More

    ಮುಖ್ಯರಸ್ತೆ 50 ಅಡಿ ವಿಸ್ತರಿಸಲು ಒತ್ತಾಯ

    ಲಿಂಗಸುಗೂರು: ಪಟ್ಟಣದ ಲಕ್ಷ್ಮೀ ದೇವಸ್ಥಾನದಿಂದ ಅಂಚೆ ಕಚೇರಿವರೆಗಿನ ಮುಖ್ಯರಸ್ತೆಯನ್ನು ಮಧ್ಯಭಾಗದಿಂದ ಎರಡೂ ಬದಿ 50 ಅಡಿ ವಿಸ್ತರಿಸಲು ಸಭೆಯಲ್ಲಿ ತೀರ್ಮಾನ ಕೈಗೊಂಡರೂ ಕಾಮಗಾರಿ ನಿಯಮಾನುಸಾರ ನಡೆಯುತ್ತಿಲ್ಲವೆಂದು ಆರೋಪಿಸಿ ಪುರಸಭೆ ಸದಸ್ಯರು ಎಸಿ ಅವಿನಾಶ ಶಿಂಧೆಗೆ ಬುಧವಾರ ಮನವಿ ಸಲ್ಲಿಸಿದರು.

    ಪುರಸಭೆ ಸಭಾಂಗಣದಲ್ಲಿ ಕಳೆದ ಏ.20 ಮತ್ತು ಜು.16ರಂದು ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ರಸ್ತೆ ಮಧ್ಯದಿಂದ ಎರಡೂ ಬದಿ 50 ಅಡಿ ವಿಸ್ತರಣೆಗೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದ್ದರು. ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಿದ ಪ್ರಕಾರ ರಸ್ತೆ ವಿಸ್ತರಣೆ ಕಾರ್ಯ, ಚರಂಡಿ, ಫುಟ್‌ಪಾತ್ ಕಾಮಗಾರಿ ಕೈಗೊಳ್ಳಬೇಕು. ಈ ಬಗ್ಗೆ ಪಿಡಬ್ಲುೃಡಿ ಇಲಾಖೆಗೆ ಮಾರ್ಗದರ್ಶನ ನೀಡಬೇಕೆಂದು ಕಳೆದ ವರ್ಷ ಡಿಸೆಂಬರ್‌ನಲ್ಲಿ ತಮಗೆ ಮನವಿ ಕೂಡ ಸಲ್ಲಿಸಲಾಗಿತ್ತು ಎಂದು ಎಸಿ ಗಮನಕ್ಕೆ ತಂದರು.

    ಈಗಾಗಲೇ ರಸ್ತೆ ಡಿವೈಡರ್ ಮಧ್ಯದಿಂದ ಎರಡೂ ಬದಿ 50 ಅಡಿ ಮಾರ್ಕೌಟ್ ಮಾಡಲಾಗಿತ್ತು. ಆದರೆ ಬಸ್ ನಿಲ್ದಾಣ ಎದುರುಗಡೆ 45 ಅಡಿ ಮಾತ್ರ ತೆರವುಗೊಳಿಸಿ ಹೊಸದಾಗಿ ವಿದ್ಯುತ್ ಕಂಬ ಅಳವಡಿಸಲಾಗಿದೆ. ರಸ್ತೆ ಕಾಮಗಾರಿ ಗುಣಮಟ್ಟ ಹಾಗೂ ತಾಂತ್ರಿಕ ಮಾನದಂಡಗಳ ಪ್ರಕಾರ ಕೂಡಿರದೆ ಕಳಪೆ ನಡೆದಿರುವುದು ಕಂಡು ಬರುತ್ತಿದೆ. ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಗುಣಮಟ್ಟದ ಮತ್ತು ಕ್ರೀಯಾ ಯೋಜನೆಯಂತೆ ಕಾಮಗಾರಿ ಕೈಗೊಳ್ಳಲು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕೆಂದು ಮನವಿ ಮಾಡಿದರು.

    ಪುರಸಭೆ ಸದಸ್ಯರಾದ ದೊಡ್ಡನಗೌಡ ಹೊಸಮನಿ, ಶಿವರಾಯ ದೇಗುಲಮಡಿ, ಚನ್ನಬಸವ ವಿಟ್ಲಾಪುರ, ಕುಪ್ಪಣ್ಣ ಕೊಡ್ಲಿ, ಮೌಲಾಸಾಬ್, ಪರಶುರಾಮ ಕೆಂಭಾವಿ, ಬಸವರಾಜ ಯತಗಲ್, ಎಂ.ಜಿಲಾನಿಪಾಶಾ, ಪುರಸಭೆ ಸಿಒ ಜಗನ್ನಾಥ ಕುಲಕರ್ಣಿ, ಜೆ.ಇ. ಆಸ್ಮಾ, ವ್ಯವಸ್ಥಾಪಕ ವೆಂಕಟೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts