ್​ಗೆ ಮೂವರು ಆಕಾಂಕ್ಷಿಗಳ ಪಟ್ಟಿ ಮಾಡಿ, ಕೇಂದ್ರ ಸಮಿತಿಗೆ ಸಲ್ಲಿಸಲಾಗುವುದು. ಪಾಲಿಕೆ ಚುನಾವಣೆಯ ಬಿಜೆಪಿ ಉಸ್ತುವಾರಿ ವಹಿಸಿರುವ ಮಾಜಿ ಸಚಿವ ಲಕ್ಷ್ಮಣ ಸವದಿ ಅವರು ಗುರುವಾರದಂದು ಅಭ್ಯರ್ಥಿಗಳ ಹೆಸರು ಪ್ರಕಟಿಸುವರು ಎಂದು ಹೇಳಿದರು.
    ಈ ಬಾರಿಯೂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೂಲಕ ಸತತ 3ನೇ ಬಾರಿ ಪಾಲಿಕೆ ಚುಕ್ಕಾಣಿ ಹಿಡಿಯುವುದು ಖಚಿತ. 65ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು ಎಂದು ತಿಳಿಸಿದರು.
    ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಮಾತನಾಡಿ, ಎಲ್ಲ ಕಾರ್ಯಕರ್ತರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇದೆ. ಆದರೆ, ತನಗೇ ಟಿಕೆಟ್ ಸಿಗಬೇಕು ಎಂಬ ಹಠ ಬೇಡ. ಟಿಕೆಟ್ ಸಿಗದಿದ್ದರೆ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ ಎಂಬ ಅಸಮಾಧಾನ ಸರಿ ಅಲ್ಲ. ಚುನಾವಣೆಯಲ್ಲಿ ಪಕ್ಷ ಗೆಲ್ಲಬೇಕು ಎಂದು ಸಲಹೆ ನೀಡಿದರು.
    ಹುಬ್ಬಳ್ಳಿ-ಧಾರವಾಡಕ್ಕೆ ಕೇಂದ್ರ ಸರ್ಕಾರ ನೀಡಿರುವ ಕೊಡುಗೆಗಳನ್ನು ವಿವರಿಸಿದ ಸಚಿವ ಪ್ರಲ್ಹಾದ ಜೋಶಿ, ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವ ಗುರಿ ಪ್ರತಿ ಕಾರ್ಯಕರ್ತರದ್ದಾಗಿರಬೇಕು ಎಂದರು.
    ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಇತರ ಪಕ್ಷಗಳನ್ನು ಪರಿಗಣಿಸಿದರೆ ಚುನಾವಣೆ ಸಿದ್ಧತೆಯಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ. ಬೇರೆ ಪಕ್ಷಗಳಿಗೆ ಅಭ್ಯರ್ಥಿಗಳು ಸಿಗುತ್ತಿಲ್ಲ. ಆದರೆ, ಬಿಜೆಪಿಯಲ್ಲಿ ಟಿಕೆಟ್​ಗಾಗಿ ಪೈಪೋಟಿ ನಡೆದಿದೆ ಎಂದು ಹೇಳಿದರು.
    ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಹಾನಗರ ಜಿಲ್ಲಾಧ್ಯಕ್ಷ, ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ಸೀಮಾ ಮಸೂತಿ, ಅಶೋಕ ಕಾಟವೆ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಇತರರಿದ್ದರು.
    ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಆಕಾಂಕ್ಷಿಗಳಿಂದ ಪ್ರಭಾವ ಬೀರುವ ಯತ್ನ: ಪಾಲಿಕೆ ಚುನಾವಣೆ ಪೂರ್ವಸಿದ್ಧತೆ ಸಭೆ ನಡೆಯುತ್ತಿದ್ದ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ಎದುರು ಟಿಕೆಟ್ ಆಕಾಂಕ್ಷಿಗಳು ತಮ್ಮ ಬೆಂಬಲಗರೊಂದಿಗೆ ತೆರಳಿ, ಮುಖಂಡರ ಮೇಲೆ ಪ್ರಭಾವ ಬೀರುವ ಯತ್ನ ನಡೆಸಿದರು. ಆದರೆ, ಯಾವುದೇ ರೀತಿಯ ಪ್ರಭಾವ ನಡೆಯುವುದಿಲ್ಲ. ವಾರ್ಡ್ ಅಧ್ಯಕ್ಷರ ಮುಖಾಂತರ ಅರ್ಜಿ ಕೊಟ್ಟರೆ ಮಾತ್ರ ಪರಿಗಣಿಸಲಾಗುವುದು. ಎಷ್ಟೇ ಬಾರಿ ಪಾಲಿಕೆ ಸದಸ್ಯ ಆಗಿರಲಿ, ಮೇಯರ್, ಉಪ ಮೇಯರ್ ಆಗಿ ಅಧಿಕಾರ ನಡೆಸಿರಲಿ, ಎಲ್ಲರೂ ನಿಯಮದ ಪ್ರಕಾರವೇ ಅರ್ಜಿ ಸಲ್ಲಿಸಬೇಕು ಎಂದು ಮುಖಂಡರು ಸೂಚಿಸಿದರು.
    ಸಂತೋಷ ಚವ್ಹಾಣ ತರಾಟೆಗೆ: ಬಿಜೆಪಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಅವರು ಬಹಿರಂಗ ಸಭೆಯಲ್ಲಿಯೇ ತರಾಟೆಗೆ ತೆಗೆದುಕೊಂಡರು. ವೇದಿಕೆಯಲ್ಲಿದ್ದವರನ್ನು ಸ್ವಾಗತಿಸುವ ಭರದಲ್ಲಿ ಸಂತೋಷ ಚವ್ಹಾಣ ಅವರು ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರಿಗೆ ಹೆಡ್​ವಾಸ್ಟರ್ ಎಂದು ಕಿಚಾಯಿಸಿದರು. ಇದರಿಂದ ಅಸಮಾಧಾನಗೊಂಡ ಕಟೀಲ್ ಅವರು, ನಮ್ಮದು ಶಿಸ್ತಿನ ಪಕ್ಷ. ತುಂಬಿದ ಸಭೆಯಲ್ಲಿ ಈ ರೀತಿ ಮಾತನಾಡಬಾರದು ಎಂದು ಗದರಿದರು.
    ಟಿಕೆಟ್​ಗಾಗಿ ಶಾಸಕ, ಸಚಿವರ ಮನೆಗೆ ಅಲೆದಾಡಬೇಡಿ: ಪಾಲಿಕೆಯ ಬಿಜೆಪಿ ಟಿಕೆಟ್ ನಿರ್ಧಾರದ ಜವಾಬ್ದಾರಿಯು ಕೇವಲ ಶಾಸಕ, ಸಚಿವ, ಸಂಸದರ ಮೇಲೆ ಇಲ್ಲ ಎಂದು ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶಾಸಕ ಅರವಿಂದ ಬೆಲ್ಲದ ಹೇಳಿದರು.
    ಆಕಾಂಕ್ಷಿಗಳು ಶಾಸಕ, ಸಚಿವರ ಮನೆಗಳಿಗೆ ಎಡತಾಕುವ ಅಗತ್ಯ ಇಲ್ಲ. ಇದುವರೆಗೆ ಆಕಾಂಕ್ಷಿಗಳು ಯಾರಾರದ್ದೋ ಬಳಿ ಅರ್ಜಿ ಕೊಟ್ಟಿದ್ದಾರೆ. ಅವು ಕ್ರಮಬದ್ಧ ಅಲ್ಲ. ವಾರ್ಡ್ ಅಧ್ಯಕ್ಷರ ಬಳಿ ಮಾತ್ರ ಅರ್ಜಿ ಕೊಡಬೇಕು ಎಂದರು. ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ಸಹ ತಮ್ಮ ಭಾಷಣದಲ್ಲಿ, ‘ಟಿಕೆಟ್ ಆಕಾಂಕ್ಷಿಗಳು ನನ್ನ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನೆಗಳಿಗೆ ಅಲೆದಾಡಬಾರದು. ವಾರ್ಡ್ ಅಧ್ಯಕ್ಷರಿಗೆ ಕೊಡುವ ಅರ್ಜಿಗಳನ್ನು ಮಾತ್ರ ಪಕ್ಷದ ಟಿಕೆಟ್​ಗೆ ಪರಿಗಣಿಸಲಾಗುವುದು’ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts