ಲಿಂಗಸುಗೂರು: ತಾಲೂಕಿನ ಚಿಕ್ಕಉಪ್ಪೇರಿ ಗ್ರಾಮದಲ್ಲಿ 2009-10ನೇ ಸಾಲಿನ ಪ್ರವಾಹ ಸಂತ್ರಸ್ತರಿಗೆ ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ನಿರ್ಮಿಸಿದ ಆಸರೆ ಮನೆಗಳ 135 ಹಕ್ಕುಪತ್ರಗಳನ್ನು ಶಾಸಕ ಡಿ.ಎಸ್.ಹೂಲಗೇರಿ ಹಾಗೂ ಹಟ್ಟಿ ಚಿನ್ನದಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ್ ತಾಲೂಕು ಆಡಳಿತ ಸೌಧದಲ್ಲಿ ಭಾನುವಾರ ವಿತರಿಸಿದರು.
ಶಾಸಕ ಡಿ.ಎಸ್.ಹೂಲಗೇರಿ ಮಾತನಾಡಿ, ಚಿಕ್ಕಉಪ್ಪೇರಿ ಗ್ರಾಮದಲ್ಲಿ ದಶಕದ ಹಿಂದೆ ನಿರ್ಮಿಸಿರುವ ಆಸರೆ ಮನೆಗಳು ವಾಸಿಸಲು ಯೋಗ್ಯವಿಲ್ಲದಂತಹ ಪರಿಸ್ಥಿತಿಯಲ್ಲಿವೆ. ಮನೆಗಳ ಸುತ್ತ ಬೆಳೆದು ನಿಂತ ಜಾಲಿಗಿಡಗಳನ್ನು ಸ್ವಚ್ಛಗೊಳಿಸಿ ಹಕ್ಕುಪತ್ರ ವಿತರಿಸುವಂತೆ ಎಸಿ, ಡಿಸಿಗೆ ಮನವಿ ಮಾಡಿದ್ದರೂ ಗಮನಹರಿಸಿರಲಿಲ್ಲ ಎಂದು ದೂರಿದರು.
ವಸತಿ ಯೋಜನೆಯಡಿ ಸಂತ್ರಸ್ತರಿಗೆ ಸುಸಜ್ಜಿತ ಮನೆ ನಿರ್ಮಿಸಿ ಕೊಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಹಟ್ಟಿ ಚಿನ್ನದಗಣಿ ಕಂಪನಿ ಪ್ರತಿವರ್ಷ ಸರ್ಕಾರಕ್ಕೆ ಕೋಟ್ಯಂತರ ರೂ. ನೀಡುತ್ತಿದೆ. ಅದರ ಬದಲು ಕ್ಷೇತ್ರದ ಅಭಿವೃದ್ಧಿಗೆ ನೀಡಿದರೆ ಅನುಕೂಲವಾಗಲಿದೆ ಎಂದರು.
ಹಟ್ಟಿ ಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಸುಣಕಲ್, ಚಿಕ್ಕಉಪ್ಪೇರಿ, ಕಾಳಾಪುರ ಗ್ರಾಮಗಳ ಪ್ರವಾಹ ಸಂತ್ರಸ್ತರಿಗೆ ಹಟ್ಟಿ ಚಿನ್ನದಗಣಿ ಕಂಪನಿಯಿಂದ 4.70 ಕೋಟಿ ರೂ. ವೆಚ್ಚದಲ್ಲಿ ಆಸರೆ ಮನೆಗಳನ್ನು ನಿರ್ಮಿಸಲಾಗಿತ್ತು. ಆಸರೆ ಮನೆಗಳ ನಿರ್ಮಾಣಕ್ಕೆ ಜಮೀನು ನೀಡಿದವರಿಗೆ ಒಂದು ಆಸರೆ ಮನೆ ನೀಡಲು ಮೌಖಿಕ ಒಪ್ಪಂದವಾಗಿತ್ತು. ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದ್ದು, ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.