More

    ವಿದ್ಯೆ ಜತೆ ಬದುಕಿನ ಪಾಠವನ್ನೂ ಕಲಿಸಬೇಕು

    ಸಾಗರ: ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲ ಹಂತಗಳಲ್ಲಿ ಸಮರ್ಥವಾಗಿ ಸ್ಪರ್ಧೆ ನೀಡುವ ಕೌಶಲವನ್ನು ಮಕ್ಕಳಿಗೆ ಕಲಿಸಬೇಕು ಎಂದು ಶ್ರೀ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ತಾಲೂಕಿನ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಣಿವಾರದ ಕೊಡಚಾದ್ರಿ ಆಂಗ್ಲ ಮಾಧ್ಯಮ ಶಾಲೆ ಶೇ. 100 ಫಲಿತಾಂಶ ಪಡೆದಿರುವ ಅಂಗವಾಗಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯೆಯ ಜತೆಗೆ ಬದುಕಿನ ಪಾಠ ಕಲಿಸುವ ಕೆಲಸ ಆಗಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮೌಲ್ಯ ಶಿಕ್ಷಣ ಅಗತ್ಯ ಎಂದು ತಿಳಿಸಿದರು.
    ಕೊಡಚಾದ್ರಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣದ ಜತೆ ಕರಾಟೆ, ಸಂಗೀತ, ಭರತನಾಟ್ಯ, ಈಜು, ಯೋಗಾಸನ, ಮಲ್ಲಗಂಬ, ಯಕ್ಷಗಾನ ಹೀಗೆ ವಿವಿಧ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಕಲಿಕಾ ಬೌದ್ಧಿಕ ಮಟ್ಟ ಹೆಚ್ಚಿಸಿದರೆ ಮಕ್ಕಳ ಮನೋಭಾವ ಸದೃಢಗೊಳ್ಳುತ್ತದೆ. ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ಯಶಸ್ಸು ಕಾಣಬೇಕು ಎಂದು ಸಲಹೆ ನೀಡಿದರು.
    ಕೊಡಚಾದ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಆರ್.ಪ್ರಕಾಶ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ರಾಜ್ಯದ ವಿವಿಧೆಡೆಯಿಂದ ಮಕ್ಕಳು ಆಗಮಿಸುತ್ತಾರೆ. ಪಾಲಕರು ಶಾಲೆಯ ಬಗ್ಗೆ ವಿಶೇಷ ಗೌರವ ಹೊಂದಿದ್ದಾರೆ. ಮಕ್ಕಳು ಶೇ.100 ಫಲಿತಾಂಶ ತರುತ್ತಿರುವುದು ಸಂಸ್ಥೆಯ ಗೌರವ ಹೆಚ್ಚಿಸುತ್ತಿದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
    ಕೋಳೂರು ಗ್ರಾಪಂ ಅಧ್ಯಕ್ಷ ನವೀನ್ ಗೌಡ, ವಿರೂಪಾ ಗೌಡ, ಗುರುದತ್ತ, ಕೀರ್ತಿ, ಅಪೇಕ್ಷಾ, ತ್ರಿಷಾ, ಮುಖ್ಯಶಿಕ್ಷಕಿ ನಂದಾ, ರಾಜೇಂದ್ರ ಆವಿನಹಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts