More

    ಪಕ್ಷಗಳು ಆಶ್ವಾಸನೆಯಲ್ಲೇ ಕಾಲ ಕಳೆದಿವೆ – ಮಂಡ್ಯ ಪುಟ್ಟಸ್ವಾಮಿಗೌಡ ಟೀಕೆ

    ಲಿಂಗಸುಗೂರು: ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳು ಕೇವಲ ಆಶ್ವಾಸನೆಗಳಲ್ಲೇ ಕಾಲ ಕಳೆದಿವೆ ಎಂದು ಭಾರತೀಯ ಬೆಳಕು ಪಾರ್ಟಿ ಸಂಸ್ಥಾಪಕ ಅಧ್ಯಕ್ಷ ಮಂಡ್ಯ ಪುಟ್ಟಸ್ವಾಮಿಗೌಡ ಹೇಳಿದರು.

    ಪಟ್ಟಣದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ, ಕಳೆದ ಆರು ವರ್ಷಗಳ ಹಿಂದೆ ರಚನೆಗೊಂಡ ಪಕ್ಷವು ರಾಜ್ಯಾದ್ಯಂತ ಸಂಘಟನೆಯಲ್ಲಿ ತೊಡಗಿದ್ದು, ಇದಕ್ಕಾಗಿ 5 ಲಕ್ಷ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಬರುವ ವಿಧಾನಸಭಾ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಈಗಾಗಲೇ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಲಿಂಗಸುಗೂರು ಮೀಸಲು ಕ್ಷೇತ್ರದಿಂದ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಥಾವರ್‌ಸಿಂಗ್ ರಾಠೋಡ್ ಸ್ಪರ್ಧಿಸಲಿದ್ದಾರೆ.

    ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರನ್ನು ನಂಬಿಸಿ ಮೋಸ ಮಾಡುತ್ತಿವೆ. ದೇಶದಲ್ಲಿ ಶೇ.85 ಕೃಷಿಕರು ನಾನ ಸಂಕಷ್ಟ ಎದುರಿಸುತ್ತಿದ್ದಾರೆ. ನಿಯಂತ್ರಿತ ಮಾರುಕಟ್ಟೆ ಇಲ್ಲದೆ ದಲ್ಲಾಳಿಗಳಿಂದ ಮೋಸ ಹೋಗುತ್ತಿದ್ದಾರೆ. ಸರ್ಕಾರ ರೈತರಿಗಾಗಿ ಅನೇಕ ಯೋಜನೆ ಜಾರಿಗೆ ತಂದರೂ ಸಮರ್ಪಕವಾಗಿ ತಲುಪುತ್ತಿಲ್ಲ. ಬೆಳೆಗಳಿಗೆ ಬೆಂಬಲ ಬೆಲೆ ದೊರೆಯುತ್ತಿಲ್ಲ. ಬಜೆಟ್ ಕೇವಲ ಚುನಾವಣೆ ಗಿಮಿಕ್ ಆಗಿದೆ. ರಾಜ್ಯ ಸರ್ಕಾರ ಕೃಷಿಯ ಮೂರು ಕಾಯ್ದೆ ಹಿಂಪಡೆದಿಲ್ಲ. ಕಂದಾಯ ಕಾಯ್ದೆಯಿಂದ ಪ್ರತಿದಿನ ಲಕ್ಷಾಂತರ ಕೃಷಿಕರು ಭೂಮಿ ಕಳೆದುಕೊಂಡು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ದೂರಿದರು.

    ಇಂತಹ ಹತ್ತು ಹಲವು ವೈಪಲ್ಯಗಳಿಂದ ಬೇಸತ್ತ ಜನರಿಗೆ ಪ್ರತಿ 4 ಪಂಚಾಯಿತಿಗಳಿಗೆ ಒಂದರಂತೆ ಗ್ರಾಮೀಣ ಕೃಷಿ ಕೈಗಾರಿಕೆ ಪಾರ್ಕ್ ಸ್ಥಾಪನೆ, 25 ಲಕ್ಷ ಉದ್ಯಮಗಳ ಸೃಷ್ಟಿ, 3 ಕೋಟಿ ಉದ್ಯೋಗ ಸೃಷ್ಟಿ, ನಾಲ್ಕು ಪಂಚಾಯಿತಿಗೆ ಒಬ್ಬ ಕೃಷಿ ತಜ್ಞರ ನೇಮಕ, ಆಧುನೀಕರಣ ಶಿಕ್ಷಣ, ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟಕ್ಲಾಸ್, ತೆರಿಗೆ ಪಾರದರ್ಶಕತೆ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ರೈತರ ಆರ್ಥಿಕ ಮಟ್ಟ ಸುಧಾರಣೆ, ಸಂಪೂರ್ಣ ಉಚಿತ ಚಿಕಿತ್ಸೆ, ಸದೃಢ ಸಮಾಜ ನಿರ್ಮಾಣ ಸೇರಿ ಪಕ್ಷದಿಂದ 20 ಅಂಶಗಳ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

    ಪಕ್ಷದ ರಾಜ್ಯಾಧ್ಯಕ್ಷ ಮನೋಹರ, ಪ್ರಧಾನ ಕಾರ್ಯದರ್ಶಿ ರಾಜಶೇಖರ, ಸಂಚಾಲಕ ಮಧುಸ್ವಾಮಿ, ಕಾರ್ಯಾಧ್ಯಕ್ಷ ಥಾವರ್‌ಸಿಂಗ ರಾಠೋಡ್, ಮುಖಂಡ ಮೌನೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts