More

    ಪ್ರವಾಹ ಬರುವ ಮುನ್ನ ಸುರಕ್ಷಿತ ಸ್ಥಳಕ್ಕೆ ಬನ್ನಿ

    ಲಿಂಗಸುಗೂರು: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಹರಿಬಿಟ್ಟಾಗ ಉಂಟಾಗುವ ಪ್ರವಾಹಕ್ಕೆ ಸಿಲುಕುವ ನಡುಗಡ್ಡೆಗಳ ನಿವಾಸಿಗಳನ್ನು ರಕ್ಷಿಸಲು ತಾಲೂಕು ಆಡಳಿತ ಸಿದ್ಧವಿದ್ದು, ಇದಕ್ಕೆ ನಿವಾಸಿಗಳು ಸಹಕಾರ ನೀಡಬೇಕು ಎಂದು ಸಹಾಯಕ ಆಯುಕ್ತ ರಾಜಶೇಖರ ಡಂಬಳ ಹೇಳಿದರು.

    ಎಸಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕು ಆಡಳಿತ ಮತ್ತು ನಡುಗಡ್ಡೆ ನಿವಾಸಿಗಳ ಸಭೆಯಲ್ಲಿ ಮಾತನಾಡಿದರು. ಕೃಷ್ಣಾ ನದಿಯಲ್ಲಿ ಪ್ರವಾಹ ಬಂದರೆ ತಾಲೂಕಿನ ಮ್ಯಾದರಗಡ್ಡಿ, ಕರಕಲಗಡ್ಡಿ, ವೆಂಕಮ್ಮನಗಡ್ಡಿ ಮತ್ತಿತರ ನಡುಗಡ್ಡಿಗಳು ಬಾಹ್ಯ ಸಂಪರ್ಕ ಕಳೆದುಕೊಳ್ಳುತ್ತವೆ. ಹೀಗಾಗಿ ಅಲ್ಲಿನ ನಿವಾಸಿಗಳು ನದಿಯಲ್ಲಿ ನೀರು ಅಪಾಯದ ಮಟ್ಟ ತಲುಪುವ ಮುನ್ನವೇ ಸುರಕ್ಷಿತ ಸ್ಥಳಗಳಿಗೆ ಜಾನುವಾರು ಸಹಿತ ಸ್ಥಳಾಂತರಗೊಳ್ಳಬೇಕು. ಎನ್‌ಡಿಆರ್‌ಎಫ್, ಪೊಲೀಸ್, ಅಗ್ನಿ ಶಾಮಕ ದಳದ ಸಿಬ್ಬಂದಿ ರೈತರನ್ನು ಸ್ಥಳಾಂತರಿಸಲು ಪ್ರವಾಹದ ಮಧ್ಯೆ ಜೀವ ಭಯದಲ್ಲಿ ಬಂದು ಹೈರಾಣಾಗುಂತೆ ಮಾಡಬಾರದು ಎಂದು ಕೋರಿದರು.

    ತಾಲೂಕು ಆಡಳಿತ ಈಗಾಗಲೇ ಮ್ಯಾದರಗಡ್ಡಿ, ಕರಕಲಗಡ್ಡಿ, ವೆಂಕಮ್ಮನಗಡ್ಡಿ ರೈತಾಪಿ ವರ್ಗಕ್ಕೆ ಹಂಚಿನಾಳ ಬಳಿಯ ಸರ್ಕಾರಿ ಭೂಮಿ ಸರ್ವೆ ನಂ.19 ರಲ್ಲಿ 11 ನಿವೇಶನಗಳನ್ನು ಗುರುತಿಸಲಾಗಿದ್ದು, ರಾಜೀಗಾಂಧಿ ವಸತಿ ಯೋಜನೆಯಡಿ ಪ್ರಥಮ ಹಂತವಾಗಿ 50 ಸಾವಿರ ರೂ. ಮಂಜೂರು ಮಾಡಲಾಗುವುದು. ಸಂತ್ರಸ್ತರು ಮನೆ ನಿರ್ಮಿಸಲು ಮುಂದಾಗಬೇಕು. ಅಲ್ಲಿಯವರೆಗೆ ತಾತ್ಕಾಲಿಕ ಟಿನ್ ಶೆಡ್ ನಿರ್ಮಿಸಿಕೊಡಲಾಗುವುದು ಎಂದರು.

    ಕಂದಾಯ ಇಲಾಖೆಯಿಂದ ವೃದ್ಧಾಪ್ಯ, ವಿಧವಾ ವೇತನ, ಪಡಿತರ ಕಾರ್ಡ್ ಸೇರಿ ಅಗತ್ಯ ಸೌಲಭ್ಯ ಒದಗಿಸಲಾಗುವುದು. ನಡುಗಡ್ಡೆಯಲ್ಲಿನ ರೈತರ ಭೂಮಿ ಖರೀದಿಸಿ ಬೇರೆಡೆ ಭೂಮಿ ಕೊಡಿಸುವ ಬಗ್ಗೆ ಅಲ್ಲಿನ ರೈತರ ಬೇಡಿಕೆಯಂತೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಲಿದೆ ಎಂದರು.

    ಈ ಸಂದರ್ಭದಲ್ಲಿ ಮಾತನಾಡಿದ ನಡುಗಡ್ಡೆ ರೈತ ದೊಡ್ಡಮಲ್ಲಪ್ಪ, ಹತ್ತಾರು ವರ್ಷಗಳಿಂದ ಪ್ರವಾಹ ಬಂದಾಗ ನೀವು ಬರುತ್ತೀರಿ. ಯರಗೋಡಿಯ ಸರ್ಕಾರಿ ಶಾಲೆಯಲ್ಲಿ ಗಂಜಿಕೇಂದ್ರ ತೆರೆದು ಬಿಟ್ಟು ಹೋಗುತ್ತೀರಿ. ಗಡ್ಡಿಯಲ್ಲಿನ ನಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿದ ಬೆಳೆ ಜಾನುವಾರುಗಳ ಪಾಲಾಗುತ್ತವೆ. ಇಲ್ಲವೆ ನೀರಿನಿಂದ ಕೊಳೆತು ಹೋಗುತ್ತವೆ. ನಮಗೆ ಶಾಶ್ವತ ಪರಿಹಾರ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು.

    ದಸಂಸ ಮುಖಂಡ ಹನುಮಂತಪ್ಪ ವೆಂಕಟಾಪುರ ಮಾತನಾಡಿ, ಅಧಿಕಾರಿಗಳು ಈಗಾಗಲೇ ನಿಮಗೆ ನಿವೇಶನ ಗುರುತಿಸಿದ್ದಾರೆ. ಮನೆ ಕಟ್ಟಲು ಹಣ ಕೂಡ ಬಿಡುಗಡೆ ಮಾಡುತ್ತಾರೆ. ಕಳೆದ ವರ್ಷ ಮತ್ತು ಪ್ರಸಕ್ತ ವರ್ಷ ಬೆಳೆನಷ್ಟ ಪರಿಹಾರ ಕೂಡ ಒದಗಿಸುತ್ತಾರೆ. ಭೂಮಿ ಖರೀದಿ ವಿಷಯ ಸರ್ಕಾರದ ಮಟ್ಟದಲ್ಲಿದೆ ಎಂದು ಹೇಳುತ್ತಿದ್ದಾರೆ. ಮುಂದೆ ನಿಮಗೆ ಇದೇ ಸಮಸ್ಯೆ ಮುಂದುವರಿದರೆ ನಿಮ್ಮ ಜತೆ ಹೋರಾಟಕ್ಕೆ ನಾವಿದ್ದೇವೆ. ಹೀಗಾಗಿ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

    ರೈತ ಮುಖಂಡರಾದ ಶರಣಪ್ಪ ಮುದಗಲ್, ಬಸವರಾಜ ಬಂಕದಮನಿ, ಲಕ್ಕಪ್ಪ ನಾಗರಹಾಳ, ಸಣ್ಣಮಲ್ಲಪ್ಪ, ಹನುಮಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts