More

    ಲಿಂಗಾಯತರಿಗೆ ಟಿಕೆಟ್ ತಪ್ಪಿಸಲು ತಂತ್ರ?

    ಬೆಳಗಾವಿ: ಮುಂಬರುವ ಲೋಕಸಭಾ ಉಪಚುನಾವಣೆಯಲ್ಲಿ ಲಿಂಗಾಯತ ಮುಖಂಡರಿಗೆ ಟಿಕೆಟ್ ತಪ್ಪಿಸಲು ಬಿಜೆಪಿಯ ಕೆಲ ಮುಖಂಡರೇ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದಾಗಿ ತಿಳಿದುಬಂದಿದೆ.

    ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿಯೂ ಸತತ ನಾಲ್ಕು ಬಾರಿ ಸಂಸದರಾಗಿ ಎಸ್.ಬಿ. ಸಿದ್ನಾಳ ಗೆದ್ದು ಬಂದಿದ್ದರು. ಬಳಿಕ ಸಂಸದರಾಗಿ ಬಿಜೆಪಿಯಿಂದ ಗೆದ್ದು ಬಂದಿದ್ದ ದಿ.ಸುರೇಶ ಅಂಗಡಿ ಅವರು ಕೂಡ ಸತತ ಮೂರು ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದರು.

    ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಅಂಗಡಿ ಅವರಿಗೆ ಬಿಜೆಪಿ ಟಿಕೆಟ್ ಕೊಡುವುದು ಬೇಡ ಎಂದು ಸ್ಥಳೀಯ ಕೆಲ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಕೊನೆ ಘಳಿಗೆಯಲ್ಲಿ ಬಿಜೆಪಿ ಹೈಕಮಾಂಡ್ ಅವರಿಗೇ ಟಿಕೆಟ್ ನೀಡಿತ್ತು. ನಾಲ್ಕನೇ ಬಾರಿಗೆ 3 ಲಕ್ಷ ಮತಗಳ ಭಾರೀ ಅಂತರದಿಂದ ಮೋದಿ ಅಲೆಯಲ್ಲಿ ಸುರೇಶ ಅಂಗಡಿ ದಿಗ್ವಿಜಯ ಸಾಧಿಸಿದ್ದರು. ಬಳಿಕ ಇದು ಕೆಲ ‘ರಾಜಕಾರಣಿ’ಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಅಜಾತ ಶತ್ರುವಾಗಿದ್ದ ದಿ. ಅಂಗಡಿ, ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವರಾದ ಬಳಿಕ ಸಮರೋಪಾದಿಯಲ್ಲಿ ಕೆಲಸಗಳನ್ನು ಕೈಗೊಂಡಿದ್ದರು. ಬೆಳಗಾವಿ-ಧಾರವಾಡ ಹೊಸ ರೈಲು ಮಾರ್ಗಕ್ಕೆ 920 ಕೋಟಿ ರೂ., ಬೆಂಗಳೂರಿನ ಸಬ್ ಅರ್ಬನ್ ರೈಲು ಮಾರ್ಗಕ್ಕೆ 20 ಸಾವಿರ ಕೋಟಿ ರೂ.ಗಳಿಗೂ ಅಧಿಕ ಅನುದಾನವನ್ನು ರಾಜ್ಯಕ್ಕೆ ತಂದಿದ್ದರು. ಈಗ ಅಂಗಡಿ ಅವರ ಕುಟುಂಬಕ್ಕೆ ಟಿಕೆಟ್ ಕೊಡಬೇಕೋ ಅಥವಾ ಬೇಡವೋ ಎಂಬ ಜಿಜ್ಞಾಸೆ ಅಂಗಡಿ ಅವರ ನಿಧನರಾದ ಬಳಿಕ ಬಿಜೆಪಿ ಮತ್ತು
    ಆರ್‌ಎಸ್‌ಎಸ್ ಆಪ್ತ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

    ಬೆಳೆದ ಆಕಾಂಕ್ಷಿತರ ಪಟ್ಟಿ: ಅಂಗಡಿ ಅವರು ಮಾಡಿರುವ ಕಾರ್ಯಗಳು, ಅವರ ಅನುಕಂಪದ ಅಲೆ ಮತ್ತು ಬಿಜೆಪಿ ಅಲೆ ಮೇಲೆ ಗೆದ್ದು ಬರುವ ಭರವಸೆಯಿಂದಾಗಿ ಬಿಜೆಪಿಯಲ್ಲಿ ಆಕ್ಷಾಂಕ್ಷಿಗಳ ಪಟ್ಟಿ ಉದ್ದವಾಗಿ ಬೆಳೆದು ನಿಂತಿದೆ. ವೈದ್ಯ ಡಾ.ಗಿರೀಶ ಸೋನವಾಲ್ಕರ್ ದೆಹಲಿಯಲ್ಲಿ ಠಿಕಾಣಿ ಹೂಡಿ ಟಿಕೆಟ್ ಪಡೆಯುವುದಕ್ಕಾಗಿ ಶತಾಯ-ಗತಾಯ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ. ಮತ್ತೊಂದೆಡೆ, ರಾಮದುರ್ಗದ ಜಿಪಂ ಸದಸ್ಯ ರಮೇಶ ದೇಶಪಾಂಡೆ ಅವರ ಹೆಸರು ಕೂಡ ಮುಂಚೂಣಿಯಲ್ಲಿದೆ. 20ಕ್ಕೂ ಹೆಚ್ಚು ಜನ ಅಕಾಂಕ್ಷಿಗಳಿದ್ದಾರೆ. ಆದರೆ, ಅಮಿತ್ ಷಾ ಅವರು ಇದೇ 17ಕ್ಕೆ ಬೆಳಗಾವಿಗೆ ಆಗಮಿಸಲಿದ್ದು, ಅಂತಿಮವಾಗಿ ಯಾರ ಹೆಸರು ಘೋಷಣೆ ಮಾಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

    ಶಕ್ತಿ ಕೇಂದ್ರವಾಗಿರುವ ಅಥಣಿ: ಆರ್‌ಎಸ್‌ಎಸ್‌ನ ಹಿರಿಯ ಮುಖಂಡರಾದ ಅರವಿಂದರಾವ ದೇಶಪಾಂಡೆ ಮತ್ತು ಡಿಸಿಎಂ ಲಕ್ಷ್ಮಣ ಸವದಿ ಅವರು ಈಗ ಜಿಲ್ಲಾ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹೀಗಾಗಿ ಅಥಣಿ ಈಗ ‘ರಾಜಕೀಯ ಶಕ್ತಿ ಕೇಂದ್ರ’ವಾಗಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಂದರ್ಭದಲ್ಲಿ ಸಾಕಷ್ಟು ಪರ-ವಿರೋಧ ವ್ಯಕ್ತವಾದ ಸಂದರ್ಭದಲ್ಲಿ ಅರವಿಂದರಾವ, ಬಿಜೆಪಿ ಶಾಸಕರು, ಸಚಿವರು ಸಂಸದರನ್ನು ಕರೆಯಿಸಿ ಬುದ್ಧಿವಾದ ಹೇಳಿದ್ದರು. ಯಾವುದೇ ರೀತಿ ಗೊಂದಲವಾಗದಂತೆ, ಬಿಜೆಪಿಗೆ ಹಾನಿಯಾಗದಂತೆ ನೋಡಿಕೊಂಡಿದ್ದರು.

    ಭಾರತೀಯ ಜನತಾ ಪಕ್ಷದ ಹೈಕಮಾಂಡ್ ಹಾಗೂ ರಾಜ್ಯದ ಹಿರಿಯ ಮುಖಂಡರು, ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಟಿಕೆಟ್ ನೀಡುವ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಾಗಿ ನಾವೆಲ್ಲರೂ ಸಿದ್ಧರಿದ್ದೇವೆ.
    | ಬಾಲಚಂದ್ರ ಜಾರಕಿಹೊಳಿ ಶಾಸಕ, ಅರಭಾವಿ

    ಬೆಳಗಾವಿಯಲ್ಲಿ ತೆರವಾಗಿರುವ ಲೋಕಸಭಾ ಸ್ಥಾನಕ್ಕೆ ವೀರಶೈವ ಲಿಂಗಾಯತರಿಗೆ ಟಿಕೆಟ್ ನೀಡುವ ಮೂಲಕ ದಿ. ಸುರೇಶ ಅಂಗಡಿಯವರ ಸ್ಥಾನ ತುಂಬುವಂತಾಗಬೇಕು. ಈ ಸಮುದಾಯದವರಿಗೆ ಟಿಕೆಟ್ ನೀಡುವ ಮೂಲಕ ಸಮಾಜಕ್ಕೆ ಆಗಿರುವ ಹಾನಿ ಸರಿಪಡಿಸಬೇಕು.
    | ರತ್ನಪ್ರಭಾ ಬೆಲ್ಲದ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕ ಬೆಳಗಾವಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts