More

    ಬೆಲೆ ಏರಿಕೆ ನಿಯಂತ್ರಣದಲ್ಲಿ ವಿಫಲ; ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಬೋಸರಾಜು ಆರೋಪ

    ತಾಪಂ, ಜಿಪಂ ಚುನಾವಣೆಯ ಪೂರ್ವಭಾವಿ ಸಭೆ

    ಲಿಂಗಸುಗೂರು: ಬಿಜೆಪಿ ನೇತೃತ್ವದ ಕೇಂದ್ರ, ರಾಜ್ಯ ಸರ್ಕಾರಗಳು ಬೆಲೆ ಏರಿಕೆ ಮೇಲೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದ್ದು, ಇದರಿಂದ ಶ್ರೀಸಾಮಾನ್ಯ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಆರೋಪಿಸಿದರು.

    ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ತಾಪಂ, ಜಿಪಂ ಚುನಾವಣೆ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. 7 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಇಂಧನ, ಗ್ಯಾಸ್, ದಿನಸಿ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುತ್ತಿಲ್ಲ. ಇದು ಕಾರ್ಪೋರೇಟ್ ವಲಯಕ್ಕೆ ಮಣೆ ಹಾಕಿದೆ. ಚುನಾವಣೆ ವೇಳೆ ನೀಡಿದ ಭರವಸೆಗಳೆಲ್ಲ ಹುಸಿಯಾಗಿವೆ. ಮಹಿಳೆಯರು, ರೈತರು, ಯುವಕರು, ಬಡವರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ಆರೋಪಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷದ ಹಿರಿಯ ನಾಯಕರು ಆಯ್ಕೆ ಮಾಡಿದ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕೆಂದು ಹೇಳಿದರು.

    ವಿಧಾನ ಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರು ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರೆತು ಹಲವು ದಶಕಗಳು ಕಳೆದರೂ ಗ್ರಾಮಗಳ ಸಮಗ್ರ ಅಭಿವೃದ್ಧಿ ಕಾಣದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇದಕ್ಕೆ ಭ್ರಷ್ಟಾಚಾರವೇ ಮೂಲ ಕಾರಣವಾಗಿದ್ದು, ಚುನಾಯಿತ ಪ್ರತಿನಿಧಿಗಳು ಜನರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಜವಾಬ್ದಾರಿ ಮತ್ತು ಪ್ರಾಮಾಣಿಕತೆಯಿಂದ ಅಭಿವೃದ್ಧಿಗೆ ಗಮನ ಹರಿಸಬೇಕು. ಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ಚಾರತ್ರೃವಂತರಾಗಿ ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಹೇಳಿದರು.

    ಶಾಸಕ ಡಿ.ಎಸ್.ಹೂಲಗೇರಿ ಮಾತನಾಡಿ, ಹಿಂದೆ ಸಿದ್ಧರಾಮಯ್ಯ ಸಿಎಂ ಆಗಿದ್ದ ವೇಳೆ ಬಡವರಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಕಾಂಗ್ರೆಸ್ ಪಕ್ಷವು ಬಡವರು, ದೀನ ದಲಿತರು, ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತ ಬರುತ್ತಿದೆ. ಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಪಕ್ಷನಿಷ್ಠ ಅಭ್ಯರ್ಥಿಗಳ ಆಯ್ಕೆಗೆ ಪಕ್ಷದ ಮುಖಂಡರು ನಿರ್ಧರಿಸಲಿದ್ದು, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪರಸ್ಪರ ಭಿನ್ನಾಭಿಪ್ರಾಯ ಮರೆತು ಒಗ್ಗೂಡಿ ಶ್ರಮಿಸಬೇಕೆಂದು ಹೇಳಿದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಪಾಟೀಲ್, ಮಹಿಳಾ ಸಮಿತಿ ಜಿಲ್ಲಾಧ್ಯಕ್ಷೆ ಶಶಿಕಲಾ ಬೆಣ್ಣೆ, ತಾಲೂಕು ಅಧ್ಯಕ್ಷ ವಿಜಯಲಕ್ಷ್ಮೀ ದೇಸಾಯಿ, ಮುಖಂಡರಾದ ಶರಣಪ್ಪ ಮೇಟಿ, ಹೊನ್ನಪ್ಪ ಮೇಟಿ, ಗುಂಡಪ್ಪ ನಾಯಕ, ಸೋಮಶೇಖರ ಐದನಾಳ, ಮಲ್ಲಣ್ಣ ವಾರದ, ಪಾಮಯ್ಯ ಮುರಾರಿ, ಅಮರೇಶ ನಾಡಗೌಡ, ಮಹಾಂತೇಶ ಪಾಟೀಲ್, ಹನುಮಂತಪ್ಪ ಕಂದಗಲ್, ಮುದುಕಪ್ಪ ವಕೀಲ, ಸಂಗಣ್ಣ ಬಯ್ಯಪುರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts