More

    ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ವರ್ಗಾವಣೆಗೆ ಒತ್ತಾಯ

    ಲಿಂಗಸುಗೂರು: ತಾಲೂಕು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕರ ವರ್ಗಾವಣೆಗೆ ಒತ್ತಾಯಿಸಿ ಬಿಸಿಯೂಟ ನೌಕರರು ಪಟ್ಟಣದ ಗುರುಭವನದಿಂದ ತಾಪಂ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಾಪಂ ವ್ಯವಸ್ಥಾಪಕ ಮಲ್ಲಿಕಾರ್ಜುನಗೆ ಮಂಗಳವಾರ ಮನವಿ ಸಲ್ಲಿಸಿದರು.

    ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆ ಅಚ್ಚುಕಟ್ಟಾಗಿ ಜಾರಿಗೆ ತರುವಲ್ಲಿ ಅಡುಗೆಯವರ ಪಾತ್ರ ಪ್ರಮುಖವಾಗಿದೆ. ಆದರೆ ಅಧಿಕಾರಿಗಳು ಸಕಾಲಕ್ಕೆ ಶಾಲೆಗಳಿಗೆ ರೇಷನ್, ಹಾಲು ಸರಬರಾಜು ಮಾಡುತ್ತಿಲ್ಲ. ಸಹಾಯಕ ನಿರ್ದೇಶಕರು ಕಚೇರಿಯಲ್ಲಿರದ ಕಾರಣ ಸಹಿ ಮಾಡಿಸಿಕೊಳ್ಳಲು ಹೋಗುವ ಬಿಸಿಯೂಟ ನೌಕರರು ದಿನವಿಡಿ ಕಾದು ಕುಳಿತು ತಮ್ಮೂರಿಗೆ ವಾಪಸ್ಸಾಗುವ ಪರಿಸ್ಥಿತಿ ಎದುರಾಗಿದೆ.

    ಜನವರಿಯಿಂದ ಮಾರ್ಚ್‌ವರೆಗೆ ಮೂರು ತಿಂಗಳ ಗೌರವಧನ ಸರ್ಕಾರ ಬಿಡುಗಡೆ ಮಾಡಿದ್ದು, ಇದನ್ನು ನೌಕರರ ಖಾತೆಗೆ ಜಮೆ ಮಾಡದೆ ಸರ್ಕಾರಕ್ಕೆ ಮರಳಿ ವಾಪಸ್ ಕಳುಹಿಸಿದ್ದಾರೆ ಎಂದು ದೂರಿದರು.

    ಇದನ್ನೂ ಓದಿ: ಅಕ್ಷರ ದಾಸೋಹ ಅಧಿಕಾರಿಗೆ ನೋಟಿಸ್

    ನಾಲ್ಕು ತಿಂಗಳ ವೇತನವಿಲ್ಲದೆ ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು. ಬಾಕಿ ಗೌರವಧನ ಮತ್ತು ವೇತನ ಬಿಡುಗಡೆ ಮಾಡಬೇಕು. ಮಾರ್ಚ್ 2023ರ ಬಜೆಟ್‌ನಲ್ಲಿ ಬಿಸಿಯೂಟ ನೌಕರರಿಗೆ ಸಾವಿರ ರೂ. ಜಾಸ್ತಿ ಮಾಡಿದ್ದು, ತಕ್ಷಣ ಅನುಷ್ಠಾನಗೊಳಿಸಬೇಕು. ನಿವೃತ್ತಿ ಹೊಂದಿದ ಮತ್ತು ಹೊಂದುತ್ತಿರುವ ನೌಕರರಿಗೆ ಇಡಿಗಂಟು ನೀಡಬೇಕು.

    ಸಾದಿಲ್ವಾರ್ ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆಯವರಿಗೆ ನೀಡಬೇಕು. ಬಿಸಿಯೂಟ ಯೋಜನೆ ಖಾಸಗಿ ಸಂಸ್ಥೆಗಳಿಗೆ ನೀಡಬಾರದು. ಚುನಾವಣೆಯಲ್ಲಿ ಪೋಲಿಂಗ್ ಬೂತ್‌ಗಳಲ್ಲಿ ಕರ್ತವ್ಯ ನಿರ್ವಹಿಸಿದ ಹಾಗೂ ಚುನಾವಣೆ ಸಿಬ್ಬಂದಿಗೆ ಅಡುಗೆ ಮಾಡಿ ಬಡಿಸಿದ ನೌಕರರಿಗೆ ಮೂರು ಸಾವಿರ ರೂ. ಕೂಲಿ ನೀಡಬೇಕು. ಬಿಸಿಯೂಟ ನೌಕರರನ್ನು ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

    ಬಿಸಿಯೂಟ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಸಿದ್ದಮ್ಮ, ಗೌರವಾಧ್ಯಕ್ಷ ಮಹ್ಮದ್ ಹನೀಫ್, ಪ್ರಧಾನ ಕಾರ್ಯದರ್ಶಿ ಝರೀನಾ ಬೇಗಂ, ಅಲ್ಲಾಭಕ್ಷಿ, ಕಮಲಾಬಾಯಿ, ತುಳಜಾಬಾಯಿ, ಮಲ್ಲಮ್ಮ, ಪದ್ಮಾ ಮಸ್ಕಿ, ನಿಂಗಪ್ಪ, ವೀರಾಪುರ, ರಮೇಶ ವೀರಾಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts