More

    ಬೆಳೆ ನಷ್ಟ ಪರಿಹಾರ ಕೊಡಲು ರಾಜ್ಯ ರೈತ ಸಂಘ ಒತ್ತಾಯ

    ಲಿಂಗಸುಗೂರು: ಜಿಲ್ಲಾದ್ಯಂತ ಸಂಭವಿಸಿದ ಅತಿವೃಷ್ಟಿಯಿಂದ ಹಾನಿಗೀಡಾದ ಬೆಳೆಗಳಿಗೆ ನಷ್ಟ ಪರಿಹಾರ ಕೊಡಲು ಒತ್ತಾಯಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಎಸಿ ಕಚೇರಿ ಸಿಬ್ಬಂದಿ ಅವಿನಾಶಗೆ ಸೋಮವಾರ ಮನವಿ ಸಲ್ಲಿಸಿದರು.

    ಜಿಲ್ಲೆಯಲ್ಲಿ 2020 ರ ಸೆಪ್ಟಂಬರ್ ಮತ್ತು ಅಕ್ಟೋಬರ್‌ನಲ್ಲಿ ಅತಿವೃಷ್ಟಿಯಾಗಿ ತೊಗರಿ, ಸಜ್ಜೆ, ಮೆಣಸಿನಕಾಯಿ, ಈರುಳ್ಳಿ, ಪಪ್ಪಾಯಿ, ದಾಳಿಂಬೆ ಮತ್ತಿತರ ಬೆಳೆಗಳು ಹಾನಿಗೀಡಾಗಿವೆ. ಕಂದಾಯ, ಕೃಷಿ, ತೋಟಗಾರಿಕೆ ಇಲಾಖಾಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದಾರೆ. ಆದರೂ ಬೆಳೆನಷ್ಟ ಪರಿಹಾರದ ಹಣ ರೈತರ ಖಾತೆಗೆ ಜಮಾ ಆಗಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

    ಮುಂಗಾರಿ ಮತ್ತು ಹಿಂಗಾರು ಹಂಗಾಮಿನಲ್ಲಿ ಪಿಎಂ ಫಸಲ್ ಬಿಮಾ ಯೋಜನೆಯಡಿ ಭರ್ತಿ ಮಾಡಿದ್ದ 2018 ರಿಂದ 2020 ರವರೆಗಿನ ಬೆಳೆವಿಮೆ ಹಣ ತಕ್ಷಣ ರೈತರ ಖಾತೆಗೆ ಜಮಾ ಮಾಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ಹಗಲು 10 ತಾಸು ನಿರಂತರ ವಿದ್ಯುತ್ ಪೂರೈಸಬೇಕು. ಎಪಿಎಂಸಿಯಲ್ಲಿ ಶೇ.2ರಷ್ಟು ಕಮಿಷನ್ ತೆಗೆಯುವುದು ಮತ್ತು ಹಗುರವಾದ ಚೀಲಗಳಲ್ಲಿ ತೂಕ ಮಾಡಿ ಹೆಚ್ಚುವರಿಯಾಗಿ ಅರ್ಧ ಕೆ.ಜಿ.ಬಾರ ತೆಗೆಯುವುದು ಸೇರಿ ರೈತರ ಮೇಲಾಗುವ ವಿವಿಧ ದಾಳಿಗಳನ್ನು ತಪ್ಪಿಸಬೇಕು. ಸೇವಾ ಸಹಕಾರ ಸಂಘಗಳಲ್ಲಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರ ಅಲೆದಾಟ ತಪ್ಪಿಸಬೇಕು. ಸರಳ ರೀತಿಯಲ್ಲಿ ಸಾಲ ಸಿಗುವಂತೆ ಮಾಡಬೇಕು. ನೊಂದಣಿ ಕಚೇರಿಯಲ್ಲಿ ಇಸಿ ಪಡೆಯಬೇಕಾದರೆ ರೈತರು 400 ರಿಂದ 500 ರೂ. ಖರ್ಚು ಮಾಡಬೇಕಾಗಿದ್ದು, ಕಚೇರಿಯಲ್ಲೇ ಹಣ ತುಂಬಿಸಿಕೊಂಡು ಇಸಿ ಕೊಡಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು ಎಂಬುದೂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

    ರೈತಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ತಾಲೂಕು ಅಧ್ಯಕ್ಷ ವೀರನಗೌಡ ಹಟ್ಟಿ, ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ ಗೌಡೂರು, ಮಸ್ಕಿ ತಾಲೂಕು ಅಧ್ಯಕ್ಷ ಹುಚ್ಚರಡ್ಡಿ ಅಮೀನಗಡ, ಶಿವರಾಜ ಕುಮಾರ, ಕುಪ್ಪಣ್ಣ ಗೋನವಾಟ್ಲ, ಚಂದಾವಲಲಿ, ಹುಸೇನ್‌ನಾಯ್ಕ, ಖಾಸಿಂಸಾಬ್, ಬಸನಗೌಡ ಮಟ್ಟೂರು, ಶಂಕರಗೌಡ, ಹನುಮಂತ, ದಾವಲ್‌ಸಾಬ್, ಗ್ಯಾನನಗೌಡ, ಗ್ಯಾನಪ್ಪ ಗುಡಿಹಾಳ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts