More

    ವೀರಭದ್ರನಂತೆ ಹೋರಾಟ ಮಾಡಬೇಕಿದೆ

    ಬೆಳಗಾವಿ: ಪ್ರಸ್ತುತ ದಿನಗಳಲ್ಲಿ ವೀರಶೈವ ಲಿಂಗಾಯತ ಸಮುದಾಯ ಹೀನಾಯ ಸ್ಥಿತಿಗೆ ಬಂದಿದೆ. ಮುಂದಿನ ದಿನಗಳಲ್ಲೂ ಈ ಪರಿಸ್ಥಿತಿ ಬದಲಾಗದಿದ್ದರೆ ಸುರಕ್ಷತೆಯ ದೊಡ್ಡ ಪ್ರಶ್ನೆ ಕಾಡಲಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಬೇಸರ ವ್ಯಕ್ತಪಡಿಸಿದರು.

    ನಗರದ ಗಾಂಧಿಭವನದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ಜಯಂತ್ಯುತ್ಸವ ಮತ್ತು ವೀರಶೈವ ಲಿಂಗಾಯತ ಸಮುದಾಯಕ್ಕೆ ಕೇಂದ್ರದ ಒಬಿಸಿ ಮೀಸಲಾತಿ ಹಕ್ಕೊತ್ತಾಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವೀರಭದ್ರನಂತೆ ನಾವು ವೀರರಾಗಿ ಹೋರಾಡದಿದ್ದರೆ, ನಾವು ಅಭದ್ರರಾಗಲಿದ್ದೇವೆ. ಹಾಗಾಗಿ ವೀರರಾಗುವ ಕುರಿತು ಇಂದೇ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

    ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪಪಂಗಡಗಳು ರಾಜ್ಯದ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಆದರೆ, ಕೇಂದ್ರ ಸರ್ಕಾರದ ಪಟ್ಟಿಯಲ್ಲಿ ಕೇವಲ 17 ಉಪ ಪಂಗಡಗಳಷ್ಟೇ ಸೇರ್ಪಡೆಯಾಗಿವೆ. ಇನ್ನುಳಿದ ಉಪ ಪಂಗಡಗಳನ್ನು ಕೇಂದ್ರದ ಪಟ್ಟಿಯಲ್ಲಿ ಸೇರಿಸಬೇಕು. ಈಗ ನಮಗೆ ಆಗಿರುವ ಅನ್ಯಾಯ ಸರಿಪಡಿಸಲೇಬೇಕು. ನಮ್ಮ ಸಮುದಾಯ ಬಲಿಷ್ಠವಾದರೆ, ಸಮಾಜದ ಮಠಗಳು ಬಲಿಷ್ಠವಾಗುತ್ತವೆ. ಒಂದು ವೇಳೆ ಸಮುದಾಯ ಹಿಂದೆ ಬಿದ್ದರೆ, ಮಠಮಾನ್ಯಗಳಿಗೂ ಹಿನ್ನಡೆಯಾಗಲಿದೆ. ಈ ಬಗ್ಗೆ ಎಲ್ಲರೂ ಆಲೋಚಿಸಬೇಕು ಎಂದರು.

    ನ್ಯಾ. ಬಿ.ಪಿ. ಮಂಡಲ ಆಯೋಗದ ವರದಿ ಜಾರಿಗೊಳಿಸುವ ವೇಳೆ, ಯಾವುದೋ ಕಾರಣಕ್ಕಾಗಿ ನಮ್ಮ ಸಮುದಾಯದ ಸೇರ್ಪಡೆ ಬಿಟ್ಟು ಹೋಗಿರಬಹುದು. ಆದರೆ, ಬೇರೆ ಸಮುದಾಯಗಳನ್ನು ಯಾವ ಮಾನದಂಡದ ಆಧಾರದಲ್ಲಿ ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಿದರೋ, ಆ ಎಲ್ಲ ಮಾನದಂಡಗಳು ನಮ್ಮ ಸಮುದಾಯಕ್ಕೂ ಅನ್ವಯವಾಗುತ್ತವೆ. ಹಾಗಾಗಿ, ಅವುಗಳನ್ನು ಸೇರಿಸುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು.

    ನ್ಯಾ.ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಪ್ರಕಾರ, ಬಲಿಜ, ಒಕ್ಕಲಿಗ, ಜಾಟ ಸಮುದಾಯಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲಾಗಿದೆ. ನಮ್ಮ ಸಮುದಾಯದ ಇವೆಲ್ಲ ಸಮುದಾಯಗಳಿಗಿಂತ ಕನಿಷ್ಠ ಮಟ್ಟದಲ್ಲಿದೆ. ಹೀಗಿದ್ದರೂ ನಮ್ಮ ಸಮುದಾಯ ಕಡೆಗಣಿಸಿ ಅನ್ಯಾಯ ಮಾಡಲಾಗಿದೆ. ಹಾಗಾಗಿ ನಮ್ಮನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕೆಂಬ ಶಿಾರಸನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಮಾಡಬೇಕು. ಒಂದು ವೇಳೆ ನಮ್ಮನ್ನು ಕಡೆಗಣಿಸಿದರೆ ವ್ಯತಿರಿಕ್ತ ಪರಿಣಾಮ ಎದುರಿಸಲು ಸಿದ್ಧವಾಗಬೇಕು ಎಂದು ಎಚ್ಚರಿಕೆ ಕೊಟ್ಟರು.

    ಶಿರಹಟ್ಟಿಯ ಜಗದ್ಗುರು ಕೀರ ದಿಂಗಾಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮವರನ್ನು ನಾವು ರಕ್ಷಣೆ ಮಾಡಿಕೊಳ್ಳಲಾಗದಷ್ಟು ದುರ್ಬಲರಾಗುತ್ತಿದ್ದೇವೆ. ಇದನ್ನು ಸಮಾಜದ ಜನರು ಅರ್ಥ ಮಾಡಿಕೊಳ್ಳಬೇಕು. ಈ ಕುರಿತು ಸಮಾಜದಲ್ಲಿ ಜಾಗತಿ ಮೂಡಿಸುವ ಕೆಲಸ ಮಾಡಬೇಕಿದೆ. ಮುಖ್ಯವಾಗಿ ಹೆಣ್ಣು ಮಕ್ಕಳೂ ಈ ಜಾಗತಿ ಕಾಯಕಕ್ಕೆ ಮುಂದಾಗಬೇಕು. ನಿಮ್ಮ ಪತಿ, ಮಕ್ಕಳನ್ನು ಸಮಾಜದ ಕಾರ್ಯಕ್ಕೆ ಕಳುಹಿಸಬೇಕು ಎಂದರು.

    ಕರ್ನಾಟಕ ಮಾಹಿತಿ ಹಕ್ಕು ಆಯೋಗದ ನಿವತ್ತ ಆಯುಕ್ತ ಡಾ.ಶೇಖರ ಸಜ್ಜನರ ಮಾತನಾಡಿ, ಕೇಂದ್ರದ ಒಬಿಸಿ ಪಟ್ಟಿಯಲ್ಲಿ 1990ರಲ್ಲೇ ಜಾರಿಗೆ ಬಂದಂತೆ ದೇಶದ ಎಲ್ಲ ಜಾತಿಗಳ ಬಡವರಿಗೆ ಸೌಲಭ್ಯ ಸಿಗುತ್ತಿವೆ. ದೇಶದ 142 ಕೋಟಿ ಜನಸಂಖ್ಯೆ ಪೈಕಿ 58.40 ಕೋಟಿ ಜನರು ಒಬಿಸಿ ಪಟ್ಟಿಯ ವ್ಯಾಪ್ತಿಗೆ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಒಬಿಸಿ ಪಟ್ಟಿಗೆ ಸೇರದಿರುವ ನಮ್ಮ ಸಮುದಾಯದ ಉಪ ಪಂಗಡಗಳನ್ನು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ, ಕೇಂದ್ರಕ್ಕೆ ಶಿಾರಸು ಮಾಡಿ ಆ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.

    ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುರಗೋಡದದ ನೀಲಕಂಠ ಸ್ವಾಮೀಜಿ ಸೇರಿ ನಾಡಿನ ಹಲವು ಮಠಾಧೀಶರು, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಶಾಸಕರಾದ ಡಾ.ವಿ.ಐ.ಪಾಟೀಲ, ಮಹಾದೇವಪ್ಪ ಯಾದವಾಡ, ಮಹಾಂತೇಶ ದೊಡಗೌಡರ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಅಶೋಕ ಪೂಜಾರಿ, ವಿನಯ ನಾವಲಗಟ್ಟಿ, ವಿರೂಪಾಕ್ಷಿ ಮಾಮನಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ, ಸುಭಾಷ ಪಾಟೀಲ, ವಿವಿಧ ಮಠಾಧೀಶರು ಇತರರಿದ್ದರು.

    ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಉಪಪಂಗಡಗಳ ಸೇರ್ಪಡೆಯಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಉದ್ಯೋಗ, ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ಸಿಗುತ್ತವೆ. ರಾಜ್ಯ ಸರ್ಕಾರ ಕೂಡಲೇ ವೀರಶೈವ ಲಿಂಗಾಯತರನ್ನು ಒಬಿಸಿ ವರ್ಗಕ್ಕೆ ಸೇರಿಸುವಂತೆ ಶಿಾರಸು ಮಾಡಲು ಹಕ್ಕೊತ್ತಾಯ ಮಾಡುತ್ತೇವೆ.
    | ಮಹಾಂತೇಶ ಕವಟಗಿಮಠ, ವಿಧಾನ ಪರಿಷತ್ ಮಾಜಿ ಸದಸ್ಯ

    ವೀರಶೈವ ಲಿಂಗಾಯತ ಸಮುದಾಯದ ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕಿದೆ. ಆ ನಿಟ್ಟಿನಲ್ಲಿ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಉಪ ಪಂಗಡಗಳ ಸೇರ್ಪಡೆಗೆ ನಾವೆಲ್ಲ ಪ್ರಯತ್ನ ಮಾಡಬೇಕು.
    | ಮಹಾಂತೇಶ ಕೌಜಲಗಿ, ಶಾಸಕ

    ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಬೇಕು. ಈ ಕುರಿತು ರಾಜ್ಯ ಸರ್ಕಾರವು ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಸಮುದಾಯದ ಹಿತ ಕಾಯಲು ಸರ್ಕಾರಗಳು ಬದ್ಧವಾಗಬೇಕು.
    | ಉಮೇಶ ಬಾಳಿ ವೀರಶೈವ ಲಿಂಗಾಯತ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts